ಬೆಂಗಳೂರು(ಅ. 04): ರಾಜ್ಯ ಸರಕಾರ ಜಾರಿಗೆ ತರಬೇಕೆಂದಿದ್ದ ನಗರಾಭಿವೃದ್ಧಿ ಪ್ರಾಧಿಕಾರಗಳ ತಿದ್ದುಪಡಿ ವಿಧೇಯಕ-2016ಗೆ ಅಂಕಿತ ಹಾಕಲು ರಾಜ್ಯಪಾಲ ವಜುಭಾಯಿ ವಾಲಾ ನಿರಾಕರಿಸಿದ್ದಾರೆ. ಇದು ರಾಜ್ಯ ಸರಕಾರ ವರ್ಸಸ್ ಕೇಂದ್ರ ಸರಕಾರದ ತಿಕ್ಕಾಟವೇ? ಅಥವಾ ರಾಜ್ಯಪಾಲರ ಕ್ರಮದಲ್ಲಿ ಏನಾದರೂ ಔಚಿತ್ಯವಿದೆಯೇ? ತಿದ್ದುಪಡಿ ವಿಧೇಯಕಕ್ಕೆ ಯಾಕೆ ವಿರೋಧವಿದೆ?
ನಗರಾಭಿವೃದ್ಧಿ ಪ್ರಾಧಿಕಾರಗಳ ಮೂಲ ಕಾಯ್ದೆ ಪ್ರಕಾರ ಯಾವುದೇ ಹೊಸ ಲೇಔಟ್ ಮಾಡುವ ಪ್ರಾಧಿಕಾರಗಳು ಶೇ. 15ರಷ್ಟು ಸ್ಥಳವನ್ನು ಪಾರ್ಕ್ ಮತ್ತು ಆಟದ ಮೈದಾನಗಳಿಗೆ ಮೀಸಲಾಗಿಡಬೇಕು. ಇನ್ನೂ ಶೇ.10ರಷ್ಟು ಜಾಗವನ್ನು ನಾಗರಿಕ ಸೌಲಭ್ಯಗಳಿಗೆ ಬಿಡಬೇಕು ಎಂಬ ನಿಯಮವಿದೆ. ಆದರೆ, ತಿದ್ದುಪಡಿ ವಿಧೇಯಕದ ಪ್ರಕಾರ, ಶೇ. 10 ಮತ್ತು ಶೇ.5ರಷ್ಟು ಸ್ಥಳವನ್ನು ಪಾರ್ಕ್, ಆಟದ ಮೈದಾನ ಮತ್ತು ನಾಗರಿಕ ಸೌಲಭ್ಯಗಳಿಗೆ ಮೀಸಲಿಟ್ಟರೆ ಸಾಕು. ಉಳಿದ ಜಾಗವನ್ನು ಮನೆ ನಿರ್ಮಿಸಲು ಬಳಸಬಹುದು.
ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಗಳು ಶೇ. 15ರಷ್ಟು ಮಾತ್ರ ಸ್ಥಳ ಮೀಸಲಾಗಿಡುವ ಅವಕಾಶ ಹೊಂದಿವೆ. ಇದರಿಂದ ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಗಳು ಸ್ಪರ್ಧಾತ್ಮಕ ದೃಷ್ಟಿಯಿಂದ ಹಿಂದುಳಿದುಬಿಡುತ್ತವೆ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದ್ದೇವೆ ಎಂಬುದು ಸರಕಾರದ ವಾದ.
ಆದರೆ, ಸಮಾನ ಸ್ಪರ್ಧಾತ್ಮಕ ಅಖಾಡ ಸೃಷ್ಟಿಸುವುದು ಸರಕಾರದ ಉದ್ದೇಶವೇ ಆಗಿದ್ದರೆ ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೂ ಶೇ.25ರಷ್ಟು ಸ್ಥಳವನ್ನು ಪಾರ್ಕ್ ಮತ್ತು ಮೂಲಭೂತ ಸೌಕರ್ಯಕ್ಕೆ ಮೀಸಲಿಡುವಂತಹ ನಿಯಮವನ್ನು ಅನುಸರಿಸುವುದು ಕಡ್ಡಾಯ ಮಾಡಿ ಎಂದು ಬಿಜೆಪಿ ಹಾಗೂ ಪರಿಸರವಾದಿಗಳು ಆಗ್ರಹಿಸುತ್ತಿದ್ದಾರೆ. ಸದನದಲ್ಲಿ ಯಾವುದೇ ಚರ್ಚೆ ನಡೆಸದೆಯೇ ತಿದ್ದುಪಡಿ ವಿಧೇಯಕದ ಮೂಲಕ ರಿಯಲ್ ಎಸ್ಟೇಟ್ ಉದ್ಯಮಿಗಳ ಕೃಪೆ ಸಂಪಾದಿಸಲು ಸರಕಾರ ಹೊರಟಿದೆ ಎಂಬುದು ಬಿಜೆಪಿ ಆರೋಪ. ಈ ತಿದ್ದುಪಡಿ ವಿಧೇಯಕದಿಂದ ರಾಜ್ಯದ ಹಸಿರು ಪ್ರದೇಶ ಇನ್ನಷ್ಟು ಬರಡಾಗುತ್ತದೆ ಎಂಬುದು ಪರಿಸರವಾದಿಗಳ ಆತಂಕವಾಗಿದೆ.
