ಯಾರಿಗೆ ಒಲಿಯಲಿದೆ ಕೆಪಿಸಿಸಿ ಅಧ್ಯಕ್ಷ ಪಟ್ಟ

Who Will Be KPCC President
Highlights

 ಉಪ ಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್ ಅವರು ತ್ಯಜಿಸಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾವ ಸಮುದಾಯಕ್ಕೆ ದೊರೆಯಲಿದೆ ಎಂಬ ಬಗ್ಗೆ ಕಾಂಗ್ರೆಸ್‌ನಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. ಮೂಲಗಳ ಪ್ರಕಾರ ದಲಿತ ಸಮುದಾಯಕ್ಕೆ ಸೇರಿದ ಪರಮೇಶ್ವರ್  ಅವರಿಗೆ ಈಗ ಉಪ ಮುಖ್ಯಮಂತ್ರಿ ಹುದ್ದೆ ದೊರಕಿರುವುದರಿಂದ ಈ ಹುದ್ದೆ ಮೇಲ್ವರ್ಗಗಳೆನಿಸಿದ ಒಕ್ಕಲಿಗ ಅಥವಾ ಲಿಂಗಾಯತ ಸಮುದಾಯಕ್ಕೆ ದೊರೆಯಲಿದೆ. 
 

ಬೆಂಗಳೂರು :  ಉಪ ಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್ ಅವರು ತ್ಯಜಿಸಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾವ ಸಮುದಾಯಕ್ಕೆ ದೊರೆಯಲಿದೆ ಎಂಬ ಬಗ್ಗೆ ಕಾಂಗ್ರೆಸ್‌ನಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. ಮೂಲಗಳ ಪ್ರಕಾರ ದಲಿತ ಸಮುದಾಯಕ್ಕೆ ಸೇರಿದ ಪರಮೇಶ್ವರ್  ಅವರಿಗೆ ಈಗ ಉಪ ಮುಖ್ಯಮಂತ್ರಿ ಹುದ್ದೆ ದೊರಕಿರುವುದರಿಂದ ಈ ಹುದ್ದೆ ಮೇಲ್ವರ್ಗಗಳೆನಿಸಿದ ಒಕ್ಕಲಿಗ ಅಥವಾ ಲಿಂಗಾಯತ ಸಮು ದಾಯಕ್ಕೆ ದೊರೆಯಲಿದೆ. 

ಜತೆಗೆ, ಹಿಂದುಳಿದ ವರ್ಗಕ್ಕೆ ಈ ಹುದ್ದೆ ನೀಡಬೇಕು ಎಂಬ ವಾದವೂ ಇದೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದಿಂದ ಡಿ.ಕೆ. ಶಿವಕುಮಾರ್, ಲಿಂಗಾಯತ ಸಮುದಾ ಯದಿಂದ ಎಂ.ಬಿ. ಪಾಟೀಲ್ ಮತ್ತು ಹಿಂದುಳಿದ ವರ್ಗದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಪರಿಗಣನೆಯಲ್ಲಿದೆ ಎನ್ನಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರೊಂದಿಗೆ ಈ ಬಗ್ಗೆ ಈಗಾಗಲೇ ಒಂದು ಸುತ್ತಿನ ಚರ್ಚೆ ನಡೆಸಿದೆ ಎನ್ನಲಾಗಿದೆ.

ಆದರೆ, ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಗಾದಿಯ ಜತೆಗೆ ಸಚಿವ ಸ್ಥಾನವನ್ನೂ ಕೇಳುತ್ತಿದ್ದಾರೆ.  ಹೀಗಾಗಿ, ಒಬ್ಬರಿಗೆ ಎರಡು ಹುದ್ದೆ ನೀಡಬೇಕೇ ಎಂಬ ಪ್ರಶ್ನೆ ಹೈಕಮಾಂಡನ್ನು ಕಾಡುತ್ತಿದೆ. ಇನ್ನು ಲಿಂಗಾಯತ ಸಮುದಾಯದಿಂದ ಎಂ.ಬಿ.ಪಾಟೀಲ್ ಹೆಸರನ್ನು ಗಂಭೀರವಾಗಿ ಈ ಹುದ್ದೆಗೆ ಪರಿಗಣಿಸಲಾಗುತ್ತಿದೆ. 

ಏಕೆಂದರೆ, ಡಿಸಿಎಂನಂತಹ ಪ್ರಮುಖ ಹುದ್ದೆ ಉತ್ತರ ಕರ್ನಾಟಕಕಕ್ಕೆ ದೊರಕಿಲ್ಲ ಎಂಬ ದೂರಿದೆ. ಜತೆಗೆ, ಎಂ.ಬಿ.ಪಾಟೀಲ್ ಅವರಿಗೆ ಪಕ್ಷ ನಡೆಸಲು ಮುಖ್ಯವೆನಿಸಿದ ಸಂಪನ್ಮೂಲ ಸಂಗ್ರಹ ಸಾಮರ್ಥ್ಯವೂ ಇದೆ. ಅವರಿಗೆ ಹುದ್ದೆ ನೀಡಿದರೆ, ಉತ್ತರ ಕರ್ನಾಟಕಕ್ಕೆ ಪ್ರಾಮುಖ್ಯತೆ ನೀಡಿದಂತೆ ಆಗುತ್ತದೆ. ಜತೆಗೆ, ಸಂಪನ್ಮೂಲ ವ್ಯಕ್ತಿಯೊಬ್ಬರು ಈ ಹುದ್ದೆಗೆ ಬಂದಂತೆ ಆಗುತ್ತದೆ ಎಂಬ ಚಿಂತನೆ ಹೈಕಮಾಂಡ್ ಮಟ್ಟದಲ್ಲಿದೆ ಎನ್ನ ಲಾಗಿದೆ.

ಇನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಕೊಡುಗೆ ಉತ್ತಮವಿರಬೇಕು ಎಂಬ ಬಯಕೆಯನ್ನು ಹೈಕಮಾಂಡ್ ಹೊಂದಿರುವುದರಿಂದ ಸಿದ್ದರಾಮಯ್ಯ ಅವರಿಗೆ ನೇತೃತ್ವ ನೀಡಿದರೆ ಅಹಿಂದ ವರ್ಗ ಜತೆಗೆ ನಿಲ್ಲಬಹುದು ಎಂಬ ಚಿಂತನೆಯೂ ಇದೆ ಎನ್ನುತ್ತವೆ ಮೂಲಗಳು. ಆದರೆ, ಸದ್ಯ ವಿದೇಶ ಯಾತ್ರೆಯಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾರತಕ್ಕೆ ಹಿಂತಿರುಗುವವರೆಗೂ ಈ ವಿಚಾರ ಇತ್ಯರ್ಥವಾಗುವ ಲಕ್ಷಣವಿಲ್ಲ. ರಾಹುಲ್ ಭಾರತಕ್ಕೆ ಹಿಂತಿರುಗಿದ ಕೂಡಲೇ ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಚಾಲನೆ ದೊರೆಯುತ್ತದೆ ಎಂದು ತಿಳಿದುಬಂದಿದೆ.

loader