ನವದೆಹಲಿ(ಜು.16): ಪ್ರೀತಿ ಪಾತ್ರರ ಸಾವಿಗ ಕಾರಣವಾದ ವಸ್ತುವನ್ನು ಕಂಡರೆ ಆಗದಿರುವುದು ಮಾನವ ಗುಣ. ಇದರ ಕಾರಣದಿಂದಲೇ ನಮ್ಮವರು ದೂರವಾದ ಕುರಿತು ಮನಸ್ಸಿನಲ್ಲಿ ಸಣ್ಣದೊಂದು ದ್ವೇಷ ಮನೆ ಮಾಡಿರುತ್ತದೆ.

ಆದರೆ ಪತಿಯ ಸಾವಿಗೆ ಕಾರಣವಾದ ಯುದ್ಧ ವಿಮಾನವನ್ನೇ ತನ್ನ ವೃತ್ತಿಯನ್ನಾಗಿ ಸ್ವೀಕರಿಸಿದ ಧೀರ ಪತ್ನಿಯ ಕತೆ ಇದು. ಪತಿಯನ್ನು ಬಲಿ ಪಡೆದ ವಿಮಾನವನ್ನು ತಾನೂ ಓಡಿಸುವ ಮೂಲಕ ಆತನನ್ನು ನಿತ್ಯ ನೆನಯುವ ದಿಟ್ಟ ನಿರ್ಧಾರದ ಕತೆ ಇದು.

ಮಿರಾಜ್ 2000 ಯುದ್ಧ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಸ್ಕ್ವಾಡ್ರನ್  ಲೀಡರ್ ಸಮೀರ್ ಅಬ್ರೋಲ್ ಪತ್ನಿ ಗರೀಮಾ ಅಬ್ರೋಲ್ ವಾಯುಸೇನೆ ಸೇರಿದ್ದಾರೆ.

ವಾರಾಣಸಿಯಲ್ಲಿ ನಡೆದ ಸೇವಾ ಆಯ್ಕೆ ಮಂಡಳಿ ಪರೀಕ್ಷೆಯಲ್ಲಿ ಗರೀಮಾ ತೇರ್ಗಡೆಯಾಗಿದ್ದು, ತೆಲಂಗಾಣದಲ್ಲಿರುವ ಭಾರತೀಯ ವಾಯುಪಡೆ ಅಕಾಡೆಮಿ ಸೇರ್ಪಡೆಯಾಗಲಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಮಿರಾಜ್ 200೦ ಯುದ್ಧ ವಿಮಾನ ಪರೀಕ್ಷಾರ್ಥ ಹಾರಾಟ ಸಂದರ್ಭದಲ್ಲಿ ಸ್ಕ್ವಾಡ್ರನ್ ಲೀಡರ್ ಸಮೀರ್ ಅಬ್ರೋಲ್ ಹಾಗೂ ಸಿದ್ದಾರ್ಥ ನೇಗಿ ಮೃತಪಟ್ಟಿದ್ದರು.