ಬೆಂಗಳೂರು [ಜು.08] : ಕೊಟ್ಟ ಬೆಂಬಲ ವಾಪಸ್ ಪಡೆಯುವ ಚಾನ್ಸೇ ಇಲ್ಲ ಎಂದು ಕೊಳ್ಳೆಗಾಲ  BSP  ಶಾಸಕ ಎನ್. ಮಹೇಶ್ ಹೇಳಿದ್ದಾರೆ. 

ನಮ್ಮ ನಾಯಕಿ ಮಾಯಾವತಿ ಏನು ಹೇಳುತ್ತಾರೋ ಅದೇ ನಮಗೆ ಫೈನಲ್ ಎಂದಿರುವ ಮಹೇಶ್, ಲೋಕಸಭಾ ಚುನಾವಣೆ ಬಳಿಕ ಬೆಂಬಲ ಮುಂದುವರಿಸುವಂತೆ ಹೆಳಿದ್ದರು. ಅದರಂತೆ  ತಾವು ಬೆಂಬಲ ಮುಂದುವರಿಸುತ್ತಿರುವುದಾಗಿ  ಹೇಳಿದರು.  

ನಾನು ಸ್ವತಂತ್ರ ಶಾಸಕನಲ್ಲ, ನಾ‌ನು ರಾಷ್ಟ್ರೀಯ ಪಕ್ಷದ ಸದಸ್ಯನಾಗಿದ್ದು, ಪಕ್ಷದ ನಿರ್ದೇಶನ ,ನೆಲೆಗಟ್ಟಿನ ಮೇಲೆ ಕಾರ್ಯನಿರ್ವಹಿಸಬೇಕು. ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ನಿರ್ದೇಶನದಂತೆ ಈ ಕ್ಷಣಕ್ಕೆ ಬೆಂಬಲ ಕೊಟ್ಟಿದ್ದೇನೆ. ಮುಂದೆಯೂ ಬೆಂಬಲ ಮುಂದುವರಿಯಲಿದೆ ಎಂದರು.   

ಸದ್ಯದ ಎಲ್ಲಾ ಬೆಳವಣಿಗೆಗಳು ಬಿಎಸ್ ಪಿ ಮುಖಂಡೆ ಮಾಯಾವತಿ ಗಮನಕ್ಕಿದೆ. ಸದ್ಯ ರಾಜ್ಯ ರಾಜಕಾರಣ ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು, ಬಿಜೆಪಿ ಹಾಗೂ ಮೈತ್ರಿ ಪಕ್ಷ ಎರಡೂ ಸ್ಟ್ರಾಂಗ್ ಆಗಿವೆ. ಬಿಜೆಪಿ ಅಧಿಕಾರದ ಲಾಲಸೆ ತೋರಿಸುತ್ತಿದ್ದರೆ, ಅತ್ತ ಮೈತ್ರಿ ಸರ್ಕಾರ ಎಲ್ಲಾ ಸಚಿವರ ರಾಜಿನಾಮೆ ಕೊಡಿಸಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದೆ. ರಾಜೀನಾಮೆ ನೀಡಿರುವವರು ಅಭಿವೃದ್ಧಿ, ಜನಪರ ಉದ್ದೇಶ ಇರಿಸಿಕೊಂಡು ರಾಜೀನಾಮೆ ನೀಡಿಲ್ಲ. ಸೈದ್ಧಾಂತಿಕ ವಿಚಾರವಾಹಿಯಾದ ಯಾವೊಬ್ಬ ಶಾಸಕನೂ ರಾಜೀನಾಮೆ ನೀಡಿಲ್ಲ. ಎಲ್ಲರೂ ಸ್ವಾರ್ಥ, ಅಧಿಕಾರದ ಆಸೆಗೆ ಬಿದ್ದು ರಾಜೀನಾಮೆ ನೀಡಿದ್ದಾರೆ. ಬಂಡೆದ್ದರೆಲ್ಲರಿಗೂ ಸಚಿವ ಸ್ಥಾನ ನೀಡಿದರೆ ಸರ್ಕಾರ ಮುನ್ನಡೆಸುವುದು ಕಷ್ಟ ಸಾಧ್ಯ ಎಂದರು. 

ಕರ್ನಾಟಕ ರಾಜಕೀಯದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಅನುದಾನದ ವಿಚಾರವಾಗಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮಹೇಶ್ , ಈ ಬಗ್ಗೆ ಅತೃಪ್ತಿ ಇದೆ. ಆದರೆ ನಾನು ರಾಜೀನಾಮೆಗೆ ಮುಂದಾಗಿಲ್ಲ. ಎಲ್ಲವೂ ಕೂಡ ಚರ್ಚೆ ಮೂಲಕ ಬಗೆಹರಿಸುವ ವಿಚಾರ. ಮುಂದೇನಾಗುತ್ತದೆಯೋ ಕಾದು ನೋಡೋಣ ಎಂದು ಹೇಳಿದ್ದಾರೆ.