Asianet Suvarna News Asianet Suvarna News

ಎಟಿಎಂ ಹಲ್ಲೆ ಪ್ರಕರಣ: ಬೆಂಗಳೂರು ಪೊಲೀಸರು ಸೋತಿದ್ದು ಎಲ್ಲಿ?

ಹಲ್ಲೆಕೋರ ವೃತ್ತಿಪರ ಕ್ರಿಮಿನಲ್‌, ಹೊಸ ಪಾತಕಿಯೇ ಎಂಬ ಸ್ಪಷ್ಟತೆ ಇಲ್ಲ
ರೆಡ್ಡಿ ಜೈಲಿನಿಂದ ತಪ್ಪಿಸಿಕೊಂಡರೂ ನಿರ್ಲಕ್ಷಿಸಿದ್ದ ಆಂಧ್ರಪ್ರದೇಶದ ಪೊಲೀಸರು
ಬೆಂಗಳೂರು ಪೊಲೀಸರಿಗೆ ಆಂಧ್ರ ಪೊಲೀಸರಿಂದ ಸಿಗದ ಸಮರ್ಪಕ ಸಹಕಾರ
ಜ್ಯೋತಿ ಉದಯ್‌ ಮೊಬೈಲ್‌ ಹಿಂದೂಪುರದಲ್ಲಿ ಮಾರಾಟ ಮಾಡಿದ್ದ ಹಲ್ಲೆಕೋರ

 

Where Did Bengaluru Police Fail to Nab Madhukar Reddy

ಬೆಂಗಳೂರು (ಫೆ.06): ಆಂಧ್ರಪ್ರದೇಶದ ಪೊಲೀಸರ ಅಸಹಕಾರ ಹಾಗೂ ಹಲ್ಲೆಕೋರನ ಅಂದಾಜು ಮಾಡುವಲ್ಲಿನ ಎಡವಟ್ಟು ಎಟಿಎಂ ಕೇಂದ್ರದ ಮಹಿಳೆ ಮೇಲಿನ ಹಲ್ಲೆ ಪ್ರಕರಣದ ಬೆಂಗಳೂರು ಪೊಲೀಸರ ಪತ್ತೆ ಕಾರ್ಯಾಚರಣೆಯ ವಿಫಲತೆಗೆ ಪ್ರಮುಖ ಕಾರಣವಾಗಿವೆ ಎಂಬ ಮಾತುಗಳು ಈಗ ಕೇಳಿ ಬಂದಿವೆ.

ಎಟಿಎಂ ಹಲ್ಲೆಕೋರನ ಬೆನ್ನು ಹತ್ತಿದ್ದ ಪೊಲೀಸರಿಗೆ ಆತನ ವೃತ್ತಿಪರ ಕ್ರಿಮಿನಲ್‌ ಅಥವಾ ಹೊಸ ಪಾತಕಿಯೇ? ಎಂಬುದು ಸ್ಪಷ್ಟತೆ ಇರಲಿಲ್ಲ. ಇನ್ನು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ನಟೋರಿಯಸ್‌ ಕೈದಿಯು ಸೆಂಟ್ರಲ್‌ ಜೈಲಿನಿಂದ ತಪ್ಪಿಸಿಕೊಂಡಿದ್ದರೂ ಆತನನ್ನು ಆಂಧ್ರಪ್ರದೇಶ ಪೊಲೀಸರು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದ್ದು ಎಟಿಎಂ ಕೇಂದ್ರದಲ್ಲಿ ಮಹಿಳೆ ಮೇಲಿನ ಹಲ್ಲೆ ಪ್ರಕರಣದ ತನಿಖೆಗೆ ಬಹುಮುಖ್ಯ ಹಿನ್ನಡೆಯಾಗಿತ್ತು. ಹೀಗಾಗಿಯೇ ಆರೋಪಿ ಸತ್ತು ಹೋಗಿರಬಹುದು ಎಂದುಕೊಂಡು ನ್ಯಾಯಾಲಯಕ್ಕೆ ‘ಸಿ' ರಿಪೋರ್ಟ್‌ ಸಲ್ಲಿಸಿದ್ದರು.

ಎಟಿಎಂ ಕೇಂದ್ರದಲ್ಲಿ ಮಹಿಳೆ ಮೇಲೆ ಹಲ್ಲೆ ಕೃತ್ಯದ ಬಳಿಕ ಮಧುಕರರೆಡ್ಡಿ, ಹಿಂದೂಪುರದಲ್ಲಿ ಜ್ಯೋತಿ ಉದಯ್‌ ಅವರ ಮೊಬೈಲ್‌ ಅನ್ನು ಮಾರಾಟ ಮಾಡಿ ಕೇರಳ ರಾಜ್ಯದ ಹಾದಿ ತುಳಿದಿದ್ದ. ಆತನ ಬೆನ್ನು ಹತ್ತಿದ್ದ ಬೆಂಗಳೂರು ಪೊಲೀಸರಿಗೆ, ಹಿಂದೂಪುರದಲ್ಲಿ ಮೊಬೈಲ್‌ ಅನ್ನು ಮುಸ್ತಾಫ ಎಂಬಾತನಿಗೆ ಮಾರಾಟ ಮಾಡಿರುವ ಸಂಗತಿ ಗೊತ್ತಾಯಿತು. ಕೂಡಲೇ ಅಲ್ಲಿಗೆ ತೆರಳಿದ ಪೊಲೀಸರು, ಮುಸ್ತಾಫನನ್ನು ವಶಕ್ಕೆ ಪಡೆದು ನಗರಕ್ಕೆ ಕರೆದಿದ್ದರು. ಆತನ ವಿಚಾರಣೆ ವೇಳೆಯಲ್ಲಿ ಹಲ್ಲೆಕೋರನ ಕುರಿತು ಮಹತ್ವದ ಮಾಹಿತಿ ಸಿಗಲಿಲ್ಲ. ಬಳಿಕ ಮತ್ತೆ ಪೊಲೀಸರ ತಂಡವು, ಹಿಂದೂಪುರಕ್ಕೆ ತೆರಳಿ ಆರೋಪಿಗೆ ಹುಡುಕಾಟ ಬಿರುಸಿನ ಕಾರ್ಯಾಚರಣೆ ಆರಂಭಿಸಿತ್ತು.

ಇನ್ನು ಸ್ಥಳೀಯವಾಗಿ ವಾಹನ ಅಲಭ್ಯತೆ ಹಿನ್ನಲೆಯಲ್ಲಿ 50 ಬೈಕ್‌ಗಳು ಹಾಗೂ ನಾಲ್ಕು ಜೀಪುಗಳಲ್ಲಿ ಪೊಲೀಸರು ಹೋಗಿದ್ದರು. ಅಷ್ಟರಲ್ಲಿ ರೆಡ್ಡಿ, ತಲೆಬೋಳಿಸಿಕೊಂಡು ಮಾರು ವೇಷದಲ್ಲಿ ಕೇರಳದ ಎರ್ನಾಕುಲಂ ನಗರದಲ್ಲಿ ನೆಲೆ ನಿಂತಿದ್ದ. ಇನ್ನೇನು ನಗರಕ್ಕೆ ಮರಳಬೇಕು ಎನ್ನುವ ವೇಳೆಗೆ ತನಿಖಾ ತಂಡಗಳಿಗೆ ಧರ್ಮಾವರಂನಲ್ಲಿ ಪ್ರಮೀಳಾ ಕೊಲೆ ಕೃತ್ಯದ ಮಾಹಿತಿ ಸಿಕ್ಕಿದೆ. ಹೀಗಾಗಿ ಧರ್ಮಾವರಂ, ಕದಿರಿ ಹಾಗೂ ಹಿಂದೂಪುರ ವ್ಯಾಪ್ತಿಯಲ್ಲಿ ಸುತ್ತಾಟ ನಡೆಸಿದ ಬೆಂಗಳೂರು ಪೊಲೀಸರು, ಚಿತ್ತೂರು, ಹೈದರಾಬಾದ್‌ ಹಾಗೂ ಕಡಪ ಕಡೆಗೆ ತೆರಳಲಿಲ್ಲ. ಹೀಗಾಗಿ ಪಾತಕ ಲೋಕದಲ್ಲಿ ಮೂಡಿದ್ದ ಮಧುಕರರೆಡ್ಡಿ ಹೆಜ್ಜೆ ಗುರುತುಗಳು ಪೊಲೀಸರಿಗೆ ಸಿಗಲಿಲ್ಲ ಎಂದು ತಿಳಿದು ಬಂದಿದೆ.

ಆಂಧ್ರ ಪೊಲೀಸರು ಬ್ಯುಸಿ: ಎಟಿಎಂ ಹಲ್ಲೆ ಕೃತ್ಯದ ತನಿಖೆಗೆ ಬೆಂಗಳೂರು ಪೊಲೀಸರು, ಆಂಧ್ರದಲ್ಲಿ ಕಾರ್ಯಾಚರಣೆಗಿಳಿದಿದ್ದ ವೇಳೆಯಲ್ಲೇ ಸ್ಥಳೀಯ ಪೊಲೀಸರಿಂದ ನಿರೀಕ್ಷಿತ ಮಟ್ಟದ ಸಹಕಾರ ಸಿಕ್ಕಿಲ್ಲ. ಆ ವೇಳೆಗೆ ಆ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣಾ ಭರಾಟೆ ಹಾಗೂ ರಾಜ್ಯ ವಿಭಜನೆ ಹೋರಾಟ ಕಾವು ತಾರಕಕ್ಕೇರಿತು ಎಂದು ತನಿಖಾ ತಂಡದಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಬೆರಳಚ್ಚು ಸಂಗ್ರಹಿಸಲಿಲ್ಲ: ಇನ್ನು ಜೀವಾವಧಿ ಶಿಕ್ಷೆ ಗುರಿಯಾಗಿದ್ದ ಮಧುಕರರೆಡ್ಡಿ ಕುರಿತು ಸ್ಥಳೀಯ ಪೊಲೀಸರ ಹಾಗೂ ಕಡಪ ಕೇಂದ್ರ ಕಾರಾಗೃಹದ ಅಧಿಕಾರಿಗಳ ಬಳಿ ಮಾಹಿತಿ ಇರಲಿಲ್ಲ ಎಂಬುದು ತಿಳಿದು ಬಂದಿದೆ. ತನಿಖೆ ಸಾರಥ್ಯ ಹೊತ್ತುಕೊಂಡ ಆಗಿನ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ. ಹರಿಶೇಖರನ್‌ ಅವರು, ಕೂಡಲೇ ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ಜೈಲುಗಳಿಗೆ ಹಲ್ಲೆಕೋರನ ಪತ್ತೆಗೆ ತಂಡ ಕಳಿಸಿದ್ದರು.

Latest Videos
Follow Us:
Download App:
  • android
  • ios