ಕಾವೇರಿ ನದಿ ನೀರು ವಿಚಾರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯವನ್ನು ಪ್ರತಿನಿಧಿಸುವ ಸಂಸದರ ಸಭೆಯನ್ನು ಜು.18 ರಂದು ಕರೆದಿದ್ದಾರೆ. ಸಭೆ ಕರೆದಿರುವುದರ ಜತೆಗೆ ಎಲ್ಲ ಸಂಸದರಿಗೂ ಆಹ್ವಾನ ನೀಡಿದ್ದಾರೆ. ಇದರಲ್ಲಿ ಏನೂ ವಿಶೇಷ ಇಲ್ಲ. ಆದರೆ ಸಭೆಗೆ ಆಹ್ವಾನಿಸಲು ಕೋರಿ ಎಲ್ಲ ಸಂಸದರಿಗೂ ದುಬಾರಿ ಸ್ಮಾರ್ಟ್ ಫೋನ್ ವೊಂದನ್ನು ಕಳುಹಿಸಿಕೊಟ್ಟಿದ್ದಾರೆ!
ಬೆಂಗಳೂರು[ಜು.17] ಕಾವೇರಿ ಸಭೆಗೆ ಸಂಸದರಿಗೆ ಆಹ್ವಾನ ನೀಡಿರುವುದು ಸ್ವಾಗತಾರ್ಹ. ಆದರೆ ದುಬಾರಿ ಸ್ಮಾರ್ಟ್ ಫೋನ್ ನೀಡಿರುವುದು ಯಾಕೆ? ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ತಮಗೆ ಕಳುಹಿಸಿದ್ದ ಐ-ಪೋನ್ ವಾಪಸ್ ಮಾಡಿದ್ದಾರೆ.
ವೆಚ್ಚ ಕಡಿತದ ಬಗ್ಗೆ ಈ ಹಿಂದೆ ನೀವೇ ಮಾತನಾಡಿದ್ದೀರಿ, ಆದರೆ ಸಂಸದರಿಗೆ ಈ ಬಗೆಯ ದುಬಾರಿ ಗಿಫ್ಟ್ ಯಾಕೆ ಕಳುಹಿಸಿಕೊಟ್ಟಿದ್ದೀರಿ? ಎಂದು ಪ್ರಶ್ನೆ ಮಾಡಿದ್ದು ತಮ್ಮ ಟ್ವಿಟರ್ ಖಾತೆಯಲ್ಲಿ ದುಬಾರಿ ಗಿಫ್ಟ್ ನ ಫೋಟೋ ಪೋಸ್ಟ್ ಮಾಡಿದ್ದಾರೆ.
ನಗರವನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರಿಗೆ ಸಂಬಳ ಸಿಗುತ್ತಿಲ್ಲ. ಅವರ ಸಂಕಷ್ಟ ಕೇಳುವವರು ಯಾರು ಇಲ್ಲದಾಗಿದೆ. ಒಂದು ಕಡೆ ಸರಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದು ನೀವೇ ಹೇಳುತ್ತೀರಾ? ಇಂಥ ಸಂದರ್ಭದಲ್ಲಿ ಸಾರ್ವಜನಿಕರ ಹಣವನ್ನು ಇಂಥ ದುಬಾರಿ ಗಿಫ್ಟ್ ನೀಡಲು ಯಾಕೆ ಬಳಸಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ.
