ಆಡಳಿತಾರೂಢ ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳು ಇದೀಗ ರಾಜ್ಯ ರಾಜಕಾರಣದಲ್ಲಿ ಕಂಪನ ಸೃಷ್ಟಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಂದ ಆಪರೇಷನ್ ಕಮಲ ನಡೆಯುತ್ತಿದೆಯೋ ಅಥವಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಂದಲೇ ಆಪರೇಷನ್ ನಡೆಯುತ್ತಿದೆಯೋ ಎಂಬುದು ಕುತೂಹಲಕರವಾಗಿದೆ.
ಬೆಂಗಳೂರು : ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಿಂದ ಆರಂಭಗೊಂಡ ಆಡಳಿತಾರೂಢ ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳು ಇದೀಗ ರಾಜ್ಯ ರಾಜಕಾರಣದಲ್ಲಿ ಕಂಪನ ಸೃಷ್ಟಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಂದ ಆಪರೇಷನ್ ಕಮಲ ನಡೆಯುತ್ತಿದೆಯೋ ಅಥವಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಂದಲೇ ಆಪರೇಷನ್ ನಡೆಯುತ್ತಿದೆಯೋ ಎಂಬುದು ಕುತೂಹಲಕರವಾಗಿದೆ.
ಇವೆರಡರಲ್ಲಿ ಯಾವುದು ಯಶಸ್ವಿಯಾಗುತ್ತದೆ ಎನ್ನುವುದರ ಬಗ್ಗೆ ಈ ತಿಂಗಳ 15ಕ್ಕೆ ಸಿದ್ದರಾಮಯ್ಯ ಅವರು ವಿದೇಶ ಪ್ರವಾಸದಿಂದ ವಾಪಸಾದ ನಂತರ ಸ್ಪಷ್ಟಚಿತ್ರಣ ಹೊರಬೀಳಲಿದೆ.
"
ಜಾರಕಿಹೊಳಿ ಸಹೋದರರು ಸೇರಿದಂತೆ ಅವರೊಂದಿಗೆ ಗುರುತಿಸಿಕೊಂಡಿರುವ ಮತ್ತು ಗುರುತಿಸಿಕೊಳ್ಳುತ್ತಿರುವ ಕಾಂಗ್ರೆಸ್ ಶಾಸಕರ ಪೈಕಿ ಬಹುತೇಕರು ಸಿದ್ದರಾಮಯ್ಯ ಅವರ ಬೆಂಬಲಿಗರೇ ಎನ್ನುವುದು ಗಮನಾರ್ಹ. ಹೀಗಾಗಿ, ಸಿದ್ದರಾಮಯ್ಯ ಅವರು ವಿದೇಶ ಪ್ರವಾಸದಿಂದ ಹಿಂದಿರುಗಿದ ನಂತರ ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಪ್ರಸಕ್ತ ಬಿಕ್ಕಟ್ಟು ತಾರ್ಕಿಕ ಹಂತಕ್ಕೆ ತಲುಪುವ ನಿರೀಕ್ಷೆ ಕಾಂಗ್ರೆಸ್ ಮತ್ತು ಬಿಜೆಪಿ ಪಾಳೆಯದಲ್ಲಿದೆ.
ಕಾಂಗ್ರೆಸ್ಸಿನ ಪ್ರಭಾವಿ ಮುಖಂಡರಾದ ಜಾರಕಿಹೊಳಿ ಸಹೋದರರು ಆರಂಭಿಸಿರುವ ಈ ಬಿಕ್ಕಟ್ಟಿಗೆ ಎರಡು ಆಯಾಮಗಳಿವೆ. ಜಾರಕಿಹೊಳಿ ಸಹೋದರರಿಗೆ ಕಾಂಗ್ರೆಸ್‌ನಲ್ಲಿ ತಾವಿಟ್ಟಿರುವ ಬೇಡಿಕೆಗಳು ಈಡೇರಬೇಕು. ಆ ಮೂಲಕ ಪಕ್ಷದಲ್ಲಿನ ತಮ್ಮ ವಿರೋಧಿಗಳನ್ನು ಮಣಿಸಬೇಕು. ಒಂದು ವೇಳೆ ತಮ್ಮ ಬೇಡಿಕೆ ಈಡೇರದಿದ್ದರೆ ಅಂತಿಮ ಅಸ್ತ್ರವಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ವಲಸೆ ಹೋಗುವುದು. ಇದಕ್ಕಾಗಿ ತಮ್ಮದೇ ಪಕ್ಷದ ಅತೃಪ್ತ ಶಾಸಕರನ್ನು ಸಂಪರ್ಕಿಸುವ ಮೂಲಕ ಸಂಘಟಿತ ಶಕ್ತಿಯಾಗಿ ಹೊರಹೊಮ್ಮುವ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ಪಿಎಲ್‌ಡಿ ಬ್ಯಾಂಕ್ ಚುನಾವಣೆ ಒಂದು ನೆಪ ಅಷ್ಟೇ. ಜಾರಕಿಹೊಳಿ ಸಹೋದರರು ಆರಂಭಿಸಿರುವ ಬಂಡಾಯಕ್ಕೆ ಸಿದ್ದರಾಮಯ್ಯ ಅವರದ್ದೇ ಪರೋಕ್ಷ ಬೆಂಬಲ ಇದೆ ಎಂಬ ಮಾತು ಬಲವಾಗಿ ಕೇಳಿಬಂದಿದೆ.
ಸಿದ್ದರಾಮಯ್ಯ ಅವರು ಒಂದೇ ಏಟಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ತಮ್ಮದೇ ಪಕ್ಷದ ಸಚಿವ ಡಿ.ಕೆ.ಶಿವಕುಮಾರ್ ಅವರ ವೇಗಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಜಾರಕಿಹೊಳಿ ಸಹೋದರರ ಬಂಡಾಯಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಅಂತಿಮ ಹಂತದಲ್ಲಿ ಈ ಸಮಸ್ಯೆ ಬಗೆಹರಿಸುವ ಮೂಲಕ ತಮ್ಮ ಪ್ರಾಮುಖ್ಯತೆಯನ್ನು ಸಾಬೀತುಪಡಿಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಆದರೆ, ಕಾಂಗ್ರೆಸ್‌ನಲ್ಲಿಯ ಈ ಆಂತರಿಕ ಭಿನ್ನಮತದ ಲಾಭವನ್ನು ಪಡೆದುಕೊಳ್ಳಲು ಬಿಜೆಪಿಯೂ ದೊಡ್ಡ ಹೆಜ್ಜೆಯನ್ನೇ ಇರಿಸಿದೆ. ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ಸಿನ ಅತೃಪ್ತ ಶಾಸಕರನ್ನು ಸೆಳೆಯಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಸಮ್ಮಿಶ್ರ ಸರ್ಕಾರ ಪತನಗೊಂಡು ಹೊಸದಾಗಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಎಂಬ ಯೋಜನೆಯೊಂದಿಗೆ ಅತೃಪ್ತ ಶಾಸಕರನ್ನು ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಒಂದು ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡರೂ ಅದು ಆಂತರಿಕ ತಿಕ್ಕಾಟದಿಂದ ಪತನಗೊಂಡಿತು ಎಂಬ ಭಾವನೆ ಬರಬೇಕೇ ಹೊರತು ಬಿಜೆಪಿಯಿಂದ ಅಲ್ಲ ಎಂಬಷ್ಟರ ಮಟ್ಟಿಗೆ ಎಚ್ಚರಿಕೆ ವಹಿಸಲಾಗುತ್ತಿದೆ.
