ಬಿಜೆಪಿ ರಾಷ್ಟ್ರಾಧ್ಯಕ್ಷರ ಹೇಳಿಕೆಗೆ ದಿನೇಶ್ ಗುಂಡೂರಾವ್ ತಿರುಗೇಟು
ಬೆಂಗಳೂರು: ‘ಕನ್ನಡದ ವಿಚಾರವಾಗಿ ನಮ್ಮನ್ನು ಪ್ರಶ್ನೆ ಮಾಡೋಕೆ ಅಮಿತ್ ಶಾ ಯಾರು? ಕೇಂದ್ರ ಸರ್ಕಾರದ ಅನುದಾನ ಪಡೆಯುವುದು ಕರ್ನಾಟಕದ ಹಕ್ಕು, ಅದನ್ನು ಕೇಳುವುದಕ್ಕೆ ಇವರ್ಯಾರು?’.- ಇದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ನೀಡಿರುವ ತಿರುಗೇಟು.
ಮಂಗಳವಾರ ನಗರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದ ಅಮಿತ್ ಶಾ, ರಾಜ್ಯ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಆಚರಿಸಲು ತೋರುತ್ತಿರುವ ಆಸಕ್ತಿ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ತೋರುತ್ತಿಲ್ಲ ಓಟ್ ಬ್ಯಾಂಕ್‌ಗಾಗಿ ಟಿಪ್ಪು ಜಯಂತಿ ಆಚರಿಸುತ್ತಿದೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಇದುವರೆಗೆ 1.30 ಲಕ್ಷ ಕೋಟಿ ರು. ಅನುದಾನ ನೀಡಿದೆ. ಅದೆಲ್ಲಾ ಏನಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡಲಿ ಎಂದು ಪ್ರಶ್ನಿಸಿದ್ದರು.
ಅಮಿತ್ ಶಾ ಹೇಳಿಕೆ ಬೆನ್ನಲ್ಲೇ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರಿಗೆ ಕನ್ನಡದ ಮೇಲೆ ಪ್ರೀತಿ ಇದೆಯೋ ಇಲ್ಲವೋ ನಾನು ಕೇಳುವುದಿಲ್ಲ. ಆದರೆ, ಕನ್ನಡದ ಬಗ್ಗೆ ಮಾತನಾಡಲು ಅಮಿತ್ ಶಾ ಯಾರು ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿರುವ ಅನುದಾನದ ಬಗ್ಗೆ ಪ್ರಶ್ನಿಸಲು ಅಮಿತ್ ಶಾ ಏನು ಪ್ರಧಾನಿಯೇ? ಇಲ್ಲಾ ಕೇಂದ್ರ ಹಣಕಾಸು ಸಚಿವರೇ? ಸಂವಿಧಾನದ ಬಗ್ಗೆ ಅರಿವಿದ್ದಿದ್ದರೆ ಶಾ ಹೀಗೆ ಮಾತನಾಡುತ್ತಿರಲಿಲ್ಲ. ನಮಗೆ ಕೇಂದ್ರ ಸರ್ಕಾರವೇನೂ ಭಿಕ್ಷೆ ಕೊಡಬೇಕಿಲ್ಲ. ಬರ ಪರಿಹಾರಕ್ಕೆ ಮಹಾರಾಷ್ಟ್ರ ಹಾಗೂ ಗುಜರಾತ್‌ಗಿಂತ ಕಡಿಮೆ ನೀಡಿದ್ದಾರೆ. ಇನ್ನು ಮುಂದೆ ಕರ್ನಾಟಕಕ್ಕೆ ಮೋದಿ ಬಿಡಿಗಾಸು ಕೊಡುವುದಿಲ್ಲ ಎಂದು ಧಮಕಿ ಹಾಕಿ ಅವಮಾನ ಮಾಡಿದ್ದಾರೆ.
ಇಷ್ಟೆಲ್ಲಾ ಆದ ಮೇಲೆ ಕನ್ನಡಿಗರು, ಕರ್ನಾಟಕದ ಬಗ್ಗೆ ಮಾತನಾಡೋಕೆ ಬಿಜೆಪಿಯವರಿಗೆ ಏನು ನೈತಿಕತೆ ಇದೆ? ಈ ಬಗ್ಗೆ ಅವರು ಕನ್ನಡಿಗರ ಕ್ಷಮೆ ಕೇಳಲಿ ಎಂದು ಹೇಳಿದರು.
