ಕನ್ನಡ ಶಾಲೆಗಳ ವಿಲೀನಕ್ಕೂ, ಮುಚ್ಚೋದಕ್ಕೂ ಏನು ವ್ಯತ್ಯಾಸ?
ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ವಿಲೀನ ಮಾಡುವುದಕ್ಕೆ ಬಜೆಟ್ ನಲ್ಲಿ ಒಪ್ಪಿಗೆ ನೀಡಿರುವ ಬಗ್ಗೆ ಹಿರಿಯ ಸಾಹಿತಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಲೀನ ಮಾಡುವುದು ಅಥವಾ ಮುಚ್ಚುವುದು ನಡುವಿನ ವ್ಯತ್ಯಾಸ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು[ಜು.6] ಸರ್ಕಾರಿ ಶಾಲೆಗಳ ವಿಲೀನಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ತಪ್ಪು ನಿರ್ಧಾರ ಮಾಡಿದೆ ಎಂದು ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ ಹೇಳಿದ್ದಾರೆ.
ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕೇ ಹೊರತು ಮುಚ್ಚುವುದಲ್ಲ. ವಿಲೀನಕ್ಕೂ ಮುಚ್ಚುವುದಕ್ಕೂ ವ್ಯತ್ಯಾಸ ಇಲ್ಲ. ಹೀಗೆ ಮಾಡಿದರೆ ಖಾಸಗಿ ಶಾಲೆಗಳಿಗೆ ಪರೋಕ್ಷ ಬೆಂಬಲ ನೀಡಿದಂತಾಗುತ್ತದೆ ಎಂದು ಹೇಳಿದ್ದಾರೆ.
ಈಗಾಗಲೇ ಖಾಸಗಿಯವರಿಗೆ ಹಣ ಕೊಟ್ಟು ಸರ್ಕಾರ ಬೆಳೆಸಿದೆ ಆರ್ ಟಿಇ ಕಾಯ್ದೆ ರದ್ದಾಗಬೇಕು ಅದರಿಂದ ಬಡ ವಿದ್ಯಾರ್ಥಿಗಳಿಗೆ ಯಾವುದೇ ಲಾಭ ಆಗುತ್ತಿಲ್ಲ. ಖಾಸಗಿ ಶಾಲೆಗಳು ಆರ್ ಟಿಇ ಮಕ್ಕಳನ್ನು ಕೀಳಾಗಿ ನಡೆಸಿಕೊಳ್ಳುತ್ತಾ ಇದೆ. ಈ ಬಗ್ಗೆ ಅನೇಕ ದೂರುಗಳು ಬಂದಿರುವುದು ಗೊತ್ತಿರುವ ವಿಚಾರ ಎಂದು ಹೇಳಿದರು.
ಆರ್ ಟಿಇ ಹೆಸರಿನಲ್ಲಿ 22 ಕೋಟಿ ರು. ಗೂ ಅಧಿಕ ಹಣವನ್ನು ಖಾಸಗಿ ಶಾಲೆಗಳಿಗೆ ಕೊಡುವ ಬದಲು ಅದೇ ಹಣದಲ್ಲಿ ಸರ್ಕಾರಿ ಶಾಲೆಗಳನ್ನೇ ಅಭಿವೃದ್ಧಿ ಪಡಿಸಿದರೆ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗುತ್ತದೆ. ಆರ್ ಟಿಇ ರದ್ದು ಪಡಿಸಲು ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಭಾಷೆ ಜಾರಿಗೆ ತರುವ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದು ಹೇಳಿದರು.