ತಮ್ಮ ಸಹೋದರ ಸಿಎಂ ಆಗುವವರೆಗೂ ಕೂಡ ತಾವು ವಿಶ್ರಾಂತಿ ಪಡೆಯುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ನೀಡಿದ ಹೇಳಿಕೆ ಸಂಬಂಧ ಇದೀಗ ಸ್ವತಃ ಶಾಸಕ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಈ ಹೇಳಿಕೆ ಮುಂದಿನ 10 ವರ್ಷಗಳಿಗೆ ಅನ್ವಯವಾಗುವಂತದ್ದು ಎಂದಿದ್ದಾರೆ. 

ಬೆಳಗಾವಿ: ಜಾರಕಿಹೊಳಿ ಬ್ರದರ್ಸ್ ಪಾಲಿಟಿಕ್ಸ್ ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟು ಮಾಡುತ್ತಿದೆ. ಸಹೋದರ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗುವವರೆಗೂ ತಾವು ವಿಶ್ರಮಿಸುವುದಿಲ್ಲ ಎಂದು ಹೇಳಿದ ರಮೇಶ್ ಜಾರಕಿಹೊಳಿ ಮಾತಿಗೆ ಇದೀಗ ಸ್ವತಃ ಸತೀಶ್ ಜಾರಕಿಹೊಳಿ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. 

ತಾವು ಸಿಎಂ ಆಗಬೇಕೆಂದು ಸಹೋದರ ರಮೇಶ್ ಜಾರಕಿಹೊಳಿ ಹೇಳಿರುವುದು ಈಗಿನ ವಿಚಾರವಲ್ಲ. ಆದರೆ ಅದು ಮುಂದಿನ ವಿಚಾರವಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಆಗಲು ಇನ್ನು ಕಾಲಾವಕಾಶವಿದೆ. ರಮೇಶ್ ಹೇಳಿರುವ ಮಾತು ಮುಂದಿನ ಹತ್ತು ವರ್ಷಗಳಲ್ಲಿ ಆಗಬಹುದಾಗಿರುವ ಬೆಳವಣಿಗೆ. ಅದನ್ನು ಚರ್ಚೆ ಮಾಡುತ್ತೇವೆ. ಎಷ್ಟು ಜನ ಬೆಂಬಲ ಸೂಚಿಸುತ್ತಾರೋ ಕಾದು ನೋಡಬೇಕು ಎಂದರು.

ಇನ್ನು ಇದೇ ವೇಳೆ ಲೋಕಸಭಾ ಚುನಾವಣೆಯ ಬಗ್ಗೆಯೂ ಕೂಡ ಪ್ರತಿಕ್ರಿಯಿಸಿ ಈ ಚುನಾವಣೆಯಲ್ಲಿ ನಿಲ್ಲುವ ಮನಸ್ಸು ತಮಗೆ ಇಲ್ಲ. ಆದರೆ ಹೈಕಮಾಂಡ್ ನಿರ್ಣಯ ತೆಗೆದುಕೊಂಡರೆ ನೋಡೋಣ ಎಂದಿದ್ದಾರೆ