ಬೆಂಗಳೂರು :  ‘ಪಾಕಿಸ್ತಾನಿಯರಿಗೆ ಏಕೆ ಭಾರತೀಯರ ತೆರಿಗೆ ಹಣ ಖರ್ಚು ಮಾಡಬೇಕು?!’

ಮದುವೆಯಾಗಲು ಬೆಂಗಳೂರಿಗೆ ಬಂದು ಇಲ್ಲಿಯೇ ನೆಲೆಸಿದ ಪರಿಣಾಮ ಜೈಲು ಸೇರಿದ ಪಾಕಿಸ್ತಾನಿ ದಂಪತಿ, ಶಿಕ್ಷೆಯ ಅವಧಿ ಕಡಿತಗೊಳಿಸಲು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರು, ಸರ್ಕಾರಿ ಪ್ಲೀಡರ್‌ಗೆ (ಸರ್ಕಾರದ ಪರ ವಕೀಲರು) ಕೇಳಿದ ಪ್ರಶ್ನೆ ಇದು.

ಮದುವೆಯಾಗಲು ಪಾಕಿಸ್ತಾನದ ಕರಾಚಿ ಜಿಲ್ಲೆಯ ಚಕ್ರಫೋಟ್‌ ಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ಕಾಸೀಫ್‌ ಶಂಶುದ್ಧೀನ್‌ ಎಂಬಾತ ಕಿರಾಣ್‌ ಗುಲಾಮ್‌ ಅಲಿ ಎಂಬುವರನ್ನು ಮದುವೆಯಾಗಿದ್ದರು. ಕಾಸೀಫ್‌ ಅವರನ್ನು ಕರೆತಂದವರು ಆತ ಮತ್ತು ಆತನ ಪತ್ನಿಯನ್ನು ನಗರದಲ್ಲಿಯೇ ಬಿಟ್ಟು ಹೋಗಿದ್ದರು. ಇದರಿಂದ ಪಾಕಿಸ್ತಾನಕ್ಕೆ ತೆರಳದ ದಂಪತಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡುತಿದ್ದರು.

ವೀಸಾ ಅವಧಿ ಮುಗಿದ ನಂತರವೂ ಅವರನ್ನು ರಾಜ್ಯದಲ್ಲೇ ಅಕ್ರಮವಾಗಿ ನೆಲೆಸಿದ ಆರೋಪದ ಮೇಲೆ ಬನಶಂಕರಿ ಮತ್ತು ಕುಮಾರಸ್ವಾಮಿ ಲೇಔಟ್‌ ಠಾಣಾ ಪೊಲೀಸರು ದಂಪತಿಯನ್ನು ಬಂಧಿಸಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು.

ನಗರದ 44ನೇ ಎಸಿಎಂಎಂ ನ್ಯಾಯಾಲಯವು ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ ಪ್ರಕರಣದಲ್ಲಿ ವಿವಿಧ ಕಾಯ್ದೆ ಅಡಿಯಲ್ಲಿ ಕಾಸೀಫ್‌ ಹಾಗೂ ಕಿರಾಣ್‌ಗೆ ತಲಾ 21 ತಿಂಗಳು ಕಠಿಣ ಜೈಲು ಶಿಕ್ಷೆ ವಿಧಿಸಿ ಮತ್ತು 12 ಸಾವಿರ ದಂಡ ವಿಧಿಸಿತ್ತು. ಎರಡನೇ ಪ್ರಕರಣದಲ್ಲಿ ನಕಲಿ ದಾಖಲೆ ನೀಡಿ ಆಧಾರ್‌ ಕಾರ್ಡ್‌ ಪಡೆದಿರುವುದು ಸೇರಿದಂತೆ ವಿವಿಧ ಸೌಲಭ್ಯ ಪಡೆದಿರುವುದಕ್ಕೆ ಭಾರತೀಯ ದಂಡ ಸಂಹಿತೆಯ ವಿವಿಧ ಕಾಯ್ದೆ ಅಡಿಯಲ್ಲಿ ತಲಾ 21 ತಿಂಗಳು ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಿತ್ತು. ಶಿಕ್ಷೆಯ ಅವಧಿ ಪೂರ್ಣಗೊಳಿಸಿದ ನಂತರ ಅವರನ್ನು ಸ್ವದೇಶಕ್ಕೆ ಕಳುಹಿಸಲು ಜೈಲು ಅಧಿಕಾರಿಗೆ ಆದೇಶಿಸಿತ್ತು.

ದಂಪತಿ ಈಗಾಗಲೇ ಸುಮಾರು 21 ತಿಂಗಳು ಕಠಿಣ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಆದರೆ, ಎರಡೂ ಪ್ರಕರಣದಲ್ಲಿನ ಶಿಕ್ಷೆಯ ಅವಧಿಯನ್ನು ಪ್ರತ್ಯೇಕವಾಗಿ ಅನುಭವಿಸಬೇಕು ಎಂದು ಜೈಲು ಅಧಿಕಾರಿಗಳು ಹೇಳಿದ್ದರಿಂದ ದಂಪತಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ತಾವು ಈಗಾಗಲೇ 21 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದೇವೆ. ತಾವು ಮಾಡಿದ ತಪ್ಪು ಅಧೀನ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದೇವೆ. ತಮಗೆ ವೃದ್ಧ ಪೋಷಕರು ಹಾಗೂ ತಂಗಿಯರು ಇದ್ದಾರೆ. ಅವರು ತಮ್ಮ ಬಿಡುಗಡೆಯನ್ನೇ ಕಾಯುತ್ತಿದ್ದಾರೆ. ಆದ್ದರಿಂದ ಅಧೀನ ನ್ಯಾಯಾಲಯ ಎರಡು ಪ್ರಕರಣದಲ್ಲಿ ವಿಧಿಸಿರುವ ಜೈಲು ಶಿಕ್ಷೆಯನ್ನು ಏಕಕಾಲಕ್ಕೆ ಜಾರಿಗೆ ಬರುವಂತೆ ಆದೇಶಿಸಬೇಕು. ಆ ಮೂಲಕ ಶಿಕ್ಷೆಯ ಅವಧಿ ಕಡಿತಗೊಳಿಸಬೇಕು ಎಂದು ಕೋರಿದ್ದರು.

ಪೊಲೀಸರ ಪರ ಸರ್ಕಾರಿ ಪ್ಲೀಡರ್‌ (ವಕೀಲರು) ರಾಚಯ್ಯ, ಅರ್ಜಿದಾರರು ಪಾಕಿಸ್ತಾನಕ್ಕೆ ಮರಳದೇ ನಗರದಲ್ಲಿ ಅಕ್ರಮವಾಗಿ ನೆಲೆಸಿರುವುದು ತಪ್ಪು. ಅವರನ್ನು ಹುಡುಕುವುದೇ ಕಷ್ಟವಾಗಿತ್ತು. ಪೊಲೀಸರು ಶ್ರಮ ವಹಿಸಿ ಶೋಧಿಸಿದರು. ಅಧೀನ ನ್ಯಾಯಾಲಯ ನೀಡಿರುವ ತೀರ್ಪು ಸರಿಯಾಗಿದ್ದು, ಅರ್ಜಿದಾರರ ಶಿಕ್ಷೆಯ ಅವಧಿ ಕಡಿತಗೊಳಿಸಬಾರದು ಎಂದು ಕೋರಿದರು.

ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಅರ್ಜಿದಾರರು ಪಾಕಿಸ್ತಾನದ ಪ್ರಜೆಗಳು. ಅವರನ್ನು ಜೈಲಿನಲ್ಲಿ ಇಟ್ಟು ಪೋಷಿಸಲು ಭಾರತೀಯರ ತೆರಿಗೆ ಹಣವನ್ನು ಏಕೆ ಖರ್ಚು ಮಾಡಬೇಕು. ಅದರ ಬದಲು ಅವರಿಗೆ ವಿಧಿಸಲಾಗಿರುವ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿ ಜೈಲಿನಿಂದ ಬಿಡುಗಡೆ ಮಾಡಿ ಪಾಕಿಸ್ತಾನದ ರಾಯಭಾರಿ ಕಚೇರಿಯ ವಶಕ್ಕೆ ನೀಡುವುದು ಉತ್ತಮವಲ್ಲವೇ? ಆಗ ಅವರು ಸ್ವದೇಶಕ್ಕೆ ಹೋಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಅದಕ್ಕೆ ಉತ್ತರಿಸಿದ ರಾಚಯ್ಯ, ಕಾನೂನಿನಲ್ಲಿ ಅವಕಾಶವಿದ್ದರೆ ಹಾಗೆಯೇ ಮಾಡಬಹುದು ಎಂದರು. ನ್ಯಾಯಪೀಠ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28