Asianet Suvarna News Asianet Suvarna News

ಜಯಾ ಅನುಪಸ್ಥಿತಿಯಲ್ಲಿ ತಮಿಳುನಾಡಿನಲ್ಲಿ ಮುಂದೇನು? ಯಾರ ಕೈಗೆ ಸಿಗುತ್ತದೆ ಅಧಿಕಾರ?

ಹಂಗಾಮಿ ಮುಖ್ಯಮಂತ್ರಿಯನ್ನು ನೇಮಿಸ​ಬೇಕು ಎಂಬ ಪ್ರತಿಪಕ್ಷಗಳ ಒತ್ತಡದ ನಡುವೆ, ರಾಜ್ಯಪಾಲ ವಿದ್ಯಾಸಾಗರರಾವ್‌ ರಂಗಪ್ರವೇಶ ಮಾಡಿದ್ದು, ಸರ್ಕಾರದ ಪ್ರಮುಖ ಸಚಿವರನ್ನು ಕರೆದು ಚರ್ಚೆ ಮಾಡಿದ್ದಾರೆ. ಆಡಳಿತ ಎತ್ತ ಸಾಗುತ್ತಿದೆ, ಪ್ರಮುಖ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಪ್ರಶ್ನಿಸಿದ್ದಾರೆ ಎಂದು ಗೊತ್ತಾಗಿದೆ.

what next in tamilnadu in absence of jayalalitha

ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇನ್ನೂ ಬಹಳಷ್ಟುಕಾಲ ಆಸ್ಪತ್ರೆಯಲ್ಲೇ ಇರಬೇಕು ಎಂಬ ವೈದ್ಯರ ಹೇಳಿಕೆ ಹಿನ್ನೆಲೆಯಲ್ಲೇ, ಅಲ್ಲಿ ಹೊಸ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದರ ಜತೆಯಲ್ಲೇ ಆರೋಗ್ಯದ ಬಗ್ಗೆ ಆಸ್ಪತ್ರೆ ದಿನವೂ ಮೆಡಿಕಲ್‌ ಬುಲೆಟಿನ್‌ ನೀಡುತ್ತಿದ್ದರೂ, ಇನ್ನೂ ಅವರಿಗೆ ಏನಾಗುತ್ತಿದೆ, ಅವರಿಗಿರುವ ಕಾಯಿಲೆ ಯಾವ ಮಟ್ಟದಲ್ಲಿದೆ ಎಂಬುದು ಮಾತ್ರ ಖಾತ್ರಿಯಾಗುತ್ತಿಲ್ಲ. ಹೀಗಾಗಿ ತಮಿಳುನಾಡಿನ ರಾಜಕೀಯ ಮತ್ತು ಅಮ್ಮನ ಆರೋಗ್ಯದ ವಿಚಾರ ಮುಂದೇನು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಹಂಗಾಮಿ ಮುಖ್ಯಮಂತ್ರಿಯನ್ನು ನೇಮಿಸ​ಬೇಕು ಎಂಬ ಪ್ರತಿಪಕ್ಷಗಳ ಒತ್ತಡದ ನಡುವೆ, ರಾಜ್ಯಪಾಲ ವಿದ್ಯಾಸಾಗರರಾವ್‌ ರಂಗಪ್ರವೇಶ ಮಾಡಿದ್ದು, ಸರ್ಕಾರದ ಪ್ರಮುಖ ಸಚಿವರನ್ನು ಕರೆದು ಚರ್ಚೆ ಮಾಡಿದ್ದಾರೆ. ಆಡಳಿತ ಎತ್ತ ಸಾಗುತ್ತಿದೆ, ಪ್ರಮುಖ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಪ್ರಶ್ನಿಸಿದ್ದಾರೆ ಎಂದು ಗೊತ್ತಾಗಿದೆ. 

ಇದರ ನಡುವೆಯೇ, ಶನಿವಾರ ಎಂಡಿಎಂಕೆಯ ವೈಕೋ ಮತ್ತು ಡಿಎಂಕೆಯ ಸ್ಟಾಲಿನ್‌ ಜಯಾ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಜಯಾ ಆರೋಗ್ಯ ಕುರಿತಂತೆ ವೈದ್ಯಕೀಯ ವರದಿ ಬಿಡುಗಡೆ ಮಾಡಿರುವ ಆಸ್ಪತ್ರೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದೆ. 

ಈ ಮಧ್ಯೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಭೇಟಿಯ ಬೆನ್ನಲ್ಲೇ, ಪ್ರಧಾನಿ ಮೋದಿ ಅವರ ಭೇಟಿಯೂ ನಿಗದಿಯಾಗಿದೆ ಎಂದು ಹೇಳಲಾಗಿದೆ. ಸೋಮವಾರ ಅಥವಾ ಮಂಗಳವಾರ ಅವರು ಜಯಾ ಆರೋಗ್ಯ ವಿಚಾರಿಸಲಿದ್ದಾರೆ ಎನ್ನಲಾಗಿದೆ.

ಮಧ್ಯಂತರ ಸಿಎಂ ಸ್ಥಾನಕ್ಕೆ ಸಂಭಾವ್ಯರು:

ಎಸ್.ರಾಮಚಂದ್ರನ್:
ಎಂಜಿಆರ್‌ ಸಂಪುಟದಲ್ಲೇ ಪ್ರಬಲ ಖಾತೆ ಹೊಂದಿದ್ದವರು. ಇವರೂ 2016ರಲ್ಲಿ ಸೋತವರು. 2005ರಲ್ಲಿ ಪಕ್ಷ ಬಿಟ್ಟು ಡಿಎಂಡಿಕೆ ಸೇರಿ ಆ ಪಕ್ಷವನ್ನು ಗೆಲವಿನ ದಡಕ್ಕೆ ಕೊಂಡೊ ಯ್ದಿದ್ದರು. 2013ರಲ್ಲಿ ವಾಪಸ್‌ ಬಂದಿದ್ದರೂ, ಗೆಲ್ಲಲಾಗಲಿಲ್ಲ. ಜಯಾ ಅನುಪಸ್ಥಿತಿಯಲ್ಲಿ ಪಕ್ಷದ ಚುಕ್ಕಾಣಿ ಹಿಡಿಯಬಲ್ಲವರು.

ತಂಬಿದುರೈ:
ಲೋಕಸಭೆಯ ಉಪನಾಯಕ. ಎಐಎಡಿಎಂಕೆಯ ಪ್ರಬಲ ನಾಯಕ. ತಮಿಳುನಾಡಿನ ಗೌಂಡರ್‌ ಸಮುದಾಯದವರು. 1998ರಲ್ಲಿ ಇವರಿಗೆ ಕೇಂದ್ರ ಸಚಿವ ಸ್ಥಾನ ಲಭ್ಯವಾಗಿತ್ತು. ತೇವರ್‌ಗೆ ಸಿಎಂ ಸ್ಥಾನ ತಪ್ಪಿಸುವ ಸಲುವಾಗಿ ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎಂಬ ಮಾತುಗಳಿವೆ. 

ಸಿ.ಪೊನ್ನಿಯನ್:
ಮಾಜಿ ಹಣಕಾಸು ಸಚಿವ. 2016ರ ಚುನಾವಣೆಯಲ್ಲಿ ಸೋಲನ್ನಪ್ಪಿದವರು. ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಸೈಡ್‌ಲೈನ್‌ ಆಗಿದ್ದರೂ, ಪಕ್ಷದಲ್ಲಿ ಹಿರೀಕರ ಸ್ಥಾನ ಹೊಂದಿದವರು. 

ಓ ಪನೀರ್ ಸೆಲ್ವಂ
ಪ್ರಸಕ್ತ ಹಣಕಾಸು ಸಚಿವ. ಜಯಾಗೆ ನಂಬಿಕಸ್ಥ. 2001 ಮತ್ತು 2014ರಲ್ಲಿ ಜಯಾ ಅನುಪಸ್ಥಿತಿಯಲ್ಲಿ ಸಿಎಂ ಆಗಿ, ಯಾವುದೇ ವಿವಾದ ಮೈಮೇಲೆ ಎಳೆದುಕೊಳ್ಳದೇ ‘ಅಮ್ಮಾ' ಎಂದೇ ಹೇಳುತ್ತಿದ್ದವರು. ಇವರದ್ದೂ ಪ್ರಬಲ ತೇವರ್‌ ಸಮುದಾಯ. ಆದರೆ ಇವರಿಗೆ ಅಡ್ಡಗಾಲು ಅದೇ ಸಮುದಾಯದ ಶಶಿಕಲಾ. 

-------

ಛಾಯಾ ಮುಖ್ಯಮಂತ್ರಿಗಳು:

ಶಶಿಕಲಾ:
ಜಯಾ ಆಪ್ತೆ. ಜೈಲಿಗೂ ಒಟ್ಟಿಗೆ ಹೋಗಿ ಬಂದಿದ್ದಾರೆ. ಇವರೂ ಜಯಾ ನೆರಳಂತೆ ಕೆಲಸ ಮಾಡುತ್ತಾರೆ ಎಂಬ ಮಾತುಗಳಿವೆ. ಇವರು ಪ್ರಬಲ ತೇವರ್‌ ಸಮುದಾಯದವರು. ಒಂದು ವೇಳೆ ಮಧ್ಯಂತರ ಸಿಎಂ ಆಯ್ಕೆ ಮಾಡಬೇಕಾಗಿ ಬಂದರೆ ಇವರನ್ನೇ ಮಾಡಬಹುದು ಎಂಬ ಅಂದಾಜಿದೆ. ಆದರೆ ಇವರ ಮೇಲಿನ ಭ್ರಷ್ಟಾಚಾರ ಆರೋಪಗಳು ತಡೆಯಬಹುದು ಎನ್ನಲಾಗುತ್ತಿದೆ. 

ಶೀಲಾ ಬಾಲಕೃಷ್ಣನ್:
ನಿವೃತ್ತ ಐಎಎಸ್‌ ಅಧಿಕಾರಿ. ಸದ್ಯ ಸಲಹೆಗಾರ್ತಿ. ಇತ್ತೀಚೆಗಷ್ಟೇ ಡಿಎಂಕೆ ಅಧ್ಯಕ್ಷ ಕರುಣಾನಿಧಿ ಇವರನ್ನು ಶ್ಯಾಡೋ ಸಿಎಂ ಎಂದೇ ಕರೆದಿದ್ದರು. ಇವರು 1983 ರಿಂದಲೂ ಎಐಎಡಿಎಂಕೆ ಜತೆಯಲ್ಲೇ ಇದ್ದಾರೆ. ಜಯಾಗೆ ನಂಬಿಕಸ್ಥೆ. ಇವರು ನೋಡದೇ ಯಾವ ಫೈಲ್‌ ಕೂಡ ಮೂವ್‌ ಆಗಲ್ಲ. ಮೂಲಗಳ ಪ್ರಕಾರ, ಸದ್ಯದ ಕಾವೇರಿ ವಿಚಾರವನ್ನೂ ನಿರ್ವಹಿಸುತ್ತಿರುವುದು ಇವರೇ.

(ಕನ್ನಡಪ್ರಭ ವಾರ್ತೆ)

Follow Us:
Download App:
  • android
  • ios