ಆದರೆ ನಿಮಗೆ ಒಂದು ವಿಷಯ ಗೊತ್ತಿರಲಿ ತೆರಿಗೆಯನ್ನು ವಂಚಿಸಬೇಡಿ ಎಂದು ಕರೆ ಕೊಡುವ ರಾಜಕೀಯ ಪಕ್ಷಗಳೇ ತೆರಿಗೆ ಕಟ್ಟಬೇಕಿಲ್ಲ. ಅಂಥಾದ್ದೊಂದು ಕಾನೂನಿನ ರಕ್ಷಾಕವಚವೇ ರಾಜಕೀಯ ಪಕ್ಷಗಳಿಗೆ ಇದೆ.

ನವೆಂಬರ್ 8ರಂದು ಮೋದಿ ನೋಟು ರದ್ದತಿ ಘೋಷಿಸಿದ್ದೇ ಘೋಷಿಸಿದ್ದು. ಪ್ರತಿಯೊಬ್ಬರೂ ಆರ್ಥಿಕ ತಜ್ಞರಾಗಿದ್ದಾರೆ. ಎಷ್ಟು ಟ್ಯಾಕ್ಸ್ ಕಟ್ಟಬೇಕಾಗುತ್ತೆ? ಎಷ್ಟು ಉಳಿಯುತ್ತೆ? ತೆರಿಗೆ ಉಳಿಸೋದು ಹೇಗೆ? ಹೀಗೆ ಲೆಕ್ಕ ಹಾಕ್ತಾ ಇದ್ದಾರೆ. ಆದರೆ ನಿಮಗೆ ಒಂದು ವಿಷಯ ಗೊತ್ತಿರಲಿ ತೆರಿಗೆಯನ್ನು ವಂಚಿಸಬೇಡಿ ಎಂದು ಕರೆ ಕೊಡುವ ರಾಜಕೀಯ ಪಕ್ಷಗಳೇ ತೆರಿಗೆ ಕಟ್ಟಬೇಕಿಲ್ಲ. ಅಂಥಾದ್ದೊಂದು ಕಾನೂನಿನ ರಕ್ಷಾಕವಚವೇ ರಾಜಕೀಯ ಪಕ್ಷಗಳಿಗೆ ಇದೆ. ಏನದು? ಹೇಗೆ? ಎಲ್ಲ ಡಿಟೇಲ್ಸ್ ಇಲ್ಲಿದೆ.

ದೇಶದಲ್ಲಿರುವ ಯಾವ ಪಕ್ಷಗಳೂ ತಾವು ಪಡೆಯುವ ದೇಣಿಗೆಗೆ, ಮಾಡುವ ಖರ್ಚಿಗೆ ತೆರಿಗೆ ಕಟ್ಟಬೇಕಿಲ್ಲ. ಅಷ್ಟೇ ಅಲ್ಲ, ರಾಜಕೀಯ ಪಕ್ಷಗಳಿಗೆ ಯಾರು ಬೇಕಾದರೂ 20 ಸಾವಿರದ ಒಳಗೆ ದೇಣಿಗೆ ಕೊಟ್ಟರೆ, ಅವರ ವಿವರವನ್ನು ತೆರಿಗೆ ಇಲಾಖೆಗೆ ನೀಡಬೇಕಾದ ಅಗತ್ಯವೂ ಇಲ್ಲ. ಅವರೇ ರಚಿಸಿಕೊಂಡಿರುವ ಕಾನೂನಿನಲ್ಲಿ ಇದಕ್ಕೆಲ್ಲ ಅವಕಾಶವಿದೆ. ಏನೋ ಹೋಗ್ಲಿ ಬಿಡಿ ಅನ್ನೋಕೂ ಸಾಧ್ಯ ಇಲ್ಲ. ನಿಮಗೆ ಗೊತ್ತಿರಲಿ...ದೇಶದಲ್ಲಿರುವ ರಾಜಕೀಯ ಪಕ್ಷಗಳು ಒಂದಲ್ಲ..ಎರಡಲ್ಲ..1780.

ದೇಶದಲ್ಲಿರುವುದು - ಒಟ್ಟು 1780 ರಾಜಕೀಯ ಪಕ್ಷಗಳು
ರಾಜ್ಯಮಟ್ಟದ ರಾಜಕೀಯ ಪಕ್ಷಗಳು - 58
ರಾಷ್ಟ್ರೀಯ ರಾಜಕೀಯ ಪಕ್ಷಗಳು - 7
ಬಿಜೆಪಿ, ಕಾಂಗ್ರೆಸ್, ಬಿಎಸ್​ಪಿ, ಟಿಎಂಸಿ, ಸಿಪಿಐ
ಸಿಪಿಐ-ಎಂ ಮತ್ತು ಎನ್​ಸಿಪಿ ರಾಷ್ಟ್ರೀಯ ಪಕ್ಷಗಳು

ದೇಶದಲ್ಲಿ ಒಟ್ಟು 1780 ರಾಜಕೀಯ ಪಕ್ಷಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ 58 ರಾಜ್ಯಮಟ್ಟದ ರಾಜಕೀಯ ಪಕ್ಷಗಳು. ರಾಷ್ಟ್ರೀಯ ಮಾನ್ಯತೆ ಪಡೆದಿರುವ ರಾಜಕೀಯ ಪಕ್ಷಗಳು ಕೇವಲ 7. ಬಿಜೆಪಿ, ಕಾಂಗ್ರೆಸ್, ಬಿಎಸ್​ಪಿ, ಟಿಎಂಸಿ, ಸಿಪಿಐ, ಸಿಪಿಐ-ಎಂ ಮತ್ತು ಎನ್​ಸಿಪಿ ಮಾತ್ರ.

ಆದರೆ, ಇವುಗಳಿಗಷ್ಟೇ ಅಲ್ಲ, ಎಲ್ಲ 1780 ಪಕ್ಷಗಳಿಗೂ ತೆರಿಗೆ ವಿನಾಯಿತಿ ಸೌಲಭ್ಯ ಇದೆ. ನಿಮಗೆ ಗೊತ್ತಿರಲಿ, ದೇಶದಲ್ಲಿರುವ ಈ 1780 ಪಕ್ಷಗಳಲ್ಲಿ 200ಕ್ಕೂ ಹೆಚ್ಚು ಪಕ್ಷಗಳು 10 ವರ್ಷಗಳಿಂದ ಯಾವ ಚುನಾವಣೆಯಲ್ಲೂ ಸ್ಪರ್ಧಿಸಿಲ್ಲ. ಚುನಾವಣಾ ಆಯೋಗ ಅವುಗಳನ್ನು ಪಟ್ಟಿಯಿಂದ ತೆಗೆದುಹಾಕಬಹುದಷ್ಟೇ.ರದ್ದು ಮಾಡೋಕೆ ಸಾಧ್ಯವಿಲ್ಲ. ಅವುಗಳಿಗಿರುವ ತೆರಿಗೆ ವಿನಾಯಿತಿ ಸೌಲಭ್ಯಕ್ಕೂ ಏನೂ ಆಗಲ್ಲ. ಒಮ್ಮೆ ನೋದಣಿ ಆದರೆ ಮುಗಿಯಿತು ತೆರಿಗೆ ಕಟ್ಟಬೇಕಾಗಿಲ್ಲ. ಹಾಗಾದರೆ, ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ದೇಣಿಗೆ ಸಂದಾಯವಾಗಿದೆ. ಇಲ್ಲೊಂದು ಲೆಕ್ಕ ನೋಡಿ.

ಯಾವ್ಯಾವ ಪಕ್ಷಕ್ಕೆ ಎಷ್ಟೆಷ್ಟು ದೇಣಿಗೆ?
ಬಿಜೆಪಿ - 613 ಖಾತೆಗಳಿಂದ 76 ಕೋಟಿ ದೇಣಿಗೆ
ಕಾಂಗ್ರೆಸ್ - 918 ದೇಣಿಗೆದಾರರಿಂದ 20 ಕೋಟಿ ದೇಣಿಗೆ
ಬಿಎಸ್​ಪಿ - 20 ಸಾವಿರಕ್ಕಿಂತ ಮೇಲ್ಪಟ್ಟು ದೇಣಿಗೆಗಳೇ ಬಂದಿಲ್ಲ
20 ಸಾವಿರಕ್ಕಿಂತ ಕಡಿಮೆ ದೇಣಿಗೆಗೆ ಲೆಕ್ಕ ಕೊಡಬೇಕಿಲ್ಲ

ಆಡಳಿತಾರೂಡ ಬಿಜೆಪಿಯೇ ನಂ.1 ಪಕ್ಷ. ಬಿಜೆಪಿಗೆ 613 ಖಾತೆಗಳಿಂದ 76 ಕೋಟಿ ದೇಣಿಗೆ ಬಂದಿದೆ. ಕಾಂಗ್ರೆಸ್​ಗೆ 918 ದೇಣಿಗೆದಾರರು 20 ಕೋಟಿ ದೇಣಿಗೆ ಕೊಟ್ಟಿದ್ದಾರೆ. ಬಿಎಸ್​ಪಿಗೆ 20 ಸಾವಿರಕ್ಕಿಂತ ಮೇಲ್ಪಟ್ಟು ದೇಣಿಗೆಗಳೇ ಬಂದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ 20 ಸಾವಿರಕ್ಕಿಂತ ಕಡಿಮೆ ದೇಣಿಗೆಗೆ ಲೆಕ್ಕ ಕೊಡಬೇಕಿಲ್ಲ.

ಈಗ ಬಿಎಸ್​ಪಿ ನಾಯಕಿ ಮಾಯಾವತಿ ಕೆರಳಿರುವುದು ಇದೇ ಕಾರಣಕ್ಕೆ. ಏಕೆಂದರೆ, ಬಿಎಸ್​ಪಿಗೆ ನವೆಂಬರ್ 8ರ ನಂತರ 104 ಕೋಟಿ ದೇಣಿಗೆ ಬಂದಿದ್ದರೆ, ಮಾಯಾವತಿ ಸೋದರ ಆನಂದ್ ಕುಮಾರ್ ಖಾತೆಯಲ್ಲಿ 1.43 ಕೋಟಿ ದೇಣಿಗೆ ಹೋಗಿದೆ. ಈಗ ಮಾಯಾವತಿ ದಲಿತ ಅಸ್ತ್ರ ಪ್ರಯೋಗಿಸಿದ್ದಾರೆ.

ಹಾಗಾದರೆ, ರಾಜಕೀಯ ಪಕ್ಷಗಳು ತೆರಿಗೆ ಕಟ್ಟಬಾರದಾ..? ತೆರಿಗೆಯಿಂದ ವಿನಾಯಿತಿ ಪಡೆಯುವಂತ ಸಮಾಜ ಸೇವೆಯನ್ನೇನಾದರೂ ರಾಜಕೀಯ ಪಕ್ಷಗಳು ಮಾಡುತ್ತಿವೆಯಾ..? ದೇಶದ ಪ್ರತಿಯೊಬ್ಬ ನಾಗರಿಕನಿಗೂ ತೆರಿಗೆ ವಿಧಿಸುವ ಸರ್ಕಾರವನ್ನು ನಡೆಸುವ ರಾಜಕೀಯ ನಾಯಕರ ಲೆಕ್ಕ ಕೇಳೋದು ತಪ್ಪಾ? ಚರ್ಚೆಯಾಗುತ್ತಿರುವುದು ಇದೇ.

ಬ್ಯೂರೋ ರಿಪೋರ್ಟ್, ಸುವರ್ಣ ನ್ಯೂಸ್