ಡಿಎಂಕೆ ಮುಂದಿನ ಅಧ್ಯಕ್ಷ ಯಾರು..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Aug 2018, 2:40 PM IST
Who Is the Next President DMK
Highlights

ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ನಿಧನದಿಂದ ತೆರವಾಗಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಮುಂದಿನ ಅಧ್ಯಕ್ಷರಾಗಿ ಅವರ ಪುತ್ರ ಸ್ಟಾಲಿನ್ ಅವರನ್ನು ಆಯ್ಕೆ ಮಾಡಲು ಸಿದ್ಧತೆ ನಡೆದಿದೆ. 

ಚೆನ್ನೈ: ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ನಿಧನದಿಂದ ತೆರವಾಗಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅವರ ಪುತ್ರ ಎಂ.ಕೆ. ಸ್ಟಾಲಿನ್‌ ಅವರಿಗೆ ಪಟ್ಟಾಭಿಷೇಕ ಮಾಡುವ ಪ್ರಯತ್ನಗಳು ಪಕ್ಷದೊಳಗೆ ಆರಂಭವಾಗಿವೆ. ಇದೇ ವೇಳೆ, ಕರುಣಾನಿಧಿ ಅವರ ಪುತ್ರಿ ಕನಿಮೋಳಿ ಅವರಿಗೂ ಪಕ್ಷದಲ್ಲಿ ಬಡ್ತಿ ನೀಡುವ ಸಾಧ್ಯತೆ ಕಂಡುಬರುತ್ತಿದೆ. ಆದರೆ ಮತ್ತೊಬ್ಬ ಪುತ್ರ ಎಂ.ಕೆ. ಅಳಗಿರಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಯಾವುದೇ ಚರ್ಚೆಗಳು ನಡೆಯದಿರುವುದರಿಂದ ಅವರ ನಡೆ ಏನಾಗಿರಬಹುದು ಎಂಬ ಕುತೂಹಲ ಗರಿಗೆದರಿದೆ.

ಚೆನ್ನೈನಲ್ಲಿ ಆ.14ರಂದು ಡಿಎಂಕೆಯ ಕಾರ್ಯಕಾರಿ ಸಮಿತಿಯ ಸಭೆ ಕರೆಯಲಾಗಿದೆ. ಹಾಲಿ ಪಕ್ಷದ ಕಾರ್ಯಾಧ್ಯಕ್ಷರಾಗಿರುವ ಎಂ.ಕೆ. ಸ್ಟಾಲಿನ್‌ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಕೆ. ಅನ್ಬಳಗನ್‌ ಅವರು ಶುಕ್ರವಾರ ಭೇಟಿ ಮಾಡಿದ ತರುವಾಯ ಈ ದಿನಾಂಕ ನಿಗದಿಯಾಗಿದೆ.

ಅಧ್ಯಕ್ಷರನ್ನು ನೇರವಾಗಿ ನೇಮಕಗೊಳಿಸುವ ಅಧಿಕಾರ ಪಕ್ಷದ ಕಾರ್ಯಕಾರಿ ಸಮಿತಿಗೆ ಇಲ್ಲ. ಬದಲಿಗೆ ಸ್ಟಾಲಿನ್‌ ಪಟ್ಟಾಭಿಷೇಕಕ್ಕೆ ಅನುಮೋದನೆ ನೀಡಬಹುದು. ಆನಂತರ ಸಾಮಾನ್ಯ ಮಂಡಳಿ ಸಭೆಯಲ್ಲಿ ಇದನ್ನು ದೃಢೀಕರಿಸಿ, ಅಧಿಕೃತವಾಗಿ ಪ್ರಕಟಣೆ ಮಾಡಲಾಗುತ್ತದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಸ್ಟಾಲಿನ್‌ ಜತೆಯಲ್ಲೇ ಅವರ ಮಲಸಹೋದರಿ ಕನಿಮೋಳಿ ಅವರಿಗೆ ಉಪಪ್ರಧಾನ ಕಾರ್ಯದರ್ಶಿ ಅಥವಾ ಖಜಾಂಚಿ ಸ್ಥಾನಕ್ಕೆ ಬಡ್ತಿ ನೀಡುವ ಸಾಧ್ಯತೆಗಳು ಕಂಡುಬರುತ್ತಿವೆ. 2014ರಲ್ಲಿ ಪಕ್ಷದಿಂದ ಉಚ್ಚಾಟನೆಗೊಂಡಿರುವ ಸ್ಟಾಲಿನ್‌ ಅವರ ಸಹೋದರ ಅಳಗಿರಿ ಅವರ ಸೇರ್ಪಡೆ ಕುರಿತು ಯಾವುದೇ ನಿರ್ಧಾರವಾಗಿಲ್ಲ.

ಸ್ಟಾಲಿನ್‌ ಅವರನ್ನು ಡಿಎಂಕೆ ಮುಖ್ಯಸ್ಥರನ್ನಾಗಿ ನೇಮಕ ಮಾಡುವುದರಿಂದ 2019ರ ಲೋಕಸಭೆ ಚುನಾವಣೆಗೂ ಮುನ್ನ ಡಿಎಂಕೆ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದಂತಾಗುತ್ತದೆ ಎಂದು ರಾಜಕೀಯ ತಜ್ಞರು ತಿಳಿಸಿದ್ದಾರೆ.

loader