ರಸಋಷಿ ಕುವೆಂಪುಗೆ ಗೂಗಲ್ ಡೂಡಲ್ ಗೌರವ: ಯಾರ ಕಲೆಯಿದು?
- ರಸಋಷಿಗೆ ಗೌರವ ಸೂಚಿಸಿದ ಗೂಗಲ್
- ಡೂಡಲ್ ಗ್ರಾಫಿಕ್ಸ್ ಮಾಡಿದ್ದು ಕೊಲ್ಕತ್ತಾ ಮೂಲದ ಕಲಾವಿದ.
- ಕನ್ನಡ ಫಾಂಟ್‌ಗೆ ಸಹಕರಿಸಿದ್ದು ಬೆಂಗಳೂರು ಮೂಲದ ಮಹಿಳೆ.
ಬೆಂಗಳೂರು: ಗೂಗಲ್‌ನಂಥ ಅಮೆರಿಕ ಮೂಲದ ಸರ್ಚ್ ಎಂಜಿನ್ ಕಂಪನಿಯೊಂದು ಭಾರತದ ಸಾಧಕರಿಗೆ ಗೂಗಲ್ ಡೂಡಲ್ ಮೂಲಕ ಗೌರವ ಸೂಚಿಸಿದರೆ ಸಾಕು, ನಮಗೆ ಎಲ್ಲಿಲ್ಲದ ಸಂಭ್ರಮ. ಅಂಥದ್ರಲ್ಲಿ ಇಂದು ಯುಗದ ಕವಿ, ಜಗದ ಕವಿ, ರಾಮಾಯಣ ದರ್ಶನಂ ಬರೆದ ಕವಿಯನ್ನು ಗೌರವಿಸಿದ್ದು, ಇಡೀ ಭಾರತೀಯರಿಗೇ ಹೆಮ್ಮೆಯ ವಿಷಯ. ಅದರಲ್ಲಿಯೂ ಗೂಗಲ್ ಡೂಡಲ್‌ನಲ್ಲಿ ಕನ್ನಡದ ಅಕ್ಷರಗಳಿರುವುದು ಕನ್ನಡಿಗರ ಅಭಿಮಾನವನ್ನು ನೂರ್ಮಡಿಗೊಳಿಸಿದೆ.
ಮಲೆನಾಡಿನ ಹಸಿರು ಪರಿಸರ, ಕಾಡು, ಕವಿಶೈಲದ ಬಂಡೆ ಕಲ್ಲಿನ ಮೇಲೆ ಕುಳಿತು ಬರೆಯುವುದರಲ್ಲಿ ತಲ್ಲೀನರಾದ ಕುವೆಂಪು ಚಿತ್ರವನ್ನು ಗ್ರಾಫಿಕ್ಸ್ ಮಾಡಿದ ಕಲಾವಿದ ಯಾರು ಗೊತ್ತಾ?
ಕೊಲ್ಕತ್ತಾ ಮೂಲದ ಉಪಮನ್ಯು ಭಟ್ಟಚಾರ್ಯ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಬರೆದು ಕೊಂಡಿರುವ ಕಲಾವಿದ, 'ಕನ್ನಡದ ಮಹಾನ್ ಸಾಹಿತಿ ಕುವೆಂಪು ಹುಟ್ಟುಹಬ್ಬದ ಸಲುವಾಗಿ ಗ್ರಾಫಿಕ್ಸ್ ಮಾಡಿಕೊಡುವಂತೆ ಗೂಗಲ್ ನನ್ನನ್ನು ಕೇಳಿದ್ದನ್ನು ಇನ್ನೂ ನಂಬಲಾಗುತ್ತಿಲ್ಲ. ಬೆಂಗಳೂರು ಮೂಲದ ಸ್ವಾತಿ ಸುನಿಲ್ ಶೇಲರ್ ಕನ್ನಡವನ್ನು ಟೈಪಿಸಲು ಸಹಕರಿಸಿದ್ದಾರೆ, ಎಂದು ಈ ಗ್ರಾಫಿಕ್ಸ್ ಸೃಷ್ಟಿಸಲು ಸಹಕರಿಸಿ ಸರ್ವರಿಗೂ ಥ್ಯಾಂಕ್ಸ್,' ಎಂದಿದ್ದಾರೆ ಭಟ್ಟಚಾರ್ಯ.
ವರನಟ ರಾಜ್‌ಕುಮಾರ್ ನಂತರ ಡೂಡಲ್ ಮೂಲಕ ಗೂಗಲ್ ಗೌರವ ಸೂಚಿಸಿದ ಎರಡನೇ ಕನ್ನಡಿಗ ಕುವೆಂಪು. ಈ ಬಗ್ಗೆ ರಾಷ್ಟ್ರಮಟ್ಟದ ಮಾಧ್ಯಮಗಳೂ ಈ ಬಗ್ಗೆ ವರದಿ ಮಾಡಿ, ಕುವೆಂಪು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿವೆ.