ಎಸಿಬಿಗೆ ಅಧಿಕಾರ ಇದೆಯೇ ಎಂಬ ಬಗ್ಗೆ ಅಭಿಪ್ರಾಯ ಕೇಳಿದ್ದೇವೆ: ರಾಮಲಿಂಗಾರೆಡ್ಡಿ | ಕೇಂದ್ರ ಸರ್ಕಾರದಿಂದ ಪೋನ್ ಕದ್ದಾಲಿಕೆ ಅನುಮಾನ
ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಆದಾಯ ತೆರಿಗೆ ಅಧಿಕಾರಿಗಳ ಮೇಲೆ ದಾಳಿ ಮಾಡುವ ಅಧಿಕಾರ ಇದೆಯೇ ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಅನಂತರ ಅವರ ಮೇಲೆ ದಾಳಿ ನಡೆಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಅಲ್ಲದೆ, ಸರ್ಕಾರ ಇಂತಹ ಚಿಂತನೆ ಬಗ್ಗೆ ಯಾವ ಮಾಹಿತಿಯನ್ನು ಬಹಿರಂಗ ಪಡಿಸದಿದ್ದರೂ, ತೆರಿಗೆ ಅಧಿಕಾರಿಯೊಬ್ಬರು ಎಸಿಬಿ ದಾಳಿ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪತ್ರ ಬರೆದಿದ್ದಾರೆ. ಇದರಿಂದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಫೋನ್ ಕದ್ದಾಲಿಕೆ ನಡೆಸುತ್ತಿರುವುದು ನಿಜ ಎಂಬುದು ಸಾಬೀತಾದಂತಾಗಿದೆ ಎಂದು ಆರೋಪಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಐಟಿ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಬಗ್ಗೆ ಈವರೆಗೆ ಯಾವುದೇ ರೀತಿಯ ಸಭೆ ಅಥವಾ ಚರ್ಚೆಗಳು ನಡೆದಿಲ್ಲ, ಆದರೆ ನಿನ್ನೆಯಿಂದ ಈ ವಿಷಯ ಚರ್ಚೆಯಾಗುತ್ತಿದೆ. ಐಟಿ ಅಧಿಕಾರಿಗಳ ಮೇಲೆ ದಾಳಿ ಮಾಡುವ ಬಗ್ಗೆಯೇ ಗೊಂದಲಗಳಿವೆ. ಹಾಗಾಗಿ ಕಾನೂನು ತಜ್ಞರೊಂದಿಗೆ ಚರ್ಚಿಸಿ ಅನಂತರ ದಾಳಿ ನಡೆಸುವ ಕುರಿತು ತೀರ್ಮಾನಿಸಲಾಗುವುದು ಎಂದರು.
ಪೋನ್ ಕದ್ದಾಲಿಕೆ ಅನುಮಾನ: ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿ ಇರುವ ವಿವಿಧ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಹಿಂದೆಯೇ ಹೇಳಿದ್ದೆ. ಈಗ ಆದಾಯ ತೆರಿಗೆ ಅಧಿಕಾರಿಯೊಬ್ಬರು ಇದ್ದಕ್ಕಿದ್ದಂತೆ ಎಸಿಬಿ ಐಟಿ ಅಧಿಕಾರಿಗಳ ಮೇಲೆ ದಾಳಿ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದೆಲ್ಲ ಹೇಳಿ ಪತ್ರ ಬರೆದಿರುವುದನ್ನು ನೋಡಿದರೆ, ಕೇಂದ್ರ ದೂರವಾಣಿ ಕದ್ದಾಲಿಕೆ ಮಾಡುತ್ತಿರಬಹುದು. ಬಹುಶಃ ಅಲ್ಲಿಂದಲೇ ಮಾಹಿತಿ ಬಂದ ನಂತರ ಈ ರೀತಿ ಪತ್ರ ಬರೆದಿರಬಹುದು ಎಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದರು.
ಶಾ ಸೂಚನೆ ಮೇರೆಗೆ ಆರೋಪ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಾರಕ್ಕೊಮ್ಮೆಯಾದರೂ ರಾಜ್ಯ ಸರ್ಕಾರ ಇಲ್ಲವೆ ಮುಖ್ಯಮಂತ್ರಿಗಳ ವಿರುದ್ಧ ಏನಾದರೂ ಆರೋಪ ಮಾಡುವಂತೆ ಸೂಚನೆ ನೀಡಿದ್ದಾರೆ. ಹಾಗಾಗಿ ಬಿಜೆಪಿಯವರು ಹೊಸ ಆರೋಪ ಮಾಡುತ್ತಿದ್ದಾರೆ ಎಂದರು.
