ನವದೆಹಲಿ: ಈಗ 500, 1000 ರೂ. ಮುಖಬೆಲೆಯ ನೋಟುಗಳು ಕೇವಲ ಕಾಗದದ ಚೂರುಗಳೇ ಹೊರತು ಅದಕ್ಕೆ ಯಾವ ಬೆಲೆಯೂ ಇಲ್ಲ. ಹಾಗಾದರೆ, ಈ ಹಳೇ ನೋಟುಗಳೆಲ್ಲ ಸಂಗ್ರಹವಾದ ಮೇಲೆ ಅದನ್ನು ಏನು ಮಾಡುತ್ತಾರೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಕೇರಳದ ಕಣ್ಣೂರಿನಲ್ಲಿರುವ ವೆಸ್ಟರ್ನ್‌ ಇಂಡಿಯಾ ಪ್ಲೈವುಡ್‌(ಡಬ್ಲ್ಯುಐಪಿ­ಎಲ್‌) ಕಂಪನಿಯು ಈ ನೋಟುಗಳನ್ನು ಪ್ಲೈವುಡ್‌, ಸ್ಟೇಷನರಿ ಹಾಗೂ ಇಂಧನವಾಗಿ ಪರಿವರ್ತಿಸಿ, ಅವುಗಳನ್ನು ಮರುಬಳಕೆಗೆ ಸಿದ್ಧವಾಗಿಸುತ್ತದಂತೆ. ಹೀಗಂತ ಸ್ವತಃ ಆ ಕಂಪನಿಯೇ ಹೇಳಿಕೊಂಡಿದೆ ಎಂದು ‘ಫಸ್ಟ್‌ಪೋಸ್ಟ್‌ ಇಂಡಿಯಾ' ವರದಿ ಮಾಡಿದೆ.

ಕೇಂದ್ರೀಯ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ 40 ಪರಿಶೀಲನಾ ಹಾಗೂ ಚೂರು ಮಾಡುವ ಯಂತ್ರಗಳಿದ್ದು, ಆಮದು ಮಾಡಿರುವ ಈ ಯಂತ್ರಗಳು ಗಂಟೆಗೆ 2.50 ಲಕ್ಷ ನೋಟುಗಳನ್ನು ನಾಶ ಮಾಡಬಲ್ಲವು. ಒಂದು ಬಾರಿ ಈ ನೋಟುಗಳನ್ನು ಚೂರು ಚೂರು ಮಾಡಿದ ಬಳಿಕ, ಇವುಗಳನ್ನು ಡೀಲರ್‌ಗಳಿಗೆ ಕಳುಹಿಸಲಾಗುತ್ತದೆ. ಅವರು ಈ ನೋಟುಗಳನ್ನು ಸಂಕ್ಷೇಪಿಸಿ ಇದ್ದಿಲ ಉಂಡೆ(ಬ್ರಿಕೆಟ್‌)ಗಳಾಗಿ ಮಾರ್ಪಾಡು ಮಾಡುತ್ತಾರೆ ಎಂದು ವರದಿ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಡಬ್ಲ್ಯುಐಪಿಎಲ್‌ ವ್ಯವಸ್ಥಾಪಕ ನಿರ್ದೇ­ಶಕ ಪಿ ಕೆ ಮಾಯನ್‌ ಮೊಹಮ್ಮದ್‌, ‘‘ಕಳೆದ 3 ವಾರಗಳಲ್ಲಿ ಆರ್‌ಬಿಐ ನಮಗೆ ಸುಮಾರು 140 ಟನ್‌ಗಳಷ್ಟುಹಳೇ ನೋಟುಗಳನ್ನು ಕಳುಹಿಸಿಕೊಟ್ಟಿದೆ. ನಾವು ನಮ್ಮ ಘಟಕದಲ್ಲಿ ಆ ನೋಟುಗಳ ಚೂರುಗಳನ್ನು ಮರದ ಚಕ್ಕೆಗಳೊಂದಿಗೆ ಮಿಶ್ರ ಮಾಡುತ್ತೇವೆ.  ನಂತರ ಅವುಗಳನ್ನು ಪಲ್ಪ್‌ (ಕಾಗದದ ಚೂರುಗಳನ್ನು ರುಬ್ಬಿ ಮಾಡಿದ ಮೆದು ಪದಾರ್ಥ) ಆಗಿ ಪರಿವರ್ತಿಸುತ್ತೇವೆ. ಸಂಕ್ಷೇಪಿಸಲಾದ 100 ಕೆಜಿ ಪಲ್ಪ್‌ನಲ್ಲಿ 7 ಕೆಜಿಯಷ್ಟುನೋಟಿನ ಚೂರುಗಳೇ ಆಗಿರುತ್ತವೆ. ಉಳಿದವು ಮಾತ್ರ ಮರದ ಚಕ್ಕೆಗಳಾಗಿರುತ್ತವೆ. ಈ ಪಲ್ಪ್‌'ಗಳನ್ನು ನಂತರ ಕ್ಯಾಲೆಂಡರ್‌, ಪೇಪರ್‌ ವೈಟ್‌, ಫೈಲುಗಳು, ಬೋರ್ಡ್‌'ಗಳನ್ನು ತಯಾರಿ­ಸಲು ಬಳಸಲಾಗುತ್ತದೆ,'' ಎಂದಿದ್ದಾರೆ.

(epaper.kannadaprabha.in)