*ನಾಲ್ಕೂವರೆ ವರ್ಷಗಳ ಕಾಲ ರಾಜ್ಯ ಆಳಿರುವ  ಸರ್ಕಾರದ ಆಡಳಿತದ ಬಗ್ಗೆ ನಮಗೆ ಸಂತೋಷವಿದೆ - ಶೇ. 13* ಸಿದ್ದರಾಮಯ್ಯ ಸರ್ಕಾರದ ಆಡಳಿತ ವೈಖರಿ  ಬಗ್ಗೆ ಪರಿಪೂರ್ಣ ಸಂತೋಷವಿಲ್ಲ, ಆದರೆ ಒಂದು ಮಟ್ಟಿಗೆ ಸಂತೋಷವಿದೆ - ಶೇ.29*ಈ ಸರ್ಕಾರದ ಸಾಧನೆ ಕಾರ್ಯನಿರ್ವಹಣೆ  ಬಗ್ಗೆ ಅತೀವ ಸಂತೋಷವಿಲ್ಲ. ಆದರೆ ತೃಪ್ತಿದಾಯಕವಾಗಿದೆ - ಶೇ. 16*ಈ ಸರ್ಕಾರದ ಕಾರ್ಯನಿರ್ವಹಣೆ ಬಗ್ಗೆ ಸಂತೋಷವಿಲ್ಲ. ನಮಗೆ ಒಂದಷ್ಟು ಸಮಾಧಾನವಿದೆ - ಶೇ. 19*ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಸಂತೋಷ ತಂದಿಲ್ಲ.  ಈ ಬಗ್ಗೆ ಭಾರಿ ಬೇಸರವಿದೆ - ಶೇ.20*ಸರ್ಕಾರದ ಆಡಳಿತ ಹೇಗಿದೆ, ಅದರಿಂದ ನಮಗೆ ತೃಪ್ತಿ ಇದೆಯೋ, ಅತೃಪ್ತಿ ಇದೆಯೋ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ - ಶೇ. 3

ಬೆಂಗಳೂರು(ಡಿ.7): ಹಾಲಿ ಸರ್ಕಾರದ ಕಾರ್ಯವೈಖರಿ ಯಾವಾಗಲೂ ಮುಂದಿನ ಚುನಾವಣೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಅದರಲ್ಲೂ 5 ಅಥವಾ 10 ವರ್ಷ ಪೂರೈಸಿದ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಕೂಡ ಬರಬಹುದು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ಕಾರ್ಯವೈಖರಿ ನಿಮಗೆ ತೃಪ್ತಿ ತಂದಿದೆಯೇ ಎಂಬ ಪ್ರಶ್ನೆಗೆ ಶೇ.58ರಷ್ಟು ಜನರು ಸಕಾರಾತ್ಮಕವಾಗಿ ಉತ್ತರಿಸಿರುವುದು ಬಹಳ ಮುಖ್ಯ ಸಂಗತಿ.

 ಬಿಜೆಪಿ ಹಾಗೂ ಜೆಡಿಎಸ್‌ಗೆ ಇದು ಚಿಂತಾಜನಕ ವಿಚಾರ ಕೂಡ ಹೌದು. ಸಿದ್ದರಾಮಯ್ಯ ಸರ್ಕಾರದ ಸಾಧನೆ ತೃಪ್ತಿಕರವಾಗಿಲ್ಲ ಎಂದು ಹೇಳಿದವರು ಶೇ.39 ಜನರು ಮಾತ್ರ. ಶೇ.3ರಷ್ಟು ಜನ ಗೊತ್ತಿಲ್ಲ ಎಂದಿರುವುದರಿಂದ ಅವರು ಮತದಾನದ ವೇಳೆ ಯಾವ ಕಡೆ ಬೇಕಾದರೂ ವಾಲಬಹುದು.

ಆಶ್ಚರ್ಯಕರ ಸಂಗತಿ ಏನೆಂದರೆ, ಶೇ.49ರಷ್ಟು ಲಿಂಗಾಯತರು ಹಾಗೂ ಶೇ.45ರಷ್ಟು ಒಕ್ಕಲಿಗರು ಕೂಡ ಸಿದ್ದರಾಮಯ್ಯ ಸರ್ಕಾರದ ಆಡಳಿತ ಚೆನ್ನಾಗಿದೆ ಎಂದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್‌ಗಳನ್ನು ಮತ್ತಷ್ಟು ಚಿಂತೆಗೆ ದೂಡುವ ಸಂಗತಿಯಿದು. ಕರ್ನಾಟಕ ರಾಜಕೀಯದ ಇತ್ತೀಚಿನ ಇತಿಹಾಸವನ್ನೇ ನೋಡುವುದಾದರೆ ಒಂದು ಸರ್ಕಾರ ಐದು ವರ್ಷ ಪೂರ್ಣಗೊಳಿಸುವಷ್ಟರಲ್ಲಿ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತದೆ. ಆದರೆ ಸಿದ್ದರಾಮಯ್ಯ ವಿರುದ್ಧ ಅಂತಹ ಆಕ್ರೋಶ ರಾಚುತ್ತಿಲ್ಲ.