ಯಾರಾದಾರೂ ಎಂ.ಬಿ. ಪಾಟೀಲರ ಮನೆಗೆ ಹೋಗುವುದು ಗೊತ್ತಾದರೆ ಅವರ ವಿರುದ್ಧ ಕ್ರಮ: ಬಿಜೆಪಿ ಮುಖಂಡರಿಗೆ ಎಚ್ಚರಿಕೆ ಬಿಎಸ್‌ವೈ ಭಾಷಣದ ವೇಳೆ ಮೈಕ್ ಕಿತ್ತೆಸೆದು ಗಲಾಟೆ
ವಿಜಯಪುರ/ಬಾಗಲಕೋಟೆ: ನೀರಾವರಿ ಸಚಿವ ಎಂ.ಬಿ. ಪಾಟೀಲ ವಿರುದ್ಧ ಯಡಿಯೂರಪ್ಪ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಪಾಟೀಲರ ಸ್ವ ಕ್ಷೇತ್ರ ಬಬಲೇಶ್ವರದಲ್ಲಿ ನಡೆದ ‘ಬಿಜೆಪಿ ಪರಿವರ್ತನಾ ರ್ಯಾಲಿ’ಯಲ್ಲಿ ಶನಿವಾರ ಭಾರೀ ಜನಸೇರಿಸಿ ಶಕ್ತಿ ಪ್ರದರ್ಶನ ನಡೆಸಿದ ಬಿಎಸ್ವೈ ನೀರಾವರಿ ಸಚಿವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಪ್ರತಿ ಸಾರ್ವಜನಿಕ ಸಭೆಯಲ್ಲಿ ನಿಮ್ಮ ಮಾನ ಹರಾಜು ಹಾಕುತ್ತೇನೆ, ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ನೀರಾವರಿ ಹಗರಣಗಳನ್ನು ಬಯಲಿಗೆಳೆಯದಿದ್ದರೆ ನನ್ನನ್ನು ಯಡಿಯೂರಪ್ಪ ಎಂದು ಕರೆಯಲೇ ಬೇಡಿ’ಎಂದು ಗುಡುಗಿದ್ದಾರೆ. ಬಬಲೇಶ್ವರದ ತಿಕೋಟಾದಲ್ಲಿ ಪರಿವರ್ತನಾ ರ್ಯಾಲಿಯ ಭಾಗವಾಗಿ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಇನ್ನು ಮುಂದೆ ಹೊಂದಾಣಿಕೆ ರಾಜಕಾರಣವನ್ನು ನಾನು ಸಹಿಸಲ್ಲ, ನಮ್ಮವರು ಯಾರಾದಾರೂ ಎಂ.ಬಿ. ಪಾಟೀಲರ ಮನೆಗೆ ಹೋಗುವುದು ಗೊತ್ತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಿದರು.
ಅನೇಕರು ಬಿಜೆಪಿಗೆಳ: ಬಿಜೆಪಿ ಸೇರ್ಪಡೆಗೆ ಉತ್ಸುಕರಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ನ ಅನೇಕ ಮುಖಂಡರು ತಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಂಕ್ರಮಣದ ಬಳಿಕ ಅವರ ಹೆಸರು ಬಹಿರಂಗಪಡಿಸುವೆ ಎಂದು ಯಡಿಯೂರಪ್ಪ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಸದಸ್ಯರ ಮೇಲಿನ ಆರೋಪಗಳ ದಾಖಲೆಗಳನ್ನು ಪಕ್ಷದ ನಿರ್ಣಯದಂತೆ ಒಂದೊಂದಾಗಿ ಬಿಡುಗಡೆ ಮಾಡಲಾಗುವುದು. ಏಕಾಏಕಿ 80 ಹಗರಣಗಳ ದಾಖಲೆ ನೀಡಿದರೆ, ಒಂದೇ ದಿನ ಪತ್ರಿಕೆಗೆ ಬಂದು ಹೋಗುತ್ತದೆ ಎಂದು ಇದೇ ವೇಳೆ ಹೇಳಿದರು.
ದಾಖಲೆ ಬಿಡುಗಡೆ ಆಗಲಿಲ್ಲ: ತಿಕೋಟದ ರ್ಯಾಲಿಯಲ್ಲಿ ನೀರಾವರಿ ಅಕ್ರಮಗಳ ದಾಖಲೆ ಬಿಡುಗಡೆ ಮಾಡಿ ಎಂ.ಬಿ. ಪಾಟೀಲ ಅವರ ಬಣ್ಣ ಬಯಲು ಮಾಡುವುದಾಗಿ ಹೇಳಿದ್ದರು. ಆದರೆ, ದಾಖಲೆಗಳು ಬಿಡುಗಡೆಯಾಗಲಿಲ್ಲ.
ಕಳೆದ ಹಲವು ದಿನಗಳಿಂದ ನನ್ನ ಮೇಲೆ ಹಗರಣಗಳ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಡಂಗುರ ಸಾರಿದ ಯಡಿಯೂರಪ್ಪ ಅವರು ಈಗ ಬಟ್ಟೆ ಹಾವು ಬಿಟ್ಟಿದ್ದಾರೆ. ನಾನು ಯಾವುದೇ ಹಗರಣಗಳನ್ನೇ ಮಾಡಿಲ್ಲ, ಇನ್ನು ದಾಖಲೆ ಬಿಡುಗಡೆ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಎಂ.ಬಿ. ಪಾಟೀಲ ನೀರಾವರಿ ಸಚಿವ
ಬಿಎಸ್ವೈ ಭಾಷಣದ ವೇಳೆ ಮೈಕ್ ಕಿತ್ತೆಸೆದು ಗಲಾಟೆ:
ಇಂಡಿ: ಪರಿವರ್ತನಾ ರ್ಯಾಲಿ ವೇಳೆ ಬಿಎಸ್ವೈ ಭಾಷಣ ಮಾಡುತ್ತಿದ್ದಾಗಲೇ ಅವರ ಮೈಕ್ ಅನ್ನು ಕಿತ್ತು ಹಾಕಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ನಡೆದಿದೆ. ಚಡಚಣದಿಂದ ಆಗಮಿಸಿದ ರ್ಯಾಲಿಗೆ ಇಂಡಿಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ನಂತರ ಸಮಾವೇಶದಲ್ಲಿ ಬಿಎಸ್ವೈ ಮಾತನಾಡುವಾಗ, ಇಲ್ಲಿ ಅಂದಾಜು 30ರಿಂದ 40 ಸಾವಿರ ಸಂಖ್ಯೆ ಸೇರಿರುವುದಕ್ಕೆ ರವಿಕಾಂತ್ ಪಾಟೀಲ್ ಅವರೇ ಕಾರಣರು ಎಂದರು. ಇದರಿಂದ ಕೆರಳಿದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ವೇದಿಕೆ ಮೇಲೆಯೇ ಆಗಮಿಸಿ ಆಕ್ಷೇಪ ವ್ಯಕ್ತಪಡಿಸಿದರು. ಮೈಕ್ ಕಿತ್ತೆಸೆದರು. ವಾಗ್ವಾದಕ್ಕೂ ಇಳಿದರು. ಜತೆಗೆ ವೇದಿಕೆ ಕೆಳಗಿದ್ದ ಕೆಲ ಬಿಜೆಪಿ ಕಾರ್ಯಕರ್ತರು ಮಣ್ಣು ತೂರಿದರು. ಬಳಿಕ ಪೊಲೀರು ಪರಿಸ್ಥಿತಿ ತಹಬದಿಗೆ ತಂದರು.
