ಬೆಂಗಳೂರು :  ಖಾಲಿ ಇರುವ ಜೆಡಿಎಸ್‌ನ ಎರಡು ಸಚಿವ ಸ್ಥಾನಗಳ ಪೈಕಿ ಒಂದನ್ನು ಪಕ್ಷೇತರ ಶಾಸಕರಿಗೆ ನೀಡುವುದು ಬಹುತೇಕ ನಿಶ್ಚಿತವಾಗಿದ್ದು, ಇನ್ನುಳಿದ ಒಂದು ಸ್ಥಾನ ಯಾರಿಗೆ ಲಭಿಸುತ್ತದೆ ಎಂಬ ಕುತೂಹಲ ಹೆಚ್ಚಿದೆ.

ಒಂದು ಸ್ಥಾನ ಪಕ್ಷದಲ್ಲಿರುವವರಿಗೆ ನೀಡಲಾಗುತ್ತದೆಯೊ ಅಥವಾ ಮತ್ತೆ ಖಾಲಿ ಉಳಿಸಿಕೊಳ್ಳಲಾಗುತ್ತದೆಯೊ ಎಂಬುದು ಮಾತ್ರ ನಿಗೂಢವಾಗಿದೆ. ಈ ಬಗ್ಗೆ ಶೀಘ್ರ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆಯಿದೆ.

ವಾಸ್ತವವಾಗಿ ಎರಡು ಸ್ಥಾನಗಳನ್ನೂ ತಮಗೆ ಬಿಟ್ಟುಕೊಡುವಂತೆ ಕಾಂಗ್ರೆಸ್‌ ನಾಯಕರು ಬೇಡಿಕೆ ಇಟ್ಟಿದ್ದರು. ಇದಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೂ ಸಹಮತ ಸೂಚಿಸಿದ್ದರು. ಆದರೆ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಮಾತ್ರ ಒಂದು ಸ್ಥಾನ ನೀಡುವುದಾಗಿ ಬಿಗಿಪಟ್ಟು ಹಿಡಿದರು. ಜೆಡಿಎಸ್‌ ಪಾಲಿನ ಒಂದು ಸಚಿವ ಸ್ಥಾನವನ್ನು ಪಕ್ಷೇತರ ಶಾಸಕ ಎನ್‌.ನಾಗೇಶ್‌ ಅವರಿಗೆ ನೀಡಿದ ನಂತರ ಉಳಿಯುವ ಮತ್ತೊಂದು ಸ್ಥಾನವನ್ನು ಪಕ್ಷದ ಶಾಸಕರಿಗೆ ನೀಡುವ ಬಗ್ಗೆ ಚರ್ಚೆ ನಡೆದಿದೆ.

ಜೆಡಿಎಸ್‌ ವತಿಯಿಂದ ವಿಧಾನಪರಿಷತ್‌ ಸದಸ್ಯರಿಗೆ ಒಂದು ಸಚಿವ ಸ್ಥಾನವನ್ನೂ ಕೊಟ್ಟಿಲ್ಲ. ಹೀಗಾಗಿ, ಪರಿಷತ್‌ ಸದಸ್ಯರಿಗೆ ಕೊಡುವುದು ಸೂಕ್ತ ಎಂಬ ಒಲವು ಪಕ್ಷದಲ್ಲಿ ವ್ಯಕ್ತವಾಗಿದೆ. ಆ ಪೈಕಿ ಬಿ.ಎಂ.ಫಾರೂಕ್‌, ಬಸವರಾಜ ಹೊರಟ್ಟಿ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪತ್ರ ನೀಡಿರುವ ಎಚ್‌.ವಿಶ್ವನಾಥ್‌ ಅವರ ಹೆಸರುಗಳು ಪ್ರಸ್ತಾಪವಾಗಿವೆ.

ಹೊರಟ್ಟಿಅವರಿಗಿಂತ ಫಾರೂಕ್‌ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದ್ದರೂ, ಇದುವರೆಗೆ ಫಾರೂಕ್‌ ಅವರಿಗೂ ಯಾವುದೇ ಮಾಹಿತಿ ರವಾನೆಯಾಗಿಲ್ಲ. ಅಲ್ಪಸಂಖ್ಯಾತರಿಗೆ ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಜೆಡಿಎಸ್‌ನಿಂದ ಒಂದು ಸ್ಥಾನವನ್ನೂ ನೀಡಿಲ್ಲ. ಕಾಂಗ್ರೆಸ್‌ನಿಂದ ಮೂವರು ಮುಸ್ಲಿಂ ಸಮುದಾಯದ ಸಚಿವರಿದ್ದಾರೆ. ಯು.ಟಿ.ಖಾದರ್‌, ಜಮೀರ್‌ ಅಹ್ಮದ್‌ ಮತ್ತು ರಹೀಂ ಖಾನ್‌. ಇದೀಗ ಜೆಡಿಎಸ್‌ನಿಂದಲೂ ಒಂದು ಸ್ಥಾನವನ್ನು ನೀಡುವ ಮೂಲಕ ಆ ವರ್ಗದ ವಿಶ್ವಾಸವನ್ನೂ ಉಳಿಸಿಕೊಳ್ಳಬೇಕು ಎಂಬ ಚಿಂತನೆ ಗಂಭೀರವಾಗಿ ನಡೆದಿದೆ.

ಆದರೆ, ಹಿರಿಯರಾದ ಹೊರಟ್ಟಿಅಥವಾ ವಿಶ್ವನಾಥ್‌ ಅವರಂಥ ಹಿರಿಯರಿಗೆ ಸಂಪುಟದಲ್ಲಿ ಅವಕಾಶ ನೀಡುವುದು ಅಗತ್ಯ. ಇದರಿಂದ ಸರ್ಕಾರವನ್ನು ಪ್ರಬಲವಾಗಿ ಪ್ರತಿಪಾದಿಸುವುದಕ್ಕೆ ಸಾಧ್ಯವಾಗುತ್ತದೆ. ಈಗಿರುವ ಸಚಿವರ ಪೈಕಿ ಯಾರೂ ಮಿತ್ರ ಪಕ್ಷ ಕಾಂಗ್ರೆಸ್‌ ಮತ್ತು ಪ್ರತಿಪಕ್ಷ ಬಿಜೆಪಿಗೆ ಬಲವಾಗಿ ಎದಿರೇಟು ನೀಡುವ ಸಾಮರ್ಥ್ಯ ಪ್ರದರ್ಶಿಸುತ್ತಿಲ್ಲ ಎಂದು ಪಕ್ಷದ ವಿಶ್ವಸನೀಯ ಮೂಲಗಳು ತಿಳಿಸಿವೆ.