Asianet Suvarna News Asianet Suvarna News

ಶಿರೂರು ಶ್ರೀ ವಿಧಿವಶ : ಉತ್ತರಾಧಿಕಾರಿ ಪಟ್ಟ ಯಾರಿಗೆ..?

ಉಡುಪಿ ಅಷ್ಟ ಮಠದ ಅಲಿಖಿತ ಸಂಪ್ರದಾಯ ಪ್ರಕಾರ ಶಿಷ್ಯನಿಲ್ಲದೆ ಪೀಠಸ್ಥರಾಗಿರುವ ಯತಿಯೊಬ್ಬರು ಪೀಠದಲ್ಲಿರುವಾಗಲೇ ಅಸ್ತಂಗತರಾದರೆ ಇನ್ನೊಂದು ಮಠ ಉಸ್ತುವಾರಿಯನ್ನು ನೋಡಿಕೊಳ್ಳಬೇಕಾಗುತ್ತದೆ. 

Who Is successor Of Shiroor Mutt
Author
Bengaluru, First Published Jul 20, 2018, 7:43 AM IST

ಉಡುಪಿ: ಶಿರೂರು ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಶಿರೂರು ಮಠದ ಉಸ್ತುವಾರಿ ಸೋದೆ ವಾದಿರಾಜ ಮಠಕ್ಕೆ ಬರಲಿದೆ. ಉಡುಪಿ ಅಷ್ಟ ಮಠದ ಅಲಿಖಿತ ಸಂಪ್ರದಾಯ ಪ್ರಕಾರ ಶಿಷ್ಯನಿಲ್ಲದೆ ಪೀಠಸ್ಥರಾಗಿರುವ ಯತಿಯೊಬ್ಬರು ಪೀಠದಲ್ಲಿರುವಾಗಲೇ ಅಸ್ತಂಗತರಾದರೆ ಇನ್ನೊಂದು ಮಠ ಉಸ್ತುವಾರಿಯನ್ನು ನೋಡಿಕೊಳ್ಳಬೇಕಾಗುತ್ತದೆ. ಶಿಷ್ಯ ಸ್ವೀಕಾರ ಆಗಿರದಿದ್ದರೆ ಯತಿ ಇಲ್ಲದೆ ಪೀಠ ಶೂನ್ಯವಾಗಿರಲು ಅವಕಾಶ ಇಲ್ಲ. ಆಗ
ಅಷ್ಟ ಮಠಗಳಲ್ಲಿ ಇನ್ನೊಂದು ಮಠ ಖಾಲಿಯಾದ ಪೀಠದ ಉಸ್ತುವಾರಿಯನ್ನು ನೋಡಿಕೊಳ್ಳಬೇಕು ಎನ್ನುವ ನಿಯಮವನ್ನು ರೂಪಿಸಿದ್ದು ಶ್ರೀ
ವಾದಿರಾಜರು. 

ಈ ರೀತಿಯ ಕ್ರಮಕ್ಕೆ  ‘ದ್ವಂದ್ವ ಮಠ’ ಎನ್ನುತ್ತಾರೆ. ಉಡುಪಿಯ ಅಷ್ಟಮಠಗಳ ವಿಚಾರದಲ್ಲಿ ಇದೇ ಸಂಪ್ರದಾಯ ನಡೆದುಕೊಂಡು ಬಂದಿದೆ. ಹೀಗಾಗಿ ನಿಯಮದಂತೆ ಸೋದೆ ಮಠ ಈಗ ಶಿರೂರು ಮಠದ ವಿಚಾರದಲ್ಲಿ ದ್ವಂದ್ವ ಮಠವಾಗಿದೆ ಎನ್ನುತ್ತಾರೆ ಉಡುಪಿ ಅಷ್ಟ ಮಠಗಳ ನಿಕಟವರ್ತಿ, ಮಂಗಳೂರು ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ. 

ಪೇಜಾವರಶ್ರೀ ನೇತೃತ್ವದಲ್ಲಿ ಆಯ್ಕೆ: ಶಿರೂರು ಶ್ರೀಗಳ ಉತ್ತರಾಧಿಕಾರಿ ನೇಮಕದ ಅಧಿಕಾರವನ್ನು ಅಷ್ಟಮಠಗಳಲ್ಲಿ ಹಿರಿಯ ಯತಿಗಳಿಗೆ  ನೀಡಲಾಗಿದೆ. ಪ್ರಸಕ್ತ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಅವರೇ ಹಿರಿಯ ಯತಿಗಳಾಗಿದ್ದಾರೆ. ಹಾಗಾಗಿ ಪೇಜಾವರಶ್ರೀಗಳ ನೇತೃತ್ವದಲ್ಲಿ ಉಳಿದ 6 ಮಠಗಳ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಶಿರೂರು ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಕ ಮಾಡಲಿದ್ದಾರೆ.  

ಉತ್ತರಾಧಿಕಾರಿ ಸ್ವೀಕರಿಸಬೇಕು ಎಂಬ ಇತರ ಮಠಾಧೀಶರ ಪಟ್ಟಿಗೆ ಪ್ರತಿಯಾಗಿ, ಈಗ ಶಿಷ್ಯನನ್ನು ಸ್ವೀಕರಿಸುವುದಿಲ್ಲ ಎಂದು ಶಿರೂರು ಶ್ರೀಗಳು ಪಟ್ಟು ಹಿಡಿದಿದ್ದರೂ, ತಮ್ಮ ಮುಂದಿನ ಪರ್ಯಾಯವನ್ನು ಶಿಷ್ಯನ ಕೈಯಲ್ಲಿಯೇ ಮಾಡಿಸುತ್ತೇನೆ ಎಂದು ‘ಕನ್ನಡಪ್ರಭ’ಕ್ಕೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು. ಆದರೆ ಉತ್ತರಾಧಿಕಾರಿ ಯಾರು ಎಂಬುದನ್ನು ಹೇಳಲು ನಿರಾಕರಿಸಿದ್ದರು.

ಜೊತೆಗೆ ಗುಟ್ಟಾಗಿ ಉತ್ತರಾಧಿಕಾರಿ  ಶಿಷ್ಯನನ್ನು ಸ್ವೀಕರಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದರು. ಬೆಂಗಳೂರಿನ ಇಂಜಿನಿಯರಿಂಗ್ ಪದವೀಧರ ಪ್ರಶಾಂತ್ ಎಂಬವರು ಶಿರೂರು ಮಠದ ಶಿಷ್ಯತ್ವ ಸ್ವೀಕರಿಸುವುದಕ್ಕೆ ಮುಂದೆ ಬಂದಿದ್ದರು. ಶಿರೂರು ಶ್ರೀಗಳಿಗೂ ಇದು ಒಪ್ಪಿಗೆಯಾಗಿತ್ತು ಎಂದು ಶ್ರೀಗಳಿಗೆ ಆಪ್ತರಾಗಿದ್ದ ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. 

Follow Us:
Download App:
  • android
  • ios