ಚಂಡೀಗಢ[ಮಾ.02]: ಕಣ್ಣೆದುರಿಗೆ ಗಂಡನ ಪಾರ್ಥೀವ ಶರೀರವಿತ್ತು ಹಾಗೂ ಸ್ಕ್ವಾಡ್ರನ್ ಲೀಡರ್ ಪತ್ನಿ ಅವರಿಗೆ ಸೆಲ್ಯೂಟ್ ನೀಡುತ್ತಿದ್ದರು. ಕೊನೆಗೂ ಆಕೆಯ ಸಹನೆ ಕಟ್ಟೆಯೊಡೆದಿತ್ತು. ಪ್ರೀತಿಯ ಗಂಡನನ್ನು ಕಳೆದುಕೊಂಡ ಆಕೆ ಕಣ್ಣೀರಾದರು. ಜಮ್ಮು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಭಾರತೀಯ ವಾಯುಸೇನೆಯ Mi-17 ಪತನಗೊಂಡಿದ್ದು, ಈ ದುರಂತದಲ್ಲಿ ಹುತಾತ್ಮರಾದ ಸ್ಕ್ವಾಡ್ರನ್ ಲೀಡರ್ ಸಿದ್ಧಾರ್ಥ್ ವಶಿಷ್ಠರವರ ಅಂತಿಮ ಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಗಿದೆ. ಹುತಾತ್ಮ ಯೋಧನ ಪಾರ್ಥೀವ ಶರೀರವನ್ನು ಗುರುವಾರದಂದು ವಾಯುಸೇನೆಯ ವಿಮಾನದಲ್ಲಿ ಚಂಡೀಗಢದ ಅವರ ನಿವಾಸಕ್ಕೆ ತರಲಾಯಿತು. ಈ ವೇಳೆ ತನ್ನ ಪತ್ನಿ ಆರತಿ ಸಿಂಗ್ ಏರ್ ಫೋರ್ಸ್ ಸ್ಟೇಷನ್ ಗೆ ತೆರಳಿದ್ದರು.

ಹುತಾತ್ಮ ಸಿದ್ಧಾರ್ಥ್ ವಶಿಷ್ಠರವರ ಪತ್ನಿ ಆರತಿ ಸಿಂಗ್ ತಾನೂ ಕೂಡಾ ಓರ್ವ ಸ್ಕ್ವಾಡ್ರನ್ ಲೀಡರ್. ತನ್ನ ಗಂಡನ ಅಂತಿಮ ಕ್ರಿಯೆಗೂ ಮೊದಲು ಓರ್ವ ಸ್ಕ್ವಾಡ್ರನ್ ಲೀಡರ್ ಆಗಿ ವಾಯುಸೇನೆಯ ಸಮವಸ್ತ್ರದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇನ್ನು ಆರತಿ ರಜೆ ಮುಗಿಸಿ ದೇಶದ ಸೇವೆಗೆಂದು ಗಡಿಗೆ ತೆರಳುವ ತಯಾರಿಯಲ್ಲಿದ್ದರು. ಆದರೆ ಇದೇ ಸಂದರ್ಭದಲ್ಲಿ ಗಂಡ ಹುತಾತ್ಮರಾಗಿದ್ದಾರೆಂಬ ಸುದ್ದಿ ಬಂದೆರಗಿದೆ. 

ಗಡಿಗೆ ಹೊರಟು ಸ್ಕ್ವಾಡ್ರನ್ ಲೀಡರ್ ನಿಂತಿದ್ದರು ಆರತಿ!

ಸಿದ್ಧಾರ್ಥ್ ಪಾರ್ತೀವ ಶರೀರ ಏರ್ ಫೋರ್ಸ್ ಸ್ಟೇಷನ್ ಗೆ ತಲುಪುತ್ತಿದ್ದಂತೆಯೇ, ಅವರ ಪತ್ನಿ ಆರತಿ ಸಿಂಗ್ ಸಂಪೂರ್ಣ ಸಮವಸ್ಟತ್ರದಲ್ಲಿ ಪಾರ್ಥೀವ ಶರೀರ ಪಡೆದುಕೊಳ್ಳಲು ತಲುಪಿದ್ದರು. ಈ ದೃಶ್ಯ ಕಂಡು ಅಲ್ಲಿದ್ದ ಎಲ್ಲರ ಕಣ್ಣುಗಳು ಮಂಜಾಗಿದ್ದವು. ಸಿದ್ಧಾರ್ಥ್ ತಂದೆ ಮಗನ ಚಿತೆಗೆ ಮುಖಾಗ್ನಿ ನೀಡಿದ್ದಾರೆ. ಸಿದ್ಧಾರ್ಥ್ ವಶಿಷ್ಠ ಹಾಗೂ ಅವರ ಕುಟುಂಬದ ಮೂರು ತಲೆಮಾರು ಸೇನೆಯಲ್ಲಿ ಸೇವೆ ಸಲ್ಲಿಸಿ ದೇಶ ರಕ್ಷಣೆ ಮಾಡಿದ್ದಾರೆ.

ಕೇರಳ ಪ್ರಳಯದ ರಕ್ಷಣಾ ಕಾರ್ಯಕ್ಕೆ ಗೌರವ

ಸಿದ್ಧಾರ್ಥ ವಶಿಷ್ಠ 2010ರಲ್ಲಿ ವಾಯುಸೇನೆಗೆ ಸೇರಿದ್ದರು ಹಾಗೂ 2018ರಲ್ಲಿ ಕೇರಳದಲ್ಲಾದ ಪ್ರಳಯದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಅವರನ್ನು ಗೌರವಿಸಲಾಗಿತ್ತು ಎಂಬುವುದು ಉಲ್ಲೇಖನೀಯ.

ಜಮ್ಮು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ವಾಯುಸೇನೆಯ Mi-17 ಯುದ್ಧ ವಿಮಾನವು ಪತನಗೊಂಡಿತ್ತು. ಈ ದುರಂತದಲ್ಲಿ ಸ್ಕ್ವಾಡ್ರನ್ ಲೀಡರ್ ಸಿದ್ಧಾರ್ಥ್ ವಶಿಷ್ಠ ಸೇರಿ ಒಟ್ಟು ಐದು ಮಂದಿ ಯೋಧರು ಹುತಾತ್ಮರಾಗಿದ್ದಾರೆ.