ಶಿವಮೊಗ್ಗ :  ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್‌ ದಿಢೀರ್‌ ಚುನಾವಣಾ ಕಣದಿಂದ ನಿವೃತ್ತಿಯಾಗಿ ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸುವಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರ ಹಣದ ಬಲವೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ. 

ಜೊತೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಪತ್ನಿ ಸೋಲುವ ಭಯದಿಂದ ಕುತಂತ್ರ ರಾಜಕಾರಣ ಮಾಡಿದ್ದಾರೆ ಎಂದೂ ದೂರಿದ್ದಾರೆ.

ಶಿಕಾರಿಪುರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಸಹೋದರರು ಹಣದ ಆಸೆ ತೋರಿಸಿ ಚಂದ್ರಶೇಖರ್‌ ಅವರನ್ನು ತಮ್ಮ ಕಡೆ ಕರೆದೊಯ್ಯುವ ಯತ್ನ ನಡೆಸಿದ್ದಾರೆ. 

ಆದರೆ, ನಮಗೇನು ಈ ಬಗ್ಗೆ ಚಿಂತೆಯಿಲ್ಲ. ಇದರ ಪರಿಣಾಮ ಬೇರೆ ಯಾವುದೇ ಕ್ಷೇತ್ರದ ಮೇಲೂ ಆಗುವುದಿಲ್ಲ. ವಾಸ್ತವವಾಗಿ ರಾಮನಗರದಲ್ಲಿ ಬಿಜೆಪಿಗೆ ಅಂತಹ ಶಕ್ತಿಯೇನೂ ಇರಲಿಲ್ಲ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಪತ್ನಿಯನ್ನು ಕಣಕ್ಕೆ ಇಳಿಸಿದ್ದು, ಸೋಲುವ ಭಯ ಎದುರಾಗಿದ್ದರಿಂದ ಈ ಕುತಂತ್ರ ರಾಜಕಾರಣ ಮಾಡಿದ್ದಾರೆ ಎಂದಷ್ಟೇ ಹೇಳಿ ಸುಮ್ಮನಾದರು.

ಪಕ್ಷದ ಮುಂದಿನ ನಡೆಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಯಡಿಯೂರಪ್ಪ ನಿರಾಕರಿಸಿದರು.