ಕೋಲ್ಕತ್ತಾ[ಜು.11]: ಕರ್ನಾಟಕದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರ ಪಡೆಯಲೇಬೇಕೆಂಬ ಹಠದಿಂದ ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಆರೋಪಿಸಿರುವ ದೀದಿ, ಎಲ್ಲಾ ರಾಜ್ಯಗಳಲ್ಲೂ ತನ್ನದೇ ಅಧಿಪತ್ಯ ಇರಬೇಕೆಂಬ ಧಾವಂತ ಏಕೆ ಎಂದು ಪ್ರಶ್ನಿಸಿದ್ದಾರೆ. 

ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ದೀದಿ 'ಬಿಜೆಪಿ ಅಧಿಕಾರದಾಸೆಗೆ ಶಾಸಕರನ್ನು ಖರೀದಿಸುವ ಮೂಲಕ ಕುದುರೆ ವ್ಯಾಪಾರ ಮಾಡುತ್ತಿದೆ. ಮುಂಬೈನಲ್ಲಿ ಕಾಂಗ್ರೆಸ್ ಶಾಸಕರನ್ನು ಕೂಡಿಹಾಕಿದ್ದಾರೆ, ಅವರನ್ನು ಭೇಟಿ ಮಾಡಲು  ಕೈ ನಾಯಕರಿಗೆ, ಮಾಧ್ಯಮಗಳಿಗೆ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಮಾಧ್ಯಮ ವರದಿಯಿಂದ ತಿಳಿದು ಬಂತು ಇದು ಖಂಡನೀಯ' ಎಂದಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಷ್ಟೇ ಅಲ್ಲದೇ, 'ಇತ್ತೀಚಿಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ನಡೆಸುವ ಬಗ್ಗೆ ಗಮನ ಹರಿಸಲಿ. ಅದು ಬಿಟ್ಟು ಈ ಕೊಳಕು ರಾಜಕೀಯ ಮಾಡುತ್ತೀರುವುದು ಏಕೆ?' ಎಂದೂ ಪ್ರಶ್ನಿಸಿದ್ದಾರೆ.