ರಷ್ಯಾ ವಿರುದ್ಧ ಒಂದಾಗಿವೆ ವಿಶ್ವದ ದೇಶಗಳು

Which countries support Russia
Highlights

ದಶಕಗಳ ಕಾಲ ಇಡೀ ವಿಶ್ವವನ್ನೇ ಕಾಡಿದ್ದ ಅಮೆರಿಕ ಮತ್ತು ರಷ್ಯಾ ನಡುವಿನ ಶೀತಲ ಸಮರ ಮತ್ತೊಮ್ಮೆ ಭುಗಿಲೇಳುವ ಲಕ್ಷಣ ಕಂಡುಬಂದಿದೆ.

ವಾಷಿಂಗ್ಟನ್‌/ಮಾಸ್ಕೋ: ದಶಕಗಳ ಕಾಲ ಇಡೀ ವಿಶ್ವವನ್ನೇ ಕಾಡಿದ್ದ ಅಮೆರಿಕ ಮತ್ತು ರಷ್ಯಾ ನಡುವಿನ ಶೀತಲ ಸಮರ ಮತ್ತೊಮ್ಮೆ ಭುಗಿಲೇಳುವ ಲಕ್ಷಣ ಕಂಡುಬಂದಿದೆ.

ಇತ್ತೀಚೆಗೆ ಬ್ರಿಟನ್‌ನಲ್ಲಿ ತನ್ನದೇ ಮಾಜಿ ಗೂಢಚರನೊಬ್ಬನ ಹತ್ಯೆಗೆ ರಷ್ಯಾ ಯತ್ನಿಸಿತ್ತು ಎಂಬ ಪ್ರಕರಣದಿಂದ ಆಕ್ರೋಶಗೊಂಡಿರುವ ಅಮೆರಿಕ, ತನ್ನ ದೇಶದಲ್ಲಿನ ರಷ್ಯಾದ 60 ರಾಯಭಾರ ಕಚೇರಿ ಸಿಬ್ಬಂದಿಗೆ ದೇಶಬಿಟ್ಟು ತೆರಳುವಂತೆ ಸೂಚಿಸಿದೆ. ಅಮೆರಿಕದ ಈ ಸೂಚನೆ ಬೆನ್ನಲ್ಲೇ, ಯುರೋಪಿಯನ್‌ ಒಕ್ಕೂಟದ 14 ದೇಶಗಳು, ಕೆನಡಾ ಹಾಗೂ ಉಕ್ರೇನ್‌ ಕೂಡಾ ತಮ್ಮ ದೇಶಗಳಲ್ಲಿನ ರಷ್ಯಾದ ರಾಯಭಾರ ಸಿಬ್ಬಂದಿಗಳು ಗೂಢಚಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ಅವರಿಗೆಲ್ಲಾ ದೇಶಬಿಟ್ಟು ತೆರಳುವಂತೆ ಸೂಚಿಸಿದೆ.

ಆದರೆ ಗೂಢಚರನ ಹತ್ಯೆ ಯತ್ನದ ಆರೋಪವನ್ನು ರಷ್ಯಾ ಮತ್ತೊಮ್ಮೆ ತಳ್ಳಿಹಾಕಿದೆ. ಜೊತೆಗೆ ತನ್ನ ರಾಜತಾಂತ್ರಿಕ ಸಿಬ್ಬಂದಿಗೆ ಗೇಟ್‌ಪಾಸ್‌ ನೀಡಿದ ಎಲ್ಲಾ ದೇಶಗಳ ವಿರುದ್ಧ ಸೂಕ್ತ ಕ್ರಮದ ಎಚ್ಚರಿಕೆಯನ್ನೂ ನೀಡಿದೆ. ಈ ರಾಜತಾಂತ್ರಿಕ ಸಮರ, ಈಗಾಗಲೇ ಹಳಸಿದ್ದ ಅಮೆರಿಕ- ರಷ್ಯಾ ನಡುವಿನ ಸಂಬಂಧ ಮತ್ತಷ್ಟುಉಲ್ಬಣವಾಗುವಂತೆ ಮಾಡಿದೆ.

ಗೇಟ್‌ಪಾಸ್‌: ಬ್ರಿಟನ್‌ನಲ್ಲಿನ ರಷ್ಯಾದ ಗೂಢಚರ ಸೆರ್ಗೇಯ್‌ ಕ್ರಿಪಾಲ್‌ ಮತ್ತು ಅವರ ಪುತ್ರಿ ಯುಲಿಯಾರನ್ನು ಇತ್ತೀಚೆಗೆ ಬ್ರಿಟನ್‌ನಲ್ಲಿ ನವ್‌ರ್‍ ಏಜೆಂಟ್‌ (ವಿಷಾನಿಲ, ವಿಷದ ಇಂಜೆಕ್ಷನ್‌) ನೀಡುವ ಮೂಲಕ ಹತ್ಯೆ ಮಾಡುವ ಯತ್ನ ನಡೆದಿತ್ತು. ಈ ದಾಳಿ ಹಿಂದೆ ರಷ್ಯಾದ ಕೈವಾಡವಿತ್ತು ಎಂದು ಆರೋಪಿಸಲಾಗಿತ್ತು.

ಈ ಘಟನೆಯ ಮುಂದುವರೆದ ಭಾಗವಾಗಿ, ಸೋಮವಾರ ತನ್ನ ದೇಶದಲ್ಲಿನ ರಷ್ಯಾದ 60 ರಾಯಭಾರ ಸಿಬ್ಬಂದಿಗೆ ದೇಶಬಿಟ್ಟು ತೆರಳುವಂತೆ ಅಮೆರಿಕ ಸೂಚಿಸಿದೆ. ಇವರೆಲ್ಲಾ ತನ್ನ ದೇಶದಲ್ಲಿನ ರಷ್ಯಾದ ಗೂಢಚರರು ಎಂದು ಆರೋಪಿಸಿರುವ ಅಮೆರಿಕ 7 ದಿನಗಳಲ್ಲಿ ದೇಶ ಬಿಡುವಂತೆ ಆದೇಶಿಸಿದೆ. ಅಲ್ಲದೇ ಸಿಯಾಟಲ್‌ನಲ್ಲಿರುವ ದೂತಾವಾಸ ಕಚೇರಿ ಮುಚ್ಚುವಂತೆಯೂ ರಷ್ಯಾಕ್ಕೆ ಸೂಚಿಸಿದೆ. ಇದು ಇತಿಹಾಸದಲ್ಲೇ ಒಂದೇ ಬಾರಿಗೆ ಅತಿ ಹೆಚ್ಚು ರಷ್ಯಾ ರಾಯಭಾರ ಸಿಬ್ಬಂದಿ ಹೊರಹಾಕಿದ ಘಟನೆ ಎಂದು ಹೇಳಲಾಗಿದೆ.

ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿತ್ತು ಎಂದಿರುವ ಅಮೆರಿಕ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸದಸ್ಯನಾಗಿರುವ ರಷ್ಯಾ ತನ್ನ ಅಂತಾರಾಷ್ಟ್ರೀಯ ಹೊಣೆಗಾರಿಕೆ ನಿರ್ವಹಿಸುವುದನ್ನು ಜಗತ್ತಿಗೆ ತೋರಿಸಿಕೊಡಬೇಕು ಎಂದು ಸಲಹೆ ನೀಡಿದೆ.

ಅಮೆರಿಕದ ನಿರ್ಧಾರ ಹೊರಬಿದ್ದ ಬೆನ್ನಲ್ಲೇ 14 ಯುರೋಪಿಯನ್‌ ದೇಶಗಳು ಒಟ್ಟಾರೆ 20ಕ್ಕೂ ಹೆಚ್ಚು ರಾಯಭಾರ ಕಚೇರಿ ಸಿಬ್ಬಂದಿಗೆ ಗೂಢಚಾರಿಕೆ ಆರೋಪದ ಮೇಲೆ ದೇಶ ಬಿಡುವಂತೆ ಸೂಚಿಸಿವೆ. ಇದರ ಜೊತೆಗೆ ಉಕ್ರೇನ್‌ ಮತ್ತು ಕೆನಡಾ ಸರ್ಕಾರಗಳು ಕೂಡಾ ತಲಾ 4 ರಾಯಭಾರ ಕಚೇರಿ ಸಿಬ್ಬಂದಿಗೆ ದೇಶ ಬಿಡಲು ಸೂಚಿಸಿವೆ.

ರಷ್ಯಾದ ಸೆರ್ಗೇಯ್‌ ಕ್ರಿಪಾಲ್‌ ಬ್ರಿಟನ್‌ನಲ್ಲಿ 1990-2000ರವರೆಗೆ ರಷ್ಯಾದ ಗೂಢಚರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈ ಅವಧಿಯಲ್ಲಿ ಅವರು ಬ್ರಿಟನ್‌ನ ಗುಪ್ತಚರ ಸಂಸ್ಥೆ ಪರವಾಗಿ ರಷ್ಯಾದ ವಿರುದ್ಧವೂ ಗೂಢಚಾರಿಕೆ ನಡೆಸಿದ್ದರು ಎಂಬ ಅನುಮಾನ ರಷ್ಯಾವನ್ನು ಕಾಡಿತ್ತು.

ಈ ಹಿನ್ನೆಲೆಯಲ್ಲಿ 2004ರಲ್ಲಿ ಅವರನ್ನು ಬಂಧಿಸಿ 13 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಲಾಗಿತ್ತು. 2010ರಲ್ಲಿ ಬ್ರಿಟನ್‌ ಮತ್ತು ರಷ್ಯಾ ನಡುವೆ ನಡೆದ ಪರಸ್ಪರ ಗೂಢಚರರ ಹಸ್ತಾಂತರ ಪ್ರಕ್ರಿಯೆ ವೇಳೆ ಸೆರ್ಗೇಯ್‌ ಅವರನ್ನು ಬ್ರಿಟನ್‌ಗೆ ಕಳುಹಿಸಿಕೊಡಲಾಗಿತ್ತು. ಬಳಿಕ ಅವರು ಬ್ರಿಟನ್‌ನಲ್ಲೇ ವಾಸವಿದ್ದರು. ಈ ನಡುವೆ 2018ರ ಮಾ.4ರಂದು ಬ್ರಿಟನ್‌ನಲ್ಲಿ ಸೆರ್ಗೇಯ್‌ ಮತ್ತು ಅವರ ಪುತ್ರಿಗೆ ವಿಷ ನೀಡಿ ಹತ್ಯೆಗೆ ಯತ್ನಿಸಲಾಗಿತ್ತು. ಸದ್ಯ ಇಬ್ಬರೂ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇದರ ಬಗ್ಗೆ ಇಡೀ ವಿಶ್ವವೇ ಸಿಡಿದೆದ್ದಿದೆ.

loader