ತಮ್ಮ 10000 ಕೋಟಿ ಮೌಲ್ಯದ ಪತಂಜಲಿ ಸಮೂಹದ ಉಸ್ತುವಾರಿ ನೋಡಿಕೊಳ್ಳುವ ಸಲುವಾಗಿ ಯೋಗಗುರು ಬಾಬಾ ರಾಮದೇವ್ ಅವರು, ತಮ್ಮ 500 ಸಾಧುಗಳ ಶಿಷ್ಯಗಣವನ್ನು ತಯಾರಿ ಮಾಡುತ್ತಿದ್ದಾರೆ. ಅದಕ್ಕೆಂದೇ ವಿಶೇಷ ತರಬೇತಿ ನೀಡುತ್ತಿರುವುದಾಗಿ ಬಾಬಾ ರಾಮದೇವ್ ಹೇಳಿಕೊಂಡಿದ್ದಾರೆ.
ನವದೆಹಲಿ(ಅ.01): ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಉತ್ಪನ್ನಗಳು ಈಗ ಭಾರಿ ಜನಪ್ರಿಯವಾಗಿವೆ. ಕೇವಲ ಬಾಬಾ ರಾಮದೇವ್ ಅವರಿಗಾಗಲಿ ಅಥವಾ ಪತಂಜಲಿ ಉತ್ಪನ್ನಗಳ ಉಸ್ತುವಾರಿ ಹೊತ್ತಿರುವ ಅವರ ಶಿಷ್ಯ ಆಚಾರ್ಯ ಬಾಲಕೃಷ್ಣ ಅವರಿಗಾಗಲಿ 10 ಸಾವಿರ ಕೋಟಿ ರು. ಮೌಲ್ಯದ ಈ ಕಂಪನಿಯ ಉಸ್ತುವಾರಿ ನೋಡಿಕೊಳ್ಳಲು ಆಗದು. ಅದಕ್ಕೆಂದೇ ಅವರು ತಮ್ಮ 500 ಸಾಧುಗಳ ಶಿಷ್ಯಗಣವನ್ನು ಪತಂಜಲಿ ಉತ್ಪನ್ನಗಳ ಉಸ್ತುವಾರಿ ನೋಡಿಕೊಳ್ಳಲು ತರಬೇತಿ ನೀಡುತ್ತಿದ್ದಾರೆ. ಬಾಬಾ ರಾಮದೇವ್ ಅವರೇ ಈ ವಿಷಯವನ್ನು ಇಲ್ಲಿ ತಿಳಿಸಿದರು.
‘ನಮ್ಮ ಸಮೂಹದ ‘ಉತ್ತರಾಧಿಕಾತ್ವ’ಕ್ಕಾಗಿ 500 ಸಾಧುಗಳ ತಂಡಕ್ಕೆ ತರಬೇತಿ ನೀಡುತ್ತಿದ್ದೇನೆ’ ಎಂದಿದ್ದಾರೆ. ಸದ್ಯ 10 ಸಾವಿರ ಕೋಟಿ ರು. ಮೌಲ್ಯದ ಪತಂಜಲಿ ಸಮೂಹವನ್ನು 4 ವರ್ಷದಲ್ಲಿ 1 ಲಕ್ಷ ಕೋಟಿ ರು. ಮೌಲ್ಯದ ಉದ್ದಿಮೆಯನ್ನಾಗಿ ಮಾಡಲು ಯತ್ನಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಪ್ಯಾಂಟ್, ಜೀನ್ಸು, ಕುರ್ತಾ, ಅಂಗಿ, ಕೋಟು, ಕ್ರೀಡಾ ದಿರಿಸು ಹಾಗೂ ಯೋಗ ದಿರಿಸುಗಳನ್ನು ಉತ್ಪಾದಿಸುವ ಗುರಿ ಕೂಡ ಇದೆ ಎಂದರು.
