ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಣೆ | ಸೋಲಿಗೆ ಎಫ್‌ಬಿಐ ನಿರ್ದೇಶಕ ಕಾರಣವೆಂದ ಹಿಲರಿ
ವಾಷಿಂಗ್ಟನ್ (ನ.14): ಅಮೆರಿಕದ ಅಧ್ಯಕ್ಷ ಚುನಾವಣೆ ಪ್ರಚಾರದ ವೇಳೆ ವಲಸಿಗರನ್ನು ಅಮೆರಿಕದಿಂದ ಹೊರ ಹಾಕುವುದಾಗಿ ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದರು. ಇದೀಗ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅವರು ತಮ್ಮ ಪಕ್ಷದ ಕಠಿಣ ನಿಲುವು ಜಾರಿ ಮಾಡಲು ಮುಂದಾಗಿದ್ದಾರೆ. ಸಮರ್ಪಕ ದಾಖಲೆಗಳನ್ನು ಹೊಂದಿರದ 30 ಲಕ್ಷ ವಲಸೆಗಾರರನ್ನು ಅಮೆರಿಕದಿಂದ ಹೊರಹಾಕುವ ಮಾತುಗಳನ್ನು ಭಾನುವಾರ ಅವರು ಆಡಿದ್ದಾರೆ.
‘‘ಅಪರಾಧ ಮತ್ತು ಅಪರಾಧ ಹಿನ್ನೆಲೆ ಇರುವವರು, ಗ್ಯಾಂಗ್ ಸದಸ್ಯರು, ಡ್ರಗ್ ಜಾಲದಲ್ಲಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ,''ಎಂದು ಅವರು ‘ಸಿಬಿಎಸ್ ನ್ಯೂಸ್'ಗೆ ತಿಳಿಸಿದ್ದಾರೆ. ಈ ನಡುವೆ ಟ್ರಂಪ್ ಗೆದ್ದ ಬಳಿಕ 200 ಅಧಿಕ ಜನಾಂಗೀಯ ದ್ವೇಷದ ಪ್ರಕರಣಗಳು ದಾಖಲಾಗಿವೆ ಎಂದು ಸದರ್ನ್ ಪಾರ್ಟಿ ಲಾ ಸೆಂಟರ್ ಅಧ್ಯಕ್ಷ ರಿಚರ್ಡ್ ಕೊಹೆನ್ ಹೇಳಿದ್ದಾರೆ.
ಎಫ್ಬಿಐ ನಿರ್ದೇಶಕ ಕಾರಣ ತಮ್ಮ ಸೋಲಿಗೆ ಎಫ್ಬಿಐ ನಿರ್ದೇಶಕ ಜೇಮ್ಸ್ ಕೊಮಿ ಕಾರಣ ಎಂದು ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಪರಾಜಿತ ಅಭ್ಯರ್ಥಿ ಹಿಲರಿ ಕ್ಲಿಂಟನ್ ಆಪಾದಿಸಿದ್ದಾರೆ. ಚುನಾವಣೆಗೆ ಕೆಲವೇ ದಿನಗಳಿರುವಾಗ ಇಮೇಲ್ ಖಾತೆ ತನಿಖೆಯ ನಿರ್ಧಾರ ಪುನರ್ ಪರಿಶೀಲಿಸಿರುವುದು ಟ್ರಂಪ್ ವಿರುದ್ಧ ಸೋಲಲು ಕಾರಣ ಎಂದಿದ್ದಾರೆ.
