ಬೆಂಗಳೂರು, (ಜೂನ್.04): ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರು ಮಂಗಳವಾರ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಇದೀಗ ಜೆಡಿಎಸ್ ನ ಮುಂದಿನ ಅಧ್ಯಕ್ಷ ಯಾರಾಗಲಿದ್ದಾರೆ ಎನ್ನುವ ಕುತೂಹಲ ಕಾರ್ಯಕರ್ತರಲ್ಲಿ ಮೂಡಿಸಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಪದತ್ಯಾಗ

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ನ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ಸ್ವತಃ ವಿಶ್ವನಾಥ್ ತಿಳಿಸಿದ್ದಾರೆ. ಇದೀಗ ಎದ್ದಿರುವ ಪ್ರಶ್ನೆ ಜೆಡಿಎಸ್ ನ ಮುಂದಿನ ರಾಜ್ಯಾಧ್ಯಕ್ಷರು ಯಾರಾಗಬಹುದು. 

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ತೊರೆದ ವಿಶ್ವನಾಥ್ ಹೇಳಿದ್ದೇನು?

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಯಾರಿಗೆ ಅಧ್ಯಕ್ಷ ಪಟ್ಟ ಕಟ್ಟುತ್ತಾರೆ..? ಅಂತಹ ನಾಯಕರು ಜೆಡಿಎಸ್‌ನಲ್ಲಿ ಯಾರಿದ್ದಾರೆ..? ಎನ್ನುವುದನ್ನು ಗಮನಿಸಿದರೆ ಮೊದಲಿಗೆ ಜನರ ಕಣ್ಣು ಮುಂದೆ ಬಂದು ಹೋಗುವರು ಇವರೆ. 

ಮಧು ಬಂಗಾರಪ್ಪ ಹೆಸರು ಮುಂಚೂಣಿಯಲ್ಲಿ 


ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಪಟ್ಟವನ್ನು ಹಾಸನ ಸಂಸದ, ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ತಲೆಗೆ ಕಟ್ಟಿ, ರಾಜ್ಯಾಧ್ಯಕ್ಷ ಹೊಣೆಯನ್ನು ಮಧು ಬಂಗಾರಪ್ಪ ಹೆಗಲಿಗೆ ಹಾಕುವ ಸಾಧ್ಯತೆಗಳಿವೆ. ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಪ್ತರಾಗಿರುವ ಮಧು ಬಂಗಾರಪ್ಪ, ಇನ್ನು ಯುವಕರಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸುತ್ತಿ ಪಕ್ಷ ಸಂಘಟನ ಮಾಡುತ್ತಾರೆ ಎನ್ನುವುದು ಜೆಡಿಎಸ್‌ನ ಲೆಕ್ಕಾಚಾರವಾಗಿದೆ.  ಆದ್ದರಿಂದ, ಪಕ್ಷದ ಚುಕ್ಕಾಣಿಯನ್ನು ಅವರಿಗೆ ನೀಡುವ ಸಾಧ್ಯತೆ ಇದೆ.

ವೈ.ಎಸ್‌.ವಿ.ದತ್ತಾ 


ವೈ.ಎಸ್‌.ವಿ.ದತ್ತಾ ಅವರ ಹೆಸರು ಸಹ ಜೆಡಿಎಸ್ ರಾಜ್ಯಾಧ್ಯಕ್ಷರ ಪಟ್ಟಕ್ಕೆ ಕೇಳಿಬರುತ್ತಿದೆ. 2018ರ ಚುನಾವಣೆಯಲ್ಲಿ ದತ್ತ ಅವರು ಕಡೂರು ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಬಳಿಕ ದತ್ತ ಅವರನ್ನ ಲೋಸಭಾ ಚುನಾವಣೆಯಲ್ಲಿ ಜೆಡಿಎಸ್ ಪ್ರಚಾರದ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ವೈ.ಎಸ್.ವಿ.ದತ್ತಾ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಮಾನಸ ಪುತ್ರ ಎಂದೇ ಖ್ಯಾತಿ ಪಡೆದಿದ್ದಾರೆ. ಪಕ್ಷದ ನಾಯಕರು, ದೇವೇಗೌಡರ ಕುಟುಂಬಕ್ಕೆ ಆಪ್ತರಾಗಿದ್ದಾರೆ. ಆದ್ದರಿಂದ, ದತ್ತಾ ಅವರು ಅಧ್ಯಕ್ಷರಾದರೂ ಅಚ್ಚರಿ ಪಡಬೇಕಿಲ್ಲ.

ಎಚ್ ಡಿ ಕುಮಾರಸ್ವಾಮಿ 


ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಅಧ್ಯಕ್ಷ ಪಟ್ಟವನ್ನು ತಮ್ಮ ಬಳಿಯೇ ಉಳಿಸಿಕೊಳ್ಳಬಹುದು . ಮತ್ತೊಂದೆಡೆ ಅವರು ಮುಖ್ಯಮಂತ್ರಿಯಾಗಿದ್ದು ಇಡೀ ರಾಜ್ಯವನ್ನು ನೋಡಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಹುದ್ದೆಗಳನ್ನು ನಿರ್ವಹಿಸುವುದು ಕಷ್ಟ ಸಾಧ್ಯ. ಮತ್ತು ಪಕ್ಷ ಸಂಘಟನೆ ಬಗ್ಗೆ ಹೆಚ್ಚು ಗಮನ ಹರಿಸುವುದು ಸಾಧ್ಯವಿಲ್ಲ.

ಬಸವರಾಜ್ ಹೊರಟ್ಟಿ


ವಿಧಾನಪರಿಷತ್ ಸದಸ್ಯ, ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಅವರು ಸಹ ರಾಜ್ಯಾಧ್ಯಕ್ಷ ಹುದ್ದೆ ನಿಬಾಯಿಸುವ ನಾಯಕರಾಗಿದ್ದಾರೆ. ಇನ್ನೊಂದು ಬಹಳ ಪ್ರಮುಖವಾಗಿ ಹೊರಟ್ಟಿ ಲಿಂಗಾಯತ ಸಮುದಾಯಕ್ಕೆ ಸೇರಿರುವುದರಿಂದ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದರೆ ಪಕ್ಷಕ್ಕೆ ನೆರವಾಗಬಹುದು. ಮತ್ತೊಂದು ಅಂಶ ಅಂದರೆ ಹೊರಟ್ಟಿ ಅವರು ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ರಾಜ್ಯಾಧ್ಯಕ್ಷ ಹುದ್ದೆಯನ್ನು ನಿರಾಕರಿಸಬಹುದು.

ನಿಖಿಲ್‌ ಕುಮಾರಸ್ವಾಮಿಗೂ ಇದೆ ಚಾನ್ಸ್


ಹೌದು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್  ವಿರುದ್ಧ ಸೋತಿರುವ ನಿಖಿಲ್ ಕುಮಾರಸ್ವಾಮಿ, ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಒಂದು ಸ್ಥಾನ ಕೊಡಬೇಕೆದು ಜೆಡಿಎಸ್ ಅಧ್ಯಕ್ಷರನ್ನಾಗಿ ಮಾಡಿದರೂ ಮಾಡಬಹುದು. ಇನ್ನುಂದು ಕಡೆ ಎಲ್ಲಾ ಹುದ್ದೆಗಳು ಕುಟುಂಬದವರಿಗೆ ನೀಡಿದರೆ ಹೇಗೆ ಎನ್ನುವ ಆರೋಪಗಳು ಬರಬಹುದು ಎಂದು  ನಿಖಿಲ್ ಅವರಿಗೆ ಅಧ್ಯಕ್ಷ ಸ್ಥಾನ ಕೈತಪ್ಪಬಹುದು.