ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲದ ಸರ್ಕಾರ ನಮ್ಮದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇ ಪದೇ ಹೇಳುತ್ತಾ ಬಂದಿದ್ದರೂ ಪ್ರತಿಪಕ್ಷಗಳು ಈ ಸರ್ಕಾರದ ವಿರುದ್ಧ ಒಂದಾದ ಮೇಲೊಂದು ಭ್ರಷ್ಟಾಚಾರದ ಆರೋಪ ಮಾಡುತ್ತಲೇ ಬಂದಿವೆ. ಇದೀಗ ಜನರು ಏನು ಹೇಳುತ್ತಾರೆಂದು ಕೇಳುವ ಸಮಯ.
ಬೆಂಗಳೂರು(ಡಿ.7): ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲದ ಸರ್ಕಾರ ನಮ್ಮದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇ ಪದೇ ಹೇಳುತ್ತಾ ಬಂದಿದ್ದರೂ ಪ್ರತಿಪಕ್ಷಗಳು ಈ ಸರ್ಕಾರದ ವಿರುದ್ಧ ಒಂದಾದ ಮೇಲೊಂದು ಭ್ರಷ್ಟಾಚಾರದ ಆರೋಪ ಮಾಡುತ್ತಲೇ ಬಂದಿವೆ. ಇದೀಗ ಜನರು ಏನು ಹೇಳುತ್ತಾರೆಂದು ಕೇಳುವ ಸಮಯ. ಶೇ.15ರಷ್ಟು ಜನರು ಮಾತ್ರ ಸಿದ್ದರಾಮಯ್ಯ ಅವರದ್ದು ಭ್ರಷ್ಟಾ ಚಾರ ಮುಕ್ತ ಸರ್ಕಾರ ಎಂದಿದ್ದಾರೆ. ದೊಡ್ಡ ಸಂಖ್ಯೆಯ ಜನ, ಅಂದರೆ ಶೇ.39ರಷ್ಟು ಮಂದಿ ಇರಬಹುದು ಎಂದಷ್ಟೇ ಹೇಳಿದ್ದಾರೆ.
ಇನ್ನುಳಿದವರು ಇದು ಭ್ರಷ್ಟ ಸರ್ಕಾರ ಎಂದಿದ್ದಾರೆ. ಹಾಗಾಗಿ ಭ್ರಷ್ಟಾಚಾರದ ವಿಷಯದಲ್ಲಿ ಸರ್ಕಾರ ಎದೆತಟ್ಟಿಕೊಂಡು ಚುನಾವಣೆಗೆ ಹೋಗುವಂತಿಲ್ಲ. ಇದು ಕಾಂಗ್ರೆಸ್ಸಿಗೆ ತಲೆನೋವು ತರುವ ಹಾಗೂ ಬಿಜೆಪಿ-ಜೆಡಿಎಸ್’ಗೆ ನೆಮ್ಮದಿ ತರುವ ವಿಚಾರ. ಸ್ವಚ್ಛ ಆಡಳಿತಕ್ಕೆ ಯಾವಾಗಲೂ ಜನರು ಪ್ರಾಮುಖ್ಯತೆ ನೀಡುತ್ತಾರೆ. ಅದು ಚುನಾವಣೆಯಲ್ಲೂ ನಿಸ್ಸಂಶಯವಾಗಿ ಪ್ರತಿಬಿಂಬಿತವಾಗುತ್ತದೆ.

ಹ್ಯೂಬ್ಲೊ ವಾಚ್ ಪ್ರಕರಣದಲ್ಲಿ ಸಿಎಂ ಅಮಾಯಕರೆ..? : ಸಿದ್ದರಾಮಯ್ಯಗೆ ಹಾಗೂ ಕಾಂಗ್ರೆಸ್ಸಿಗೆ ಅತ್ಯಂತ ಮುಜುಗರ ತಂದ ಪ್ರಕರಣ ವೆಂದರೆ 70 ಲಕ್ಷ ರು. ಮೌಲ್ಯದ ಹ್ಯೂಬ್ಲೊ ವಾಚ್ ಪ್ರಕರಣ. ಸ್ನೇಹಿತ ಇದನ್ನು ಗಿಫ್ಟ್ ಕೊಟ್ಟಿದ್ದಾನೆಂದು ಸಿಎಂ ಹೇಳಿಕೊಂಡರೂ ಪ್ರತಿಪಕ್ಷಗಳು ಇದರಲ್ಲಿ ಭ್ರಷ್ಟಾ ಚಾರ ನಡೆದಿದೆ, ಈ ವಾಚ್ ನೀಡಿದವರಿಗೆ ಸಿಎಂ ಏನೋ ಲಾಭ ಮಾಡಿಕೊಟ್ಟಿದ್ದಾರೆ ಎಂದು ಶಂಕಿಸಿದ್ದವು. ಕೊನೆಗೆ ಸಿಎಂ ಆ ವಾಚನ್ನು ಸರ್ಕಾರಕ್ಕೆ ಒಪ್ಪಿಸಿಬಿಟ್ಟರು. ಹಾಗಾದರೆ ಈ ಪ್ರಕರಣದಲ್ಲಿ ಸಿದ್ದು ಅಮಾಯಕರೇ ಎಂಬ ಪ್ರಶ್ನೆಗೆ ಶೇ.16ರಷ್ಟು ಜನ ಮಾತ್ರ ಹೌದು ಎಂದಿದ್ದಾರೆ.
35ರಷ್ಟು ಜನ ಇರಬಹುದು ಎಂದಿದ್ದಾರೆ. ಆದರೆ, ಇನ್ನರ್ಧದಷ್ಟು ಜನರು ಏನು ಹೇಳಿದ್ದಾರೆಂಬುದು ಕುತೂಹಲಕರವಾಗಿದೆ. ಶೇ.25ರಷ್ಟು ಜನ ಮಾತ್ರ ಸಿಎಂ ಅಮಾಯಕರಲ್ಲ ಎಂದಿದ್ದಾರೆ. ಆದರೆ, ಶೇ.24ರಷ್ಟು ಜನ ಗೊತ್ತಿಲ್ಲ ಅಂದಿರುವುದು ಬಹುಶಃ ಸರ್ಕಾರಕ್ಕೆ ಪ್ಲಸ್ ಪಾಯಿಂಟ್. ಜನರು ಈ ವಿಷಯಕ್ಕೆ ಅಷ್ಟೊಂದು ಪ್ರಾಮುಖ್ಯತೆ ನೀಡಲಾರರು ಎಂಬ ಅಂಶ ವೇದ್ಯವಾಗುತ್ತಿದೆ.

