ನವದೆಹಲಿ (ಜೂ.14): ಕರ್ನಾಟಕದ ರಾಜ್ಯಪಾಲ ವಜುಭಾಯ್‌ ವಾಲಾ ಸೇರಿದಂತೆ ಒಟ್ಟು 9 ರಾಜ್ಯಪಾಲರ ಐದು ವರ್ಷಗಳ ಅವಧಿ ಮುಂದಿನ ಮೂರು ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಈ ರಾಜ್ಯಪಾಲರನ್ನೇ ಮತ್ತೊಂದು ಅವಧಿಗೆ ಸರ್ಕಾರ ಮುಂದುವರಿಸುತ್ತಾ ಅಥವಾ ಹೊಸಬರನ್ನು ನೇಮಕ ಮಾಡುತ್ತಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ತೆರವಾಗಲಿರುವ ರಾಜ್ಯಪಾಲ ಹುದ್ದೆಗಳಿಗೆ ಕೇಂದ್ರದ ಮಾಜಿ ಸಚಿವರಾದ ಸುಷ್ಮಾ ಸ್ವರಾಜ್‌, ಉಮಾ ಭಾರತಿ ಹಾಗೂ ಮಾಜಿ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರನ್ನು ನೇಮಕ ಮಾಡಲಾಗುತ್ತದೆ ಎಂಬ ದಟ್ಟವದಂತಿ ಹಬ್ಬಿದೆ.

ವಜುಭಾಯ್‌ ವಾಲಾ ಅವರಿಗೆ ಈಗ 80 ವರ್ಷ. ಬರುವ ಆಗಸ್ಟ್‌ನಲ್ಲಿ ಅವರು ನಿವೃತ್ತಿಯಾಗಲಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿರುವ ಕೇಸರಿನಾಥ ತ್ರಿಪಾಠಿ ಅವರಿಗೆ 84 ವರ್ಷ. ಅವರ ಅವಧಿ ಜುಲೈನಲ್ಲಿ ಮುಕ್ತಾಯಗೊಳ್ಳುತ್ತದೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಗೆ ಈ ಎರಡೂ ರಾಜ್ಯಗಳು ಮಹತ್ವದ್ದಾಗಿವೆ. ಹೀಗಾಗಿ ಕೇಂದ್ರ ಸರ್ಕಾರ ಯಾರನ್ನು ನೇಮಕ ಮಾಡಬಹುದು ಎಂಬ ಕುತೂಹಲ ಇದೀಗ ಎಲ್ಲರಲ್ಲಿ ಮೂಡಿದೆ.

ಕರ್ನಾಟಕ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಸೇರಿ 9 ರಾಜ್ಯಗಳ ರಾಜ್ಯಪಾಲರ ಅವಧಿ ಪೂರ್ಣಗೊಳ್ಳುತ್ತಿದೆ. ಈ ನಡುವೆ, ಛತ್ತೀಸ್‌ಗಢ ಹಾಗೂ ಮಿಜೋರಂನಲ್ಲಿ ರಾಜ್ಯಪಾಲ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡಬೇಕಾಗಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಸದ್ಯ ಒಬ್ಬರೇ ರಾಜ್ಯಪಾಲರು ಇದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ನೇಮಕಗೊಂಡು, ಎನ್‌ಡಿಎ ಸರ್ಕಾರದಲ್ಲೂ ಮುಂದುವರಿದಿರುವ ಇಎಸ್‌ಎಲ್‌ ನರಸಿಂಹನ್‌ ಅವರನ್ನು ಒಂದು ರಾಜ್ಯದಲ್ಲಿ ಮಾತ್ರ ಮುಂದುವರಿಸಿದರೆ ಇನ್ನೊಂದು ರಾಜ್ಯಕ್ಕೆ ರಾಜ್ಯಪಾಲರನ್ನು ನೇಮಕ ಮಾಡಬೇಕಾಗುತ್ತದೆ. ಹೀಗಾಗಿ ಮುಂದಿನ 3 ತಿಂಗಳಲ್ಲಿ ಒಟ್ಟು 12 ರಾಜ್ಯಪಾಲ ಹುದ್ದೆಗೆ ಸೂಕ್ತ ವ್ಯಕ್ತಿಗಳನ್ನು ಸರ್ಕಾರ ಹುಡುಕಬೇಕಾಗಿದೆ.

ಹಾಲಿ ರಾಜ್ಯಪಾಲರ ಪೈಕಿ ಅತ್ಯಂತ ಹಿರಿಯರಾಗಿರುವ, 87 ವರ್ಷದ ಕಲ್ಯಾಣ್‌ ಸಿಂಗ್‌ (ರಾಜಸ್ಥಾನ), ಕರ್ನಾಟಕ ಮೂಲದ, 87 ವರ್ಷದ ಪಿ.ಬಿ. ಆಚಾರ್ಯ (ನಾಗಾಲ್ಯಾಂಡ್‌) ಹಾಗೂ 85 ವರ್ಷದ ರಾಮ್‌ನಾಯಕ್‌ (ಉತ್ತರಪ್ರದೇಶ) ಅವರ ಅವಧಿಯನ್ನು ವಿಸ್ತರಿಸಲಾಗುತ್ತದೆಯೇ ಎಂಬ ಕುತೂಹಲವಿದೆ. ಕೇರಳ ರಾಜ್ಯಪಾಲರಾಗಿರುವ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ. ಸದಾಶಿವಂ ಅವರ ಅವಧಿಯೂ ಆಗಸ್ಟ್‌ನಲ್ಲಿ ಮುಗಿಯಲಿದೆ. ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸುವ ಸಾಧ್ಯತೆ ಇದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಕೊಡಿಸಿ ಮಿಜೋರಂನಿಂದ ಕರೆತರಲಾದ ಕೇರಳ ಬಿಜೆಪಿ ನಾಯಕ ಕುಮ್ಮನಂ ರಾಜಶೇಖರನ್‌ ಅವರನ್ನು ಮತ್ತೆ ರಾಜ್ಯಪಾಲ ಹುದ್ದೆಗೆ ಕಳುಹಿಸಲಾಗುತ್ತದೆಯೇ ಎಂಬುದು ಗೊತ್ತಾಗಿಲ್ಲ. ನಾಗಾಲ್ಯಾಂಡ್‌ ರಾಜ್ಯಪಾಲರಾಗಿರುವ ಕರ್ನಾಟಕ ಮೂಲದ ಪಿ.ಬಿ. ಆಚಾರ್ಯ (87) ಅವರು ಆಗಸ್ಟ್‌ನಲ್ಲಿ ನಿವೃತ್ತರಾಗಲಿದ್ದಾರೆ.