ಟಿಪ್ಪು ಜಯಂತಿ ಹತ್ತಿರವಾಗುತ್ತಿದ್ದಂತೆ ಪ್ರತಿಭಟನೆಗಳ ಕಾವೂ ಏರುತ್ತಿದೆ. ಇಂದು ಟಿಪ್ಪು ಜಯಂತಿ ವಿರೋಧಿ ಸಮಿತಿ ಬೃಹತ್ ಪ್ರತಿಭಟನೆ ನಡೆಸಿ ಮತಾಂಧ ಟಿಪ್ಪುವಿನ ಮೇಲೆ ಸಿದ್ದರಾಮಯ್ಯ ಯಾಕೆ ಅಷ್ಟು ಮಮಕಾರ ತೋರಿಸುತ್ತಿದ್ದಾರೆ ಅಂತ ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಕಟು ಶಬ್ದಗಳಿಂದ ಟೀಕಿಸಿದ್ದಾರೆ.
ಬೆಂಗಳೂರು (ನ.08): ಟಿಪ್ಪು ಜಯಂತಿ ಹತ್ತಿರವಾಗುತ್ತಿದ್ದಂತೆ ಪ್ರತಿಭಟನೆಗಳ ಕಾವೂ ಏರುತ್ತಿದೆ. ಇಂದು ಟಿಪ್ಪು ಜಯಂತಿ ವಿರೋಧಿ ಸಮಿತಿ ಬೃಹತ್ ಪ್ರತಿಭಟನೆ ನಡೆಸಿ ಮತಾಂಧ ಟಿಪ್ಪುವಿನ ಮೇಲೆ ಸಿದ್ದರಾಮಯ್ಯ ಯಾಕೆ ಅಷ್ಟು ಮಮಕಾರ ತೋರಿಸುತ್ತಿದ್ದಾರೆ ಅಂತ ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಕಟು ಶಬ್ದಗಳಿಂದ ಟೀಕಿಸಿದ್ದಾರೆ. ಕೊಡಗಿನಲ್ಲಿ ಇಂದಿಗೂ ಟಿಪ್ಪುವಿನ ಹೆಸರು ಕೇಳಿದರೆ ಜನ ಕೆಂಡಾಮಂಡಲವಾಗುತ್ತಾರೆ. ಸಿದ್ದರಾಮಯ್ಯನವರಿಗೆ ಯಾಕೆ ಟಿಪ್ಪು ಮೇಲೆ ಅಷ್ಟು ಪ್ರೀತಿ? ಅವರಿಗೆ ಡಿಎನ್ಎ ಪರೀಕ್ಷೆ ಮಾಡಿಸಬೇಕು ಎಂದು ಟಿಪ್ಪು ವಿರೋಧಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಅದ್ದಂಡ ಕಾರ್ಯಪ್ಪ ತೀಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.
ಟಿಪ್ಪು ಒಬ್ಬ ಮತಾಂಧ. ಸಾಲಕ್ಕಾಗಿ ಮಕ್ಕಳನ್ನು ಒತ್ತೆ ಇಟ್ಟ ಲಜ್ಜೆಗೆಟ್ಟವ ಎಂದು ಪ್ರತಿಭಟನೆಯುದ್ಧಕ್ಕೂ ಧಿಕ್ಕಾರದ ಘೋಷಣೆಗಳನ್ನು ಕೂಗಲಾಯಿತು. ಪ್ರತಿಭಟನೆಯಲ್ಲಿ ಸರ್ಕಾರದ ಕ್ರಮಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ಟಿಪ್ಪು ಜಯಂತಿ ಆಚರಿಸಲು ಸರ್ಕಾರ ಮುಂದಾಗಿರುವುದು ನಾಚಿಕೆಗೇಡು ಅಂತಾ ಸರ್ಕಾರದ ವಿರುದ್ದ ಪ್ರತಿಭಟನಾಕಾರರು ಹರಿಹಾಯ್ದರು.
ಇನ್ನೊಂದೆಡೆ ನಾಡಿದ್ದು ಟಿಪ್ಪು ಜಯಂತಿಗೆ ಪೊಲೀಸ್ ಇಲಾಖೆ ಬಿಗಿ ಭದ್ರತೆ ಮಾಡಿಕೊಂಡಿದೆ.. 30 KSRP ತುಕಡಿ, 25 ಸಿಆರ್ ಬೆಟಲಿಯನ್, ಗರುಡ ಫೋರ್ಸ್ ನಿಯೋಜನೆ ಮಾಡಿದ್ದು ಸೂಕ್ಷ್ಮ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲು ನಿರ್ಧರಿಸಿದೆ. ಜಯಂತಿ ಆಚರಣೆ ಮಾಡುವವರು ಮೆರವಣಿಗೆ ಮಾಡುವಂತಿಲ್ಲ ಅಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ತಿಳಿಸಿದ್ದಾರೆ. ಜೊತೆಗೆ ಟಿಪ್ಪು ಜಯಂತಿ ದಿನ ಯಾವುದೇ ಸಂವಾದ, ಕಾರ್ಯಕ್ರಮಕ್ಕೆ ಅನುಮತಿ ನೀಡಬೇಡಿ, ಅದರಲ್ಲೂ ಬಿಜೆಪಿ ಪ್ರತಿಭಟನೆಗೆ ಅವಕಾಶ ನೀಡಲೇಬೇಡಿ ಅಂತ ಗೃಹ ಸಚಿವ ರಾಮಲಿಂಗಾರೆಡ್ಡಿ ಪೊಲೀಸರಿಗೆ ಖಡಕ್ ಆದೇಶ ನೀಡಿದ್ದಾರೆ.
