ಲಂಡನ್(ಆ.08): ಬ್ರಿಟನ್‌ನ ಸುರಸುಂದರ ರಾಜಕುವರಿ ಡಯಾನಾ ಅವರು ತಮ್ಮ ಲೈಂಗಿಕ ಹಾಗೂ ಇತರ ಖಾಸಗಿ ಜೀವನದ ಬಗ್ಗೆ ಮಾತನಾಡಿರುವ ಟೇಪ್‌ಗಳನ್ನು ‘ಚಾನೆಲ್ 4’ ಭಾನುವಾರ ರಾತ್ರಿ ಪ್ರಸಾರ ಮಾಡಿದ್ದು, ವಿಶ್ವಾದ್ಯಂತ ಭಾರಿ ಸದ್ದು ಮಾಡಿವೆ.

1992 ಹಾಗೂ 1993ರಲ್ಲಿ ತಮ್ಮ ಭಾಷಣ ತರಬೇತುದಾರ ಪೀಟರ್ ಸೆಟ್ಲಿನ್ ಅವರಿಂದ ಡಯಾನಾ ಅವರು ಭಾಷಣ ತರಬೇತಿಯನ್ನು ಪಡೆಯುತ್ತಿರುತ್ತಾರೆ. ಈ ವೇಳೆ ತಮ್ಮ ಖಾಸಗಿ ಹಾಗೂ ಲೈಂಗಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಈ ಮಾತುಗಳನ್ನು ಪೀಟರ್ ತಮ್ಮ ಟೇಪ್‌ಗಳಲ್ಲಿ ದಾಖಲಿಸಿದ್ದರು. ಅವೀಗ ‘ಚಾನೆಲ್ 4’ ಕೈಗೆ ಸಿಕ್ಕಿದ್ದು, ರಾಜಮನೆತನದ ವಿರೋಧದ ಹೊರತಾಗ್ಯೂ ಪ್ರಸಾರ ಮಾಡಿದೆ.

ಬ್ರಿಟನ್ ರಾಣಿಯ ಜತೆ ಮದುವೆ ಬಗ್ಗೆ ಮಾತು

ಮದುವೆಗೆ ಮುನ್ನ ಬ್ರಿಟನ್ ರಾಣಿ ಎಲಿಜಬೆತ್‌ರನ್ನು ಭೇಟಿ ಮಾಡಿ ನನ್ನ ಹಾಗೂ ರಾಜಕುವರ ಚಾರ್ಲ್ಸ್ ಮದುವೆಗೆ ಸಹಾಯ ಮಾಡಿ ಎಂದು ಬೇಡಿಕೊಂಡಿದ್ದೆ. ಆದರೆ ಮದುವೆಯಾದ 5 ವರ್ಷ ನಂತರ ಬರೀ ಅಸಂತೋಷವನ್ನೇ ಅನುಭವಿಸಿದೆ. ಆಗ ನಾನು ಎಲಿಜಬೆತ್ ಬಳಿ ಹೋಗಿ ಸಹಾಯ ಬೇಡಿದೆ. ಆಗ ರಾಣಿಯು, ‘ನನಗೇನು ಮಾಡಬೇಕೋ ಗೊತ್ತಾಗ್ತಿಲ್ಲ. ಚಾರ್ಲ್ಸ್ ಹೋಪ್‌ಲೆಸ್’ ಎಂದಿದ್ದರು. ನಿರಾಶೆಗೊಂಡ ನಾನು ಆ ನಂತರ ನಾನ್ಯಾವತ್ತೂ ರಾಣಿ ಬಳಿ ಸಹಾಯ ಯಾಚಿಸಲಿಲ್ಲ.

ಚಾರ್ಲ್ಸ್ ಮೈಮೇಲಿನ ತುರಿಕೆಯಂತೆ ಮೇಲೆ ಬಿದ್ದಿದ್ದ

ಮದುವೆಗೂ ಮುನ್ನ ಚಾರ್ಲ್ಸ್ 13 ಬಾರಿ ನನ್ನನ್ನು ಭೇಟಿಯಾಗಿದ್ದ. ಮೊದಲ ಭೇಟಿಯಲ್ಲಂತೂ ಮೈಮೇಲಿನ ತುರಿಕೆಯಂತೆ ನನಗೆ ಅಂಟಿಕೊಂಡಿದ್ದ. ಆತ ಒಮ್ಮೆ ಫೋನ್ ಮಾಡಿದನೆಂದರೆ ಆ ವಾರದ ಪ್ರತಿದಿನವೂ ಫೋನ್ ಮಾಡ್ತಿದ್ದ. ಬಳಿಕ 3 ವಾರವಾದರೂ ಒಮ್ಮೆಯೂ ಫೋನು ಮಾಡುತ್ತಿರಲಿಲ್ಲ.

3 ವಾರಕ್ಕೊಮ್ಮೆ ಸೆಕ್ಸ್

ಚಾರ್ಲ್ಸ್ ಮತ್ತು ನಾನು ಮೂರು ವಾರಕ್ಕೊಮ್ಮೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದೆವು. ಪ್ರಿನ್ಸ್ ಹ್ಯಾರಿ ಜನಿಸಿದ ನಂತರ ಅದೂ ನಿಂತುಹೋಯಿತು. ಈಗ ಕೊನೆಯ ಬಾರಿ ಆತನ ಜತೆ ಲೈಂಗಿಕ ಕ್ರಿಯೆ ನಡೆಸಿ 6-7 ವರ್ಷ ಆಯಿತು ಎನ್ನಿಸುತ್ತೆ. ಹಾಂ... 7 ವರ್ಷ. ಏಕೆಂದರೆ ಹ್ಯಾರಿಗೆ ಈಗ 8 ವರ್ಷ.

ಗಂಡನ ಬಿಟ್ಟುಬಿಡು ಎಂದು ಕ್ಯಾಮಿಲ್ಲಾಗೆ ಹೇಳಿದ್ದೆ

ನನ್ನ ಮತ್ತು ನನ್ನ ಗಂಡನ ನಡುವೆ ಕ್ಯಾಮಿಲ್ಲಾ ಅಡ್ಡಗೋಡೆಯಾಗಿದ್ದಳು. ಒಮ್ಮೆ ಕ್ಯಾಮಿಲ್ಲಾಳನ್ನು ಭೇಟಿ ಮಾಡಿ ನನ್ನ ಜೀವನಕ್ಕೆ ಅಡ್ಡಿ ಬರಬೇಡ ಎಂದು ಎಚ್ಚರಿಕೆ ನೀಡಿದ್ದೆ.

ರಾಜಮನೆತನದ ಭದ್ರತಾ ಸಿಬ್ಬಂದಿ ಜತೆ ಲವ್, ಬಳಿಕ ಆತನ ‘ಹತ್ಯೆ’

ರಾಜಮನೆತನದ ಭದ್ರತಾ ಅಧಿಕಾರಿ ಬ್ಯಾರಿ ಮೆನ್ನೆಕ್ಕೀ ಯೊಬ್ಬನ ಪ್ರೇಮಪಾಶದಲ್ಲಿ ಸಿಲುಕಿದ್ದೆ. ಪ್ರೀತಿ ತುಂಬಾ ಆಳಕ್ಕಿಳಿದಿತ್ತು. ಆದರೆ ಮೋಟರ್‌ಬೈಕ್ ಅಪಘಾತವೊಂದರಲ್ಲಿ ಆತ 1987ರಲ್ಲಿ ಸತ್ತು ಹೋದ. 39 ವರ್ಷದ ಈತ ಅಪಘಾತದಲ್ಲಿ ಸಹಜವಾಗಿ ಸತ್ತಿರಲಿಲ್ಲ. ಬದಲಾಗಿ ಆತನನ್ನು ಕೊಲೆ ಮಾಡಿರಬಹುದು ಎಂಬುದು ನನ್ನ ನಂಬಿಕೆಯಾಗಿದೆ. ಈ ಘಟನೆ ನನ್ನ ಜೀವನದಲ್ಲಿ ದೊಡ್ಡ ಹೊಡೆತ.