ನವದೆಹಲಿ: ಲಿಖಿತವಾಗಿ ಏನೂ ಇರದೇ ಇದ್ದರೂ, ಕೇಂದ್ರ ಸಚಿವ ಸಂಪುಟದಲ್ಲಿ ಪ್ರಧಾನಿ ನಂತರದ ಸ್ಥಾನ ಗೃಹ ಖಾತೆ ಹೊಂದಿರುವ ಸಚಿವರದ್ದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಇಂಥ ಮಹತ್ವದ ಖಾತೆಯನ್ನು ಇದೀಗ ಪ್ರಧಾನಿ ಮೋದಿ ಅವರು ತಮ್ಮ ಅತ್ಯಾಪ್ತ ಅಮಿತ್‌ ಶಾಗೆ ನೀಡುವ ಮೂಲಕ, ಸರ್ಕಾರದಲ್ಲಿ ತಮ್ಮ ನಂತರದ ಸ್ಥಾನ ಯಾರದ್ದು ಎಂಬುದನ್ನು ಸೂಚ್ಯವಾಗಿ ಎಲ್ಲರಿಗೂ ರವಾನಿಸಿದ್ದಾರೆ.

ಹಿಂದಿನ ಸಂಪುಟದಲ್ಲಿ ಮೋದಿ ನಂತರದ ಸ್ಥಾನ ಯಾರದ್ದು ಎಂಬ ಬಗ್ಗೆ ಸಾಕಷ್ಟುಚರ್ಚೆಗಳೇ ನಡೆದಿದ್ದವು. ಕಾರಣ ರಾಜ್‌ನಾಥ್‌ಸಿಂಗ್‌ ಗೃಹ ಖಾತೆ ಹೊಂದಿದ್ದರೂ, ಸದಾ ಮೋದಿ ಅವರ ಒಂದು ಪಕ್ಕದಲ್ಲಿ ರಾಜ್‌ನಾಥ್‌ ಇರುತ್ತಿದ್ದರೆ ಮತ್ತೊಂದು ಪಕ್ಕದಲ್ಲಿ ಇರುತ್ತಿದ್ದುದ್ದು ಅವರ ಮತ್ತೊಬ್ಬ ಅತ್ಯಾಪ್ತ ಅರುಣ್‌ ಜೇಟ್ಲಿ. ಹೀಗಾಗಿಯೇ ಜೇಟ್ಲಿ ಹಣಕಾಸು, ರಕ್ಷಣಾ ಖಾತೆಗಳನ್ನು ಮೋದಿ ವಹಿಸಿದ್ದರು.

ಆದರೆ ಈ ಬಾರಿ ಅಂಥ ಯಾವುದೇ ಚರ್ಚೆಗೆ ಅವಕಾಶವೇ ಇಲ್ಲ. ಕಾರಣ ಅನಾರೋಗ್ಯದ ಕಾರಣ ನೀಡಿ ಜೇಟ್ಲಿ ಸಂಪುಟದಿಂದ ಹೊರಬಿದ್ದ ಕಾರಣ, ಸಹಜವಾಗಿಯೇ ಗೃಹ ಖಾತೆ ಹೊಂದಿದ ಅಮಿತ್‌ ಶಾ, ಸರ್ಕಾರದಲ್ಲಿ ನಂ.2 ಸ್ಥಾನವನ್ನು ಹೊಂದಿರಲಿದ್ದಾರೆ.