ಬೆಂಗಳೂರು (ಸೆ.23): ‘‘ಗ್ರೇಟ್‌ ಬ್ರಿಟನ್‌ನಲ್ಲಿ ಪ್ರಸಿದ್ಧ ಮುಖ್ಯ ನ್ಯಾಯಾಧೀಶ ಮ್ಯಾಕ್ಸ್‌ ಮಿಲನ್‌ ಅಂತ ಒಬ್ಬರಿದ್ದರು. ಅವರನ್ನೊಮ್ಮೆ ಸಂದರ್ಶನದಲ್ಲಿ ಪತ್ರಕರ್ತ ಕೇಳಿದರು. ನಿಮ್ಮ ಪ್ರಕಾರ ಒಳ್ಳೆಯ ಜಡ್ಜ್‌ ಹೇಗಿರಬೇಕು? ಎಂದರು. ಆಗ ಮಿಲನ್‌, ‘‘ಸ್ವಲ್ಪ ಜ್ಞಾನ ಇರಬೇಕು, ಹೆಚ್ಚು ಗುಣವಂತ ಆಗಿರಬೇಕು’’ ಎಂದರು.

ಹೀಗೆಂದು ಸದನದಲ್ಲಿ ನೆನಪಿಸಿಕೊಂಡರು ಆರೋಗ್ಯ ಸಚಿವ ರಮೇಶ್‌ಕುಮಾರ್‌. ‘‘ಜಡ್ಜ್‌ ಶುಡ್‌ ಬಿ ಜಂಟಲ್‌ಮನ್‌, ಶುಡ್‌ ನೋ ಬಿಟ್‌ ಆಫ್‌ ಲಾ’’ ಎಂಬ ಮಿಲನ್‌ ಮಾತು ನೆನಪಿಸಿದ ಅವರು, ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಸುಪ್ರೀಂಕೋರ್ಟ್‌ ನ್ಯಾಯಾಧೀಶರ ಬಗ್ಗೆ ಹೇಳುವಾಗ ಸಮಯೋಚಿತವಾಗಿ ಸ್ಮರಿಸಿದರು.

ಶೆಟ್ಟರ್‌ ಮಾತನಾಡುತ್ತಿರುವಾಗಲೇ ಮತ್ತೊಂದು ಸಂದರ್ಭದಲ್ಲಿ ‘‘ಶೆಟ್ಟರೆ, ತುಂಬಾ ದೀರ್ಘ ಚರ್ಚೆಗೆ ಹೋಗಬೇಡಿ. ಬೌಲರ್‌ ಬೌಲ್‌ ಮಾಡಿಯಾಗಿದೆ, ಬ್ಯಾಟ್ಸ್‌ಮನ್‌ ಔಟ್‌ ಕೂಡ ಆಗಿದ್ದಾನೆ. ಆದರೆ ಅಂಪೈರ್‌ ನೋ ಬಾಲ್‌ ಎಂದಿದ್ದಾನೆ. ಹೀಗಾಗಿ ಹೆಚ್ಚು ಚರ್ಚೆ ಅಗತ್ಯ ಇಲ್ಲ ಎನಿಸುತ್ತೆ’’ ಎಂದಾಗ ಸಭೆಯಲ್ಲಿ ನಗೆ ತೇಲಿತು.