ತಾಯಿ ಚಿಕಿತ್ಸೆಗೆ 5 ಸಾವಿರ ಕೇಳಿದ್ದಕ್ಕೆ 1 ಸಾವಿರ ಕೊಟ್ಟಿದ್ದ ಪೇದೆ

ಬೆಂಗಳೂರು: ಕೌಟುಂಬಿಕ ಜಗಳದಿಂದ ಮನ​ನೊಂದು ಪೊಲೀಸ್‌ ಪೇದೆಯೊಬ್ಬರ ಪತ್ನಿ ನೇಣು ಬಿಗಿದುಕೊಂಡು ಆತ್ಮ​ಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಫ್ಜಾನಾ (26) ಮೃತರು. ಜ.24​ರಂದು ಶಿವಾಜಿನಗರದ ಪೊಲೀಸ್‌ ವಸತಿ ಗೃಹದಲ್ಲಿ ಘಟನೆ ಜರುಗಿದೆ. ಮೈಸೂರು ಜಿಲ್ಲೆಯ ತಿ.ನರಸೀಪುರ ಮೂಲದ ಅಫ್ಜಾನಾ ಶಿವಾಜಿನಗರದ ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್‌ ಮಲ್ಲಿಕ್‌ ಮುಜಾವರ್‌ ಎಂಬುವರನ್ನು ಆರು ವರ್ಷದ ಹಿಂದೆ ಪ್ರೀತಿಸಿ ವಿವಾ​ಹವಾಗಿದ್ದರು. ದಂಪತಿಗೆ ಐದು ಮತ್ತು ಎರಡು ವರ್ಷದ ಇಬ್ಬರು ಮಕ್ಕ​ಳಿ​ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲ್ಲಿಕ್‌ ಮತ್ತು ಅಫ್ಜಾನಾ ಇಬ್ಬರು ಮಕ್ಕಳ ಜತೆ ಪೊಲೀಸ್‌ ವಸತಿ ಗೃಹದಲ್ಲಿ ನೆಲೆಸಿದ್ದರು. ಅಪಘಾತ​ವೊಂದರಲ್ಲಿ ಗಾಯಗೊಂಡಿದ್ದ ಅಫ್ಜಾನಾ ತಾಯಿ ನೀಲಂ ಅವರು ಜ.23ರಂದು ಮಗಳ ಮನೆಗೆ ಬಂದಿದ್ದರು. ಅಂದು ಸಂಜೆ ಊರಿಗೆ ವಾಪಸಾಗಲು ಸಿದ್ಧರಾಗುತ್ತಿದ್ದರು. ಈ ವೇಳೆ ಅಫ್ಜಾನಾ ಅವರು, ತಾಯಿಗೆ 5 ಸಾವಿರ ಹಣ ಕೊಟ್ಟು ಕಳುಹಿಸುವಂತೆ ಮಲ್ಲಿಕ್‌ಗೆ ಹೇಳಿದ್ದರು. ಅಷ್ಟೊಂದು ಹಣವಿಲ್ಲ ಎಂದು 1 ಸಾವಿರ ಕೊಟ್ಟು ಕಳುಹಿಸಿದ್ದರು. ಈ ವಿಚಾರವಾಗಿ ದಂಪತಿ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಡಿದ್ದರು.

ಮಾರನೇ ದಿನ (ಜ.24) ಹಿರಿಯ ಪುತ್ರ ಓದುತ್ತಿರುವ ಶಾಲೆಯಲ್ಲಿ ಕ್ರೀಡಾ ದಿನಾಚರಣೆ ಪ್ರಯಕ್ತ 110 ರು. ಶುಲ್ಕ ನೀಡುವಂತೆ ತಿಳಿಸಿದ್ದರು. ಇದನ್ನು ನೋಡಿದ್ದ ಅಫ್ಜಾನಾ ಮಗನಿಗೆ ಹಣ ನೀಡುವಂತೆ ಮಲ್ಲಿಕ್‌ಗೆ ಹೇಳಿದ್ದರು. ಈ ವೇಳೆ ಮಗ ಇನ್ನೂ ಚಿಕ್ಕವನು. ಈಗಲೇ ಕ್ರೀಡೆಯ ಅಗತ್ಯವಿಲ್ಲ ಎಂದು ಹಣ ನೀಡಲು ನಿರಾಕರಿಸಿ ಮಗನನ್ನು ಶಾಲೆಗೆ ಬಿಡಲು ಹೋಗಿದ್ದರು. ಬಳಿಕ ಮನೆಗೆ ಬಂದು ಸ್ನಾನಕ್ಕೆ ತೆರಳಿದ್ದರು. ಎರಡನೇ ಮಗುವಿನ ಜತೆ ಮನೆಯಲ್ಲಿದ್ದ ಅಫ್ಜಾನಾ ಪತಿ ಸ್ನಾನಕ್ಕೆ ಹೋಗಿದ್ದನ್ನು ನೋಡಿಕೊಂಡು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಿವಾಜಿನಗರ ಪೊಲೀಸರು ತಿಳಿಸಿದ್ದಾರೆ.ಆತ್ಮಹತ್ಯೆಗೆ ಶರಣಾದ ಅಫ್ಜಾನಾ ಮೂರು ತಿಂಗಳ ಗರ್ಭಿಣಿ.

ಈಕೆಯ ಪತಿಯೇ ಕೊಲೆಗೈದು ನೇಣು ಬಿಗಿದಿದ್ದಾರೆ ಎನ್ನುವ ಆರೋಪಗಳೂ ಕೇಳಿ ಬಂದಿವೆ. ಆದರೆ, ಪೊಲೀಸರು ಈ ಆರೋಪವನ್ನು ತಳ್ಳಿಹಾಕಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಇದು ಆತ್ಮಹತ್ಯೆ ಎಂದು ದೃಢೀಕರಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ
(epaper.kannadaprabha.in)