ನವದೆಹಲಿ[ಜು.02]: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ನೈತಿಕ ಹೊಣೆ ಹೊತ್ತು, ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಹಿಂಪಡೆಯಲ್ಲ ಎಂದು ಹಠಕ್ಕೆ ಬಿದ್ದಿರುವ ರಾಹುಲ್‌ ಗಾಂಧಿ ಮನವೊಲಿಸಲು ಇದೀಗ ಪಕ್ಷದ ನಾಯಕರು ಎಮೋಷನಲ್‌ ಬ್ಲ್ಯಾಕ್‌ಮೇಲ್‌ (ಭಾವನಾತ್ಮಕ ಒತ್ತಡ) ತಂತ್ರ ಆರಂಭಿಸಿದ್ದಾರೆ.

ಸೋಮವಾರ ದೆಹಲಿಯಲ್ಲಿ ಕಾಂಗ್ರೆಸ್‌ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ರಾಹುಲ್‌ ಗಾಂಧಿ ಸಭೆಯೊಂದನ್ನು ನಡೆಸಿದರು. ಈ ಸಭೆಯಲ್ಲಿ ವಿವಿಧ ರಾಜ್ಯಗಳ ಸಿಎಂಗಳು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಏನು ಕಾರಣ ಎಂಬ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಜೊತೆಗೆ ಈ ವಿಷಯದಲ್ಲಿ ಕಾರ್ಯಕರ್ತರ ಅಭಿಪ್ರಾಯವನ್ನು ರಾಹುಲ್‌ಗೆ ತಲುಪಿಸಿದರು.

ಇದೇ ವೇಳೆ ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲಾ ನಾಯಕರು, ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಹಿಂಪಡೆಯುವಂತೆ ರಾಹುಲ್‌ಗೆ ಒತ್ತಾಯಿಸಿದರು. ಆದರೆ ಈ ಬೇಡಿಕೆ ತಿರಸ್ಕರಿಸಿದ ರಾಹುಲ್‌, ನನ್ನ ರಾಜೀನಾಮೆ ಇಂಗಿತವನ್ನು ಈಗಾಗಲೇ ಸಿಡಬ್ಲ್ಯುಸಿಗೆ ತಿಳಿಸಿದ್ದೇನೆ. ಅದರಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು ಎನ್ನಲಾಗಿದೆ.

ಈ ವೇಳೆ ತಾವು ಕೂಡಾ ಹಿಂದೆ ಸರಿಯಲು ನಿರಾಕರಿಸಿದ ಸಿಎಂಗಳು, ಒಂದು ವೇಳೆ ನೀವು ರಾಜೀನಾಮೆ ಹಿಂದಕ್ಕೆ ಪಡೆಯದೇ ಇದ್ದಲ್ಲಿ ನಾವು ಕೂಡಾ ರಾಜೀನಾಮೆ ನೀಡುವುದು ಅನಿವಾರ್ಯವಾಗುತ್ತದೆ ಎಂದು ರಾಹುಲ್‌ ಮೇಲೆ ಭಾವನಾತ್ಮಕ ಒತ್ತಡ ಹೇರಿದರು ಎಂದು ಮೂಲಗಳು ತಿಳಿಸಿವೆ.

ಇನ್ನು ಸಭೆ ಬಳಿಕ ಮಾತನಾಡಿದ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಅವರು, ‘ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಹೃದಯದಿಂದ ಹೃದಯಕ್ಕೆ ಸಮಾಲೋಚನೆ ನಡೆಯಿತು. ರಾಷ್ಟಾ್ರದ್ಯಂತ ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ರಾಹುಲ್‌ ಗಮನಕ್ಕೆ ತಂದಿದ್ದೇವೆ. ಅಲ್ಲದೆ, ಪಕ್ಷದ ನಾಯಕತ್ವದಲ್ಲೇ ಮುಂದುವರಿಯಲು ಕೇಳಿದ್ದೇವೆ. ಈ ಬಗ್ಗೆ ರಾಹುಲ್‌ ಗಾಂಧಿ ಅವರು ಧನಾತ್ಮಕ ಹಾಗೂ ಸರಿಯಾದ ನಿರ್ಧಾರ ಪ್ರಕಟಿಸುವ ಭರವಸೆಯಿದೆ’ ಎಂದರು.