Asianet Suvarna News Asianet Suvarna News

ಜಾರಕಿಹೊಳಿ- ಹೆಬ್ಬಾಳ್ಕರ್‌ ವಿರಸಕ್ಕೆ ಕಾರಣ ಏನು?

ರಮೇಶ್‌ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ನಡುವೆ ಇದೀಗ ಆರಂಭವಾಗಿರುವ ಶರಂಪರ ಜಗಳಕ್ಕೆ ಎಪಿಎಂಸಿ ಹಾಗೂ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಮೇಲಿನ ಹಿಡಿತ ಕಾರಣ ಎಂದು ಮೇಲುನೋಟಕ್ಕೆ ಗೋಚರವಾಗಿದೆ. 

What Is The Reason Behind Lakshmi Hebbalkar And Ramesh Jarkiholi Fight
Author
Bengaluru, First Published Sep 5, 2018, 11:14 AM IST

ಬೆಂಗಳೂರು :  ಬೆಳಗಾವಿ ರಾಜಕಾರಣದಲ್ಲಿ ಒಗ್ಗೂಡಿ ಹಿಡಿತ ಸಾಧಿಸಲು ಹೊರಟಿದ್ದ ಕಾಂಗ್ರೆಸ್‌ನ ರಮೇಶ್‌ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ನಡುವೆ ಇದೀಗ ಆರಂಭವಾಗಿರುವ ಶರಂಪರ ಜಗಳಕ್ಕೆ ಎಪಿಎಂಸಿ ಹಾಗೂ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಮೇಲಿನ ಹಿಡಿತ ಕಾರಣ ಎಂದು ಮೇಲುನೋಟಕ್ಕೆ ಗೋಚರವಾಗುತ್ತಿದೆ. ಆದರೆ, ಆಳದಲ್ಲಿ ದೀರ್ಘಕಾಲದ ಸಂಬಂಧವೊಂದು ಹಣಕಾಸು ಹಾಗೂ ಪ್ರಭಾವಶಾಲಿಗಳ ಮೂಗು ತೂರಿಸುವಿಕೆಯ ಪರಿಣಾಮವಾಗಿ ಹಳಸಿದೆ ಎಂದೇ ಜಿಲ್ಲೆಯ ರಾಜಕಾರಣ ಬಲ್ಲವರು ಹೇಳುತ್ತಾರೆ.

ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರಾದ ಲಕ್ಷ್ಮೇ ಹೆಬ್ಬಾಳ್ಕರ್‌ ಅವರು ರಾಜಕೀಯ ಪ್ರವರ್ಧಮಾನಕ್ಕೆ ಬಂದ ದಿನದಿಂದಲೂ ರಾಜ್ಯದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್‌ ಅವರ ಬೆಂಬಲಿಗರು ಎಂದೇ ಗುರುತಿಸಿಕೊಂಡು ಬಂದವರು. ಇನ್ನು ಬೆಳಗಾವಿ ರಾಜಕಾರಣದಲ್ಲಿ ಲಕ್ಷ್ಮೇ ಅವರ ಹಿಡಿತ ಬಿಗಿಗೊಳ್ಳಲು ಕಾರಣವಾಗಿದ್ದು ರಮೇಶ್‌ ಜಾರಕಿಹೊಳಿ ಅವರ ಜತೆಗಿನ ರಾಜಕೀಯ ಒಡನಾಟ. ತಮ್ಮ ಸಹೋದರ ಸತೀಶ್‌ ಜಾರಕಿಹೊಳಿ ಅವರೊಂದಿಗೆ ಬೆಳಗಾವಿ ಮೇಲಿನ ಹಿಡಿತಕ್ಕಾಗಿ ಪೈಪೋಟಿ ನಡೆಸುತ್ತಿದ್ದ ರಮೇಶ್‌ ಅವರು ಲಕ್ಷ್ಮೇ ಹೆಬ್ಬಾಳ್ಕರ್‌ ಜತೆ ಗೂಡಿ ಬೆಳಗಾವಿಯಲ್ಲಿ ರಾಜಕೀಯ ದಾಳಗಳನ್ನು ಹೂಡುತ್ತಿದ್ದರು.

ಹೀಗೆ ಜಾರಕಿಹೊಳಿ ಕುಟುಂಬದಲ್ಲಿ ಭಿನ್ನಮತವಿದ್ದರೆ, ರಮೇಶ್‌ ಹಾಗೂ ಲಕ್ಷ್ಮೇ ಅವರ ನಡುವೆ ರಾಜಕೀಯ ಒಡನಾಟ ಅತ್ಯುತ್ತಮವಾಗಿತ್ತು. ಇದು ಯಾವ ಮಟ್ಟಕ್ಕೆ ಎಂದರೆ ಈ ಇಬ್ಬರು ನಾಯಕರ ನಡುವೆ ಹಣಕಾಸು ಕೊಡು-ಕೊಳ್ಳುವಿಕೆ ದೊಡ್ಡ ಮಟ್ಟದಲ್ಲೇ ಇತ್ತು. ಜಾರಕಿಹೊಳಿ ಕುಟುಂಬಕ್ಕೆ ಆತ್ಮೀಯವಾಗಿರುವ ಮೂಲಗಳ ಪ್ರಕಾರ ಕಳೆದ ಚುನಾವಣೆ ವೇಳೆ ಲಕ್ಷ್ಮೇ ಹೆಬ್ಬಾಳ್ಕರ್‌ ಅವರಿಂದ ದೊಡ್ಡ ಮೊತ್ತವೊಂದು ರಮೇಶ್‌ ಅವರಿಗೆ ಸಂದಾಯವಾಗಿತ್ತು ಎನ್ನಲಾಗುತ್ತಿದೆ.

ಆದರೆ, ಚುನಾವಣೆ ನಂತರ ಈ ಮೊತ್ತವನ್ನು ಹಿಂದಿರುಗಿಸುವಂತೆ ಕೇಳಿದಾಗ ಮೊದಲ ಬಾರಿಗೆ ಸಮಸ್ಯೆ ಆರಂಭವಾಗಿದೆ. ಚುನಾವಣೆ ಪೂರ್ವದಲ್ಲಿ ರಮೇಶ್‌ ಅವರು ಕೂಡ ಭಾರಿ ಪ್ರಮಾಣದಲ್ಲಿ ಲಕ್ಷ್ಮೇ ಅವರೊಂದಿಗೆ ಹಣಕಾಸು ಕೊಡು-ಕೊಳ್ಳುವಿಕೆ ಮಾಡಿದ್ದರು. ಲಕ್ಷ್ಮೇ ಅವರು ಸವದತ್ತಿ ತಾಲೂಕಿನಲ್ಲಿ ನಿರ್ಮಾಣ ಮಾಡುತ್ತಿರುವ ಸಕ್ಕರೆ ಕಾರ್ಖಾನೆಗೂ ರಮೇಶ್‌ ಸಾಕಷ್ಟುಬೆಂಬಲ ಹಾಗೂ ನೆರವು ನೀಡಿದ್ದರು. ಇಷ್ಟಿದ್ದರೂ ಚುನಾವಣೆ ವೇಳೆ ವೆಚ್ಚವಾದ ಮೊತ್ತದ ಲೆಕ್ಕ ಕೇಳಿದ್ದರಿಂದಲೋ ಅಥವಾ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದರಿಂದಲೋ ಅವರ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ. ಇದಾದ ನಂತರ ಲಕ್ಷ್ಮೇ ಅವರಿಂದ ರಮೇಶ್‌ ಅಂತರ ಕಾಯ್ದುಕೊಳ್ಳತೊಡಗಿದ್ದರು.

ಇದೇ ವೇಳೆ ವಾಲ್ಮೀಕಿ ಸಮುದಾಯ ಸ್ವಾಮೀಜಿಯೊಬ್ಬರು ಭಿನ್ನಾಭಿಪ್ರಾಯ ಹೊಂದಿದ್ದ ಜಾರಕಿಹೊಳಿ ಕುಟುಂಬದ ಸಹೋದರರ (ಬಿಜೆಪಿಯಲ್ಲಿರುವ ಬಾಲಚಂದ್ರ ಜಾರಕಿಹೊಳಿ, ಕಾಂಗ್ರೆಸ್‌ನಲ್ಲಿರುವ ರಮೇಶ್‌ ಹಾಗೂ ಸತೀಶ್‌ ಜಾರಕಿಹೊಳಿ) ನಡುವೆ ಸಂಧಾನ ನಡೆಸಿ, ಸಮುದಾಯದ ಹಿತಕ್ಕಾಗಿ ಒಗ್ಗಟ್ಟಿನಿಂದ ಇರುವಂತೆ ಸೂಚಿಸಿದ್ದರು. ಇದಾದ ನಂತರ ಸಹೋದರರು ಒಗ್ಗೂಡಿದ್ದರು.

ಹೀಗೆ ಜಾರಕಿಹೊಳಿ ಸಹೋದರರು ಒಗ್ಗೂಡಿದ ನಂತರ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲೂ ಲಕ್ಷ್ಮೇ ಅವರ ಪ್ರಾಬಲ್ಯ ಕಡಿಮೆಯಾಗುವ ಲಕ್ಷಣ ಗೋಚರಿಸಿದವು. ಈ ಹಂತದಲ್ಲಿ ಲಕ್ಷ್ಮೇ ಅವರು ತಮ್ಮ ನಾಯಕರೆನಿಸಿದ ಡಿ.ಕೆ.ಶಿವಕುಮಾರ್‌ ಅವರ ಬೆಂಬಲ ಪಡೆದಿದ್ದಾರೆ. ಹೀಗಾಗಿ ಬೆಳಗಾವಿಗೆ ಸಂಬಂಧಿಸಿದ ಬೆಳವಣಿಗೆಗಳಲ್ಲಿ ಶಿವಕುಮಾರ್‌ ಅವರು ನೇರವಾಗಿ ಪಾಲ್ಗೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ವಿಶೇಷವಾಗಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸರ್ಕಾರದಲ್ಲಿ ಪ್ರಭಾವಿಯಾಗಿರುವ ಶಿವಕುಮಾರ್‌, ಬೆಳಗಾವಿ ಜಿಲ್ಲೆಯ ವ್ಯವಹಾರಗಳಲ್ಲಿ ಲಕ್ಷ್ಮೇ ಮಾತು ನಡೆಯುವಂತೆ ಮಾಡಿದ್ದರು.

ಇದು ಜಾರಕಿಹೊಳಿ ಸಹೋದರರನ್ನು ಕಂಗೆಡಿಸಿದೆ. ಶಿವಕುಮಾರ್‌ ಅವರು ಬೆಳಗಾವಿ ರಾಜಕಾರಣದಲ್ಲಿ ಮೂಗು ತೂರಿಸಬಾರದು ಎಂದು ಖುದ್ದು ರಮೇಶ್‌ ಜಾರಕಿಹೊಳಿ ಅವರು ಹೈಕಮಾಂಡ್‌ಗೂ ದೂರು ನೀಡುವ ಮಟ್ಟಕ್ಕೆ ಇದು ಬೆಳೆದಿದೆ. ಅಷ್ಟೇ ಅಲ್ಲ, ಶಾಸಕರ ತಂಡವೊಂದನ್ನು ತಮ್ಮೊಂದಿಗೆ ಇಟ್ಟುಕೊಂಡಿರುವ ರಮೇಶ್‌ ಅವರು ಬೆಳಗಾವಿ ವಿಚಾರದಲ್ಲಿ ರಾಜ್ಯ ಮಟ್ಟದ ನಾಯಕರು ತಲೆ ಹಾಕಿದರೆ ಸರ್ಕಾರಕ್ಕೆ ಧಕ್ಕೆಯಾದೀತು ಎಂಬ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಇದೆಲ್ಲದರ ಪರಿಣಾಮವಾಗಿ ಕಾಂಗ್ರೆಸ್‌ ಹೈಕಮಾಂಡ್‌ ಲಕ್ಷ್ಮೇ ಹೆಬ್ಬಾಳ್ಕರ್‌ ಅವರಿಗೆ ಜಾರಕಿಹೊಳಿ ಸಹೋದರರ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡಿದೆ ಎನ್ನಲಾಗುತ್ತಿದೆ.

Follow Us:
Download App:
  • android
  • ios