ಶ್ರೀನಿಧಿ ಡಿ.ಎಸ್

ಬೆಂಗಳೂರು : ವಿಧಾನಸೌಧ ಸ್ಟಾಪಿನಲ್ಲಿ ಮೆಟ್ರೋ ನಿಂತಾಗ, ನನ್ನ ಪಕ್ಕದಲ್ಲೇ ಒಬ್ಬರು ಹಿರಿಯ ಮಹಿಳೆ ಬಂದು ನಿಂತರು. ಲಗುಬಗೆಯಿಂದ ಮೊಬೈಲು ತೆಗೆದೋರೇ, ಹೆಡ್ ಸೆಟ್ಟು ಸಿಕ್ಕಿಸಿಕೊಂಡು, ಅದ್ಯಾವುದೋ ಸಿನಿಮಾ ನೋಡಲು ಶುರುಮಾಡಿದರು. ಅಷ್ಟು ಗಡಿಬಿಡಿಯಿಂದ ಅದೇನು ನೋಡುತ್ತಿದ್ದಾರೆ ಎಂದು ಸಹಜ ಕುತೂಹಲದಿಂದ ಕಣ್ಣಾಡಿಸಿದರೆ, ಆಪ್ ಒಂದರಲ್ಲಿ ಮೊದಲೇ ಡೌನ್ ಲೋಡು ಮಾಡಿಟ್ಟುಕೊಂಡಿದ್ದ ಹಾಲಿವುಡ್ ಸಿನಿಮಾ, ಐರನ್ ಮ್ಯಾನ್. ನನ್ನಮ್ಮನ ವಯಸ್ಸಿನ ಮಹಿಳೆಯೊಬ್ಬರು ಈ ಚಿತ್ರ ನೋಡುತ್ತಿದ್ದಾರಲ್ಲ ಎಂದು ಅಚ್ಚರಿಯೂ, ಖುಷಿಯೂ ಆಯಿತು. 

ಹಾಂ, ಇಂತಹ ಅನುಭವ ಇದೇ ಮೊದಲೇನೂ ಅಲ್ಲ. ಬೆಂಗಳೂರಿನ ಮೆಟ್ರೋ ಹತ್ತಿದ ಕೂಡಲೇ, ಅದರ ಅಂದ ಚಂದ ಗಮನ ಸೆಳೆಯುತ್ತದೋ ಇಲ್ಲವೋ,  ಇದೊಂದು ವಿಚಾರ ಮಾತ್ರ ಸಟ್ಟನೆ ತಲೆಗೆ ಹೋಗುತ್ತದೆ. ಏರು ಹೊತ್ತಿನ ಕಿಕ್ಕಿರಿದ ಸಂದಣಿಯಲ್ಲೂ ವಯಸ್ಸಿನ ಯಾವುದೇ ಬೇಧಭಾವ ಇಲ್ಲದೇ, ಎಲ್ಲರೂ ಎರಡೂ ಕಿವಿಗಳಿಗೆ ಹೆಡ್ಫೋನು ಸಿಕ್ಕಿಸಿಕೊಂಡು ತಮ್ಮದೇ ಏಕಾಂತವನ್ನು ಸೃಷ್ಟಿ ಮಾಡಿಕೊಂಡು ಮೊಬೈಲಿನೊಳಗೆ ಕಳೆದು ಹೋಗಿರುತ್ತಾರೆ. 

ತಮ್ಮಕ್ಕಷ್ಟೆ ತಾವು ನಗುತ್ತ, ಪೆಚ್ಚುಮೋರೆ ಹಾಕುತ್ತ ಪಕ್ಕದವನ ಜಗತ್ತಿಗೂ ತನಗೂ ಸಂಬಂಧವೇ ಇಲ್ಲದ ಹಾಗೆ ನಿಂತಿರುತ್ತಾರೆ.  ಯೂಟ್ಯೂಬು, ಫೇಸ್ ಬುಕ್ಕು, ಹಾಟ್ ಸ್ಟಾರುಗಳೇ ಮೊದಲಾದ ಥರಹೇವಾರಿ ಅಪ್ಲಿಕೇಶನ್ನುಗಳಲ್ಲಿನ ರಂಜನೆಯ ಲೋಕದಲ್ಲಿ ಸೇರಿಕೊಂಡಿರುತ್ತಾರೆ. ಬೆಂಗಳೂರು ಮಾತ್ರವಲ್ಲ, ಜಗತ್ತಿನ ಎಲ್ಲಕಡೆ ಇವತ್ತಿನ ಹೊತ್ತಿನಲ್ಲಿ ಕಾಣುವ ಸರಳ ದೃಶ್ಯ ಇದು. ಬೇರೆಡೆಗಳಲ್ಲಿ ಕೊಂಚ ಬೇಗ ಶುರುವಾಗಿದ್ದು, ಭಾರತಕ್ಕೆ ಮಾತ್ರ ತಡವಾಗಿ ಬಂದಿದೆ, ಅಷ್ಟೆ.

ಅಂತರ್ಜಾಲ ಬಳಕೆಯ ಕ್ರಾಂತಿ ಭಾರತದಲ್ಲಿ ಇಪ್ಪತ್ತನೇ ಶತಮಾನದ ಅಂತ್ಯದಲ್ಲಾಯಿತು. ಸ್ಮಾರ್ಟ್ ಫೋನುಗಳು ಇಲ್ಲಿಗೆ  ಲಿಟ್ಟದ್ದೂ ಅಲ್ಲಿಂದ ಕೆಲ ವರುಷಗಳ ನಂತರ. ಮೊಬೈಲ್ ಫೋನೆಂಬುದರಲ್ಲಿ ಕರೆ ಮಾಡುವ ಸೌಲಭ್ಯಕ್ಕಿಂತ ಬೇರೆಲ್ಲ ವಿಚಾರಗಳು ಮಹತ್ವ ಪಡೆದುಕೊಳ್ಳಲು ಆರಂಭವಾಗಿದ್ದೂ ಆವಾಗಲೇ. ಆಂಡ್ರಾಯ್ಡ್, ವಿಂಡೋಸ್, ಐಓಎಸ್ ಗಳೆಂಬ ಥರಹೇವಾರಿ ಆಪರೇಟಿಂಗ್ ಸಿಸ್ಟಂ ಗಳನ್ನು ಹೊಂದಿದ ಸ್ಮಾರ್ಟ್ ಫೋನುಗಳು ಭಾರತೀಯ ತಂತ್ರಜ್ಞಾನ ಮಾರು ಕಟ್ಟೆಯ ಮೇಲೆ ಅಕ್ಷರಶಃ ದಾಳಿಯನ್ನೇ ನಡೆಸಿ, ಇಲ್ಲಿನ ಗ್ರಾಹಕರಿಗೆ ದಿಗಿಲಾಗುವ ಮಟ್ಟದ ಆಕರ್ಷಕ  ಆಯ್ಕೆಗಳು ಲಭ್ಯವಾದವು. ಬೆರಳಂಚಿನ ಸ್ಪರ್ಶಕ್ಕೆ ಜಗತ್ತೇ ತೆರೆದುಕೊಳ್ಳುವ ಈ ರೋಮಾಂಚನ ಯಾವಾಗ ಆರಂಭವಾಯಿತೋ, ಅಂದಿನಿಂದ ಇಂದಿನವರೆಗೂ, ತೋರು ಬೆರಳ ತುದಿಗೆ ಮಾಹಿತಿ ಪ್ರವಾಹವೇ ಹರಿದು ಬರುತ್ತಿದೆ. ಬೇಕೋ ಬೇಡವೋ ಧಂಡಿಯಾಗಿ ಮೊಬೈಲು ತುಂಬ ಮನೋರಂಜನೆ ತುಂಬಿಕೊಂಡಿದೆ.

ಮೊಬೈಲ್ ಜಾಹೀರಾತಿನ ಬಣ್ಣ ಬಣ್ಣದ ನೀಯಾನು ಫಲಕಗಳು ಬಸರೀಕಟ್ಟೆಯಿಂದ ಬೆಂಗಳೂರು ತುದಿಯವರೆಗೆ ತಲುಪಲು  ಮುಖ್ಯ ಕಾರಣ ಕಿಸೆಗೆ ಬಿಸಿಯಾಗದ ದರ ಮತ್ತು ಈ ರಂಜನೆ ಎನ್ನುವ ಆಯಾಮ. ಚಲನಚಿತ್ರಗಳ ಪುಟ್ಟ ತುಣುಕುಗಳೂ, ಇಷ್ಟದ ಹಾಡುಗಳ ಡೌನ್ ನೋಡು ಮತ್ತು ನಾಲ್ಕಾರು ಎಂಬೀಗಳ ವಾಟ್ಸಪ್ ಸಂದೇಶಗಳಿಂದ ಆರಂಭವಾದ ಈ ಗೀಳು, ಈಗ ಮರಳಿ ಹೋಗಲಾದಷ್ಟು ದೂರದ ದಾರಿಯಲ್ಲಿ ನಮ್ಮನ್ನ ಕರೆತಂದು ಬಿಟ್ಟಿದೆ. 

ಯಾವಾಗ ಜಿಯೋ ಎಂಬ ದೂರವಾಣಿ ದೈತ್ಯ ಬಂದು, ಮೆಗಾಬೈಟುಗಳ ಪ್ರಪಂಚದಿಂದ ಗಿಗಾಬೈಟುಗಳ ಅಗಾಧ ಅಂತರ್ಜಾಲ  ಪ್ರಪಂಚವನ್ನು ದರ್ಶನ ಮಾಡಿಸಿತೋ, ಅಲ್ಲಿಂದಾಚೆಗೆ ನಡೆದದ್ದು ಮನರಂಜನೆಯ ಮೇಘಸ್ಪೋಟ! ಆಮೇ ವೇಗದಲ್ಲಿ ದಿನಕ್ಕೆ ಐವತ್ತು ಅರವತ್ತು ಎಂಬೀಗಳಲ್ಲಿ ಬದುಕುತ್ತಿದ್ದ ಜಂಗಮಜೀವಿಗಳಿಗೆ ಒಮ್ಮೆಗೇ ತಿಂಗಳುಗಳ ಕಾಲ ಉಚಿತವಾಗಿ ನಾಲ್ಕಾರು ಜೀಬಿಗಳ ಡಾಟಾ ಪ್ಯಾಕ್, ಅದೂ ಭರಪೂರ ವೇಗದಲ್ಲಿ! ನಿತ್ಯ ಗಂಜಿಯುಣ್ಣುತ್ತಿದ್ದವನಿಗೆ ಮೃಷ್ಟಾನ್ನ ಭೋಜನದ ಸಂಭ್ರಮ. ಇದೇನು ಭ್ರಮೆಯೋ ಸತ್ಯವೋ ಅರಿಯಲಾಗದ ಪರಿಸ್ಥಿತಿ. ಮೊದಮೊದಲು ಹೀಗಳೆದವರೂ ಕೊನೆಗೆ ಅದೇ ದಾರಿಗೆ ಬಂದರು. ಒಂದು ಜೀಬಿ ಇಂಟರ್ ನೆಟ್‌ಗೆ ನಾಲ್ಕುನೂರು ರೂಪಾಯಿಗಳಿಂದ ನಾಲ್ಕೆಂಟು ರೂಪಾಯಿಗೆ ಇಳಿದದ್ದು ಪವಾಡ ಸದೃಶವಾಗಿತ್ತು. ಇದಾದಮೇಲೆ ಭಾರತದ ಸಕಲೆಂಟು ದೂರವಾಣಿ ಕಂಪನಿಗಳೂ ತಮ್ಮ ಅಂತರ್ಜಾಲ ದರವನ್ನು ಇಳಿಸಲೇಬೇಕಾಯಿತು. 

ಈ ಮೊಬೈಲ್ ಕಂಪನಿಗಳ ಡಾಟಾಸಮರದಲ್ಲಿ ಕೊನೆಗೂ ಗೆದ್ದಿದ್ದು, ಬಳಕೆದಾರನೇ. ತಿಂಗಳಿಗೆ ಸಾಕಾಗುತ್ತಿದ್ದ ಒಂದು ಜಿಬಿ ಎಂಬ ಮಾಯಾಂಗನೆ, ಈಗ ಒಂದನೇ ದಿನ ಸಂಜೆಯವರೆಗೂ ಬರುವುದಿಲ್ಲ ಎಂಬಲ್ಲಿಗೂ ಬಂತು! ಹೆಚ್ಚೂಕಡಿಮೆ ಉಚಿತವಾಗಿ ದೊರಕಿದ ಈ ೪ಜಿ ಇಂಟರ್ ನೆಟ್ ಭಾರತದ ಮನರಂಜನಾ ಪ್ರಪಂಚದ ದಿಕ್ಕನ್ನು ಶಾಶ್ವತವಾಗಿ ಬದಲಾಯಿಸಿಬಿಟ್ಟಿತು. ಕುಟುಂಬವೆಲ್ಲ ಕೂತು ಸಂಜೆಯಿಂದ ರಾತ್ರಿಯವರೆಗೆ ಮನೆಯಲ್ಲಿ ಟೀವಿ ಧಾರಾವಾಹಿಗಳನ್ನು, ಸಿನಿಮಾಗಳನ್ನು ನೋಡುವ ಕಾಲ, ನಿಧಾನಕ್ಕೆ ಮಾಯವಾಗುತ್ತಿದೆ. ಯಾಕೆಂದರೀಗ ಅಪ್ಪ ಅಮ್ಮ ಮಗ ಮಗಳು, ಎಲ್ಲರ ಕೈಯಲ್ಲೂ ೪ಜಿ ಮೊಬೈಲು. ಪ್ರತೀ ಮೊಬೈಲುಗಳಲ್ಲೂ  ಹತ್ತಾರು ಅಪ್ಲಿಕೇಶನ್ನುಗಳು. ರಾತ್ರಿ ನೋಡಲಾಗದ ಸೀರಿಯಲ್ಲು ಅಲ್ಲೇ ಕೈಯಂಚಿನ ಮೊಬೈಲ್ ನಲ್ಲಿ ಈ ಕ್ಷಣ ಪ್ರತ್ಯಕ್ಷ. ಹೆಂಡತಿ ಸೀರಿಯಲ್ ನೋಡಿದರೆ ನೋಡಿಕೊಳ್ಳಲಿ, ಐಪಿಎಲ್ ಮ್ಯಾಚು ಕರತಲದಲ್ಲೇ ಕಾಣಿಸುತ್ತದೆ. 

ರಿಮೋಟ್  ಗಾಗಿ ಹೋರಾಟವಿಲ್ಲ, ಇಷ್ಟದ ಕಾರ್ಯಕ್ರಮಕ್ಕಾಗಿ ಕಾದಾಟವಿಲ್ಲ. ಗಂಡ ಹೆಂಡಿರಿಬ್ಬರೇ ಇರುವ ನ್ಯೂಕ್ಲಿಯರ್ ಕುಟುಂಬ ಕೂಡ ಮತ್ತೂ ವಿಭಜನೆಗೆ ಒಳಗಾಗಿ ಸೋಫಾದ ಒಂದೊಂದು ಮೂಲೆಗೆ ಸೇರಿ ಹೋಗಿವೆಮತ್ತು ತಮ್ತಮ್ಮ ಮೊಬೈಲು ಸ್ಕ್ರೀನುಗಳೊಳಗೆ ಕಣ್ಣು ಕೀಲಿಸಿವೆ. ಮೊಬೈಲ್ ಎಂಬ ತೀರದ ದಾಹದಲ್ಲಿರುವ ಬಳಕೆದಾರರ ಬಾಯಾರಿಕೆ ತಣಿಸಲೆಂದೇ, ಮನರಂಜನೆಯ ಕಂಟೆಂಟ್ ಸೃಷ್ಟಿ ಮಾಡುವ ದೊಡ್ಡದೊಂದು ಸಮೂಹವೇ ನಮ್ಮಲ್ಲಿ ತಯಾರಾಗಿ ಕುಳಿತಿದೆ. ಮುಂದೊಂದು ದಿನ ಭಾರತದಲ್ಲಿ ಇಂತಹ ನೆಟ್ ಕ್ರಾಂತಿ ಆಗುತ್ತದೆ ಎಂಬ ಅಂದಾಜಿದ್ದ ಕಂಪನಿಗಳು ಹಲವು.

ಅವರುಗಳ ದೂರದೃಷ್ಟಿ, ನಮ್ಮ ಮಾರುಕಟ್ಟೆಯನ್ನು ಮೊದಲೇ ಅಧ್ಯಯನ ಮಾಡಿತ್ತು ಕೂಡ. ಜಿಯೋ ಗುಲ್ಲೆಬ್ಬಿಸಿದ ಹೊತ್ತಲ್ಲೇ ನೆಟ್ ಫ್ಲಿಕ್ಸ್ ಭಾರತಕ್ಕೆ ಬಂತು, ಅದರ ಬೆನ್ನಿಗೇ ಹಾಟ್ ಸ್ಟಾರ್, ಅಮೇಜಾನ್ ಪ್ರೈಮ್ ಬಂದವು. ಈ ಆಪ್ ಗಳೀಗ ನಮ್ಮ ಮೊಬೈಲು ಗಳಲ್ಲಿ ವಿರಾಜಮಾನರಾಗಿ ಒಂದೆರಡು ವರುಷಗಳೇ ಕಳೆದಿವೆ. ಇವರಿಗೆ ಸೆಡ್ಡು ಹೊಡೆಯಲೆಂದೇ ನಮ್ಮ ನೆಲದ ಮಂದಿಯೂ ಎದ್ದು ನಿಂತಿದ್ದಾರೆ. 

ರಂಜನಾತ್ಮಕ ಆಪ್ ಅನ್ನು ಎಕ್ತಾಕಪೂರ್ ಹೊರ ತಂದಿದ್ದರೆ, ಎರೋಸ್ ನೌ ಸೇರಿದಂತೆ ಹಲ ಸಿನಿಮಾ ತಯಾರಿಕಾ ಕಂಪನಿಗಳು ಅಪ್ಲಿಕೇಶನ್ ತಂದಿವೆ, ಜಿಯೋ ಟೀವಿ, ಏರ್‌ಟೆಲ್ ಟಿವಿ, ಮೊದಲಾದ ಆಪ್‌ಗಳು ಶುರುವಾಗಿದೆ. ಪ್ರಾಯಶಃ ಹೆಚ್ಚಿನೆಲ್ಲ ಪ್ರಮುಖ ಮನರಂಜನಾ ಟಿವಿ ವಾಹಿನಿಗಳಂತೂ ತಮ್ಮ ಅಪ್ಲಿಕೇಶನ್ ಈಗಾಗಲೇ ಹೊರತಂದಿವೆ. ಕಲರ್ಸ್ ನ ವೂಟ್, ಝೀ ವಾಹಿನಿಯ ಝೀ 5, ಸನ್ ನೆಟ್ ವರ್ಕ್ ನ ಸನ್ ನೆಕ್ಸ್ಟ್, ಸ್ಟಾರ್ ಚಾನಲುಗಳ ಹಾಟ್ ಸ್ಟಾರ್, ಸೋನಿಯ ಸೋನಿಲೈವ್, ಹೀಗೆ ಎಲ್ಲ ಮನರಂಜನಾ ವಾಹಿನಿಗಳ ಧಾರಾವಾಹಿಗಳು, ಸಿನಿಮಾಗಳು ಮೊಬೈಲ್ ನಲ್ಲೇ ಲಭ್ಯ ಈಗ.

ಕನ್ನಡದ ಧಾರಾವಾಹಿಯೊಂದು ಅನಾಯಾಸವಾಗಿ ಮೊಬೈಲ್ ನಲ್ಲೇ ನೋಡಲು ಸಿಕ್ಕರೆ, ಅದೂ ಹೆಚ್ಚಿನ ಜಾಹೀರಾತುಗಳ ಕಿರಿಕಿರಿ ಇಲ್ಲದೇ- ಟಿವಿಯಲ್ಲಿ ನೋಡುವ ರಗಳೆ ಯಾಕೆ ಬೇಕು ಹೇಳಿ? ಇಷ್ಟವಾದ ಸಂಚಿಕೆಗಳ ಮರುವೀಕ್ಷಣೆ, ಸರಳವಾಗಿ ಇತರರೊಡನೆ ಹಂಚಿಕೊಳ್ಳುವ ಅವಕಾಶ, ಹೊಸ ಎಪಿಸೋಡು ಬಂದರೆ ಠಣ್ಣೆನ್ನುವ ನೋಟಿಫಿಕೇಷನ್ನು! ಇನ್ನೇನು ಬೇಕು? ಇಂತಹ ಎಲ್ಲ ಅಪ್ಲಿಕೇಶನ್ನುಗಳ ಡೌನ್ ಲೋಡ್ ಸಂಖ್ಯೆಯನ್ನು ಗಮನಿಸಿದಾಗ ದಿನೇ ದಿನೇ ಇವುಗಳ ಜನಪ್ರಿಯತೆ ಹೆಚ್ಚುತ್ತಿರುವುದಂತೂ ಸ್ಪಷ್ಟ.

ವಿದೇಶೀ ಸಿನಿಮಾಗಳು, ಸೀರಿಸ್ ಗಳಿಗಷ್ಟೇ ಸೀಮಿತವಾದ ಅಪ್ಲಿಕೇಶನ್ ಗಳಾಗಿದ್ದ ನೆಟ್ ಫ್ಲಿಕ್ಸ್, ಅಮೇಜಾನ್ ಕೂಡ ಈಗ ಇದೇ ಜಾಡು ಹಿಡಿದಿವೆ. ಭಾರತದ ಮಂದಿ ತಮ್ಮ ಮಣ್ಣಿನ ಇಲ್ಲಿನ ಕಥೆಗಳನ್ನೇ ಹೆಚ್ಚು ಇಷ್ಟ ಪಡುತ್ತಾರೆ ಎಂಬುದನ್ನು ಅರಿತುಕೊಂಡಿರುವ ಇವರುಗಳು ಈಗ ಇಲ್ಲಿನದೇ ಕಥೆಗಳನ್ನು ಧಾರಾವಾಹಿ, ಸಿನಿಮಾಗಳ ರೂಪದಲ್ಲಿ ನೇರವಾಗಿ ಮೊಬೈಲ್ ತೆರೆಗೆ ತರುತ್ತಿದ್ದಾರೆ. ’ಒರಿಜಿನಲ್ಸ್’ ಎಂದೇ ಪ್ರಸಿದ್ಧವಾಗಿರುವ ಈ ಮಾದರಿಯನ್ನು ನಮ್ಮ ಜನ ಇಷ್ಟಪಟ್ಟು ಸ್ವೀಕರಿಸುತ್ತಿದ್ದಾರೆ. ಶಾರುಕ್ ಖಾನ್, ನವಾಜುದ್ದೀನ್ ಸಿದ್ದಿಕಿ, ಸೈಫ್ ಅಲಿ ಖಾನ್, ವಿವೇಕ್ ಒಬೆರಾಯ್- ಇವರುಗಳೆಲ್ಲ ಈ ಕಿರುಸ್ಕ್ರೀನಲ್ಲಿ ಕಾಣಿಸಿಕೊಂಡಿದ್ದಾರೆ, ಕಾಣಿಸಿಕೊಳ್ಳುತ್ತಿದ್ದಾರೆ. 

ಹೆಚ್ಚಿನೆಲ್ಲ ಬಾಲಿವುಡ್ ನಟರು, ಅಷ್ಟೇಕೆ- ನಮ್ಮ ದಕ್ಷಿಣ ಭಾರತದ ನಟರುಗಳು ಕೂಡ ಒಂದಿಲ್ಲೊಂದು ಬಗೆಯಲ್ಲಿ ಈ ಮಾರುಕಟ್ಟೆಯ ಮೇಲೆ ತಮ್ಮ ಹಿಡಿತವನ್ನು ಹೊಂದಲು ಪ್ರಯತ್ನ ಮಾಡುತ್ತಿದ್ದಾರೆ. ಬಾಹುಬಲಿಯಂತ ಮಹೋನ್ನತ ಚಿತ್ರದಲ್ಲಿ ಅಭಿನಯಿಸಿ ಬಂದ ಕೂಡಲೇ ರಾಣಾ ದಗ್ಗುಬಾಟಿ ಮಾಡಿದ್ದು, ’ಸೋಶಿಯಲ್’ ಎಂಬ ವೆಬ್ ಸೀರೀಸ್! ಹಿರಿತೆರೆಯ ಅನೇಕ  ಕಲಾವಿದರು ಈಗಾಗಲೇ ಮೊಬೈಲ್ ಮನರಂಜನೆಯ ಕಡೆಗೆ ಹೈಜಂಪ್ ಮಾಡಿದ್ದು, ಮುಂಬರುವ ದಿನಗಳಲ್ಲಿ ಇವರೆಲ್ಲ ಸಿನಿಮಾಗಳಿಗಿಂತ ಜಾಸ್ತಿ ಈ ಜಗತ್ತಿನಲ್ಲೇ ಕಾಣಿಸಿಕೊಂಡರೂ ಆಶ್ಚರ್ಯವಿಲ್ಲ. ಏಕೆಂದರೆ ನಮ್ಮ ದೇಶದಲ್ಲಿ ಮೊಬೈಲ್ ಬಳಕೆ  ಶರವೇಗದಲ್ಲಿ ಹೆಚ್ಚುತ್ತಿದ್ದು, ಭವಿಷ್ಯದ ರಂಜನೆಯ ಜಾಗ ಇದೇ ಅಂಗೈ ಅಗಲದ ಅರಮನೆಯಲ್ಲಿದೆ! 

 ಓವರ್ ದಿ ಟಾಪ್ ಎಂದು ಕರೆಯಲ್ಪಡುವ ಈ ತರಹದ ಆಪ್‌ಗಳಿಗಾಗಿ ರಂಜನಾತ್ಮಕ ಕಂಟೆಂಟ್ ಸಿದ್ದಪಡಿಸಲು ಹೊರಟಿರುವ ಹೊಸ ಬಳಗವೇ ಕಣ್ಣೆದುರಿಗೆ ಇದೆ. ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ವೆಬ್ ಸೀರೀಸ್ ಮಾಡಲು ದಂಡೇ ಸಜ್ಜಾಗಿದೆ. ಬೇರೆ ಭಾಷೆಗಳಿಗೆ ಸೇರಿದರೆ ಕನ್ನಡದಲ್ಲಿ ಪ್ರಯತ್ನಗಳಿನ್ನೂ ಜೋರಾಗಿಲ್ಲ. ಅಲ್ಲೊಂದು ಇಲ್ಲೊಂದು ವೆಬ್ ಸೀರೀಸ್ ಗಳು ಯೂಟ್ಯೂಬ್ ನಲ್ಲಿವೆಯಷ್ಟೇ.’ಲೂಸ್ ಕನೆಕ್ಷನ್’ ಎಂಬ ಸೀರೀಸ್ ಕೊಂಚ ಸದ್ದು ಮಾಡಿದ್ದು ಬಿಟ್ಟರೆ, ಇನ್ನು ಮೇಲಷ್ಟೇ ಈ ಯತ್ನಗಳು ತೆರೆಗಾಣಬೇಕಿವೆ. ಜಾಹೀರಾತು ಕ್ಷೇತ್ರ ಕೂಡ ಈಗ ಟೀವಿಯಿಂದಾಚೆಗೆ ಯೋಚನೆ ಮಾಡಲು ಆರಂಭಿಸಿದ್ದು ತಮ್ಮ ಬಂಡವಾಳದ ಬಹುಪಾಲನ್ನು ಅಂತರ್ಜಾಲಕ್ಕೆ-ಮೊಬೈಲ್ ಅಪ್ಲಿಕೇಶನ್ ಗಳಿಗೆ ಮೀಸಲಿಟ್ಟಿವೆ. 

ಇನ್ನು ಕೇವಲ ಎರಡೇ ವರುಷಗಳಲ್ಲಿ ನಮ್ಮ ದೇಶದಲ್ಲಿ ಸುಮಾರು ಐವತ್ತು ಕೋಟಿ ಮಂದಿ ಮೊಬೈಲ್‌ನಲ್ಲಿ ಇಂಟರ್ ನೆಟ್ ಬಳಕೆದಾರರಾಗಿರು ತ್ತಾರೆ ಎಂದು ಸರ್ವೇಯೊಂದು ಹೇಳುತ್ತದೆ. ಎಂದರೆ, ದೇಶದ ಸುಮಾರು ನಲವತ್ತು ಶೇಕಡಾ ಮಂದಿ, ಅಂತರ್ಜಾಲದ ನೇರ ಸಂಪರ್ಕ ಹೊಂದಿರುತ್ತಾರೆ. ಊರಿಗೆ ಬಂದ ಮೇಲೆ ನೀರಿಗೆ ಬರಲೇಬೇಕು ಎಂಬ ಪುರಾತನ ಗಾದೆಯನ್ವಯ-ಇವರೆಲ್ಲರೂ ಕೂಡ ಮೊಬೈಲ್ ಮಾಯಾಜಾಲದ ಪ್ರಮುಖ ಅಂಗವಾದ ವೀಡಿಯೋ ಸ್ಟ್ರೀಮಿಂಗ್ ಸೌಲಭ್ಯವನ್ನು ಬಳಸಲು ಆರಂಭಿಸುತ್ತಾರೆ. ದಿಲ್ಲಿಯಿಂದ ಹಳ್ಳಿಯವರೆಗೆ ಈಗಾಗಲೇ ವ್ಯಾಪಿಸಿರುವ ಈ ಹವ್ಯಾಸವು ಆಳಕ್ಕೆ ತನ್ನ ಬೇರುಗಳನ್ನು ಇಳಿಸಿ, ಇನ್ನೂ ಸುಭದ್ರಗೊಳ್ಳಲಿದೆ.

ಹೀಗೇ ಮುಂದುವರಿದರೆ, ಸರಿಸುಮಾರು ಮುಂದಿನ ದಶಕದ ಮಧ್ಯಭಾಗದಲ್ಲಿ ಟಿವಿ ವೀಕ್ಷಣೆಯನ್ನೂ ಮೀರಿ ಡಿಜಿಟಲ್ ಜಗತ್ತು ತನ್ನ ಪಾರಮ್ಯವನ್ನು ಮೆರೆ ಯಲಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಇಂದು ಮನರಂಜನೆಗೆ ಯಾವುದೇ ಪರದೆಯ ಹಂಗಿಲ್ಲ. ದೊಡ್ಡ ಥಿಯೇಟರಿನಲ್ಲಿ ನೋಡಿದರೂ, ಮೊಬೈಲ್ ಪರದೆಯಲ್ಲಿ ನೋಡಿದರೂ, ಕೊನೆಗೆ ಮನದಲ್ಲಿ ಉಳಿಯುವುದು ಅಭಿನಯ, ಕಥೆ ಮಾತ್ರ. 

ಇದನ್ನೇ ಮನಗಂಡಿರುವ ನೆಟ್ ಫಿಕ್ಸ್ ತರದ ಅಪ್ಲಿಕೇಶನ್ ಹೊಸ ಚಿತ್ರಗಳನ್ನು ಇದಕ್ಕಾಗಿಯೇ ನಿರ್ಮಿಸುತ್ತಿದ್ದಾರೆ. ಯಾವುದೇ ಮಾಲು, ಥಿಯೇಟರುಗಳನ ಹಂಗಿಲ್ಲದೇ ನೇರವಾಗಿ ನಮ್ಮ ಮೊಬೈಲ್‌ಗೇ ರಿಲೀಸ್ ಆಗುವ ಚಿತ್ರಗಳನ್ನು ನೋಡದೇ ಇರಲು ಯಾವ ಕಾರಣವೂ ಇಲ್ಲ. ಅಷ್ಟೇ ಅಲ್ಲದೇ, ಇತ್ತೀಚಿಗೆ ಗಮನಿಸಿದಂತೆ- ಈಗ ತಾನೇ ಬಿಡುಗಡೆಗೊಂಡ ಚಿತ್ರಗಳು ಕೂಡ ಒಂದು-ಎರಡು ತಿಂಗಳ ಅಂತರದಲ್ಲಿ ನೆಟ್ ಫಿಕ್ಸಲ್ಲೋ, ಅಮೇಜಾನ್ ಪ್ರೈಮ್ ನಲ್ಲೋ ಲಭ್ಯವಾಗಿರುತ್ತವೆ ಬೇರೆ. ಹೆಚ್ಚಿನ ದುಡ್ಡು ಪಾವತಿಸದೇ, ತಿಂಗಳ ಚಂದಾ ದುಡ್ಡಲ್ಲಿ ನೂತನ ಸಿನಿಮಾಗಳನ್ನು ನೋಡುವ ಭಾಗ್ಯವನ್ನು ಬಿಟ್ಟುಕೊಳ್ಳುವರುಂಟೇ?

ಹೀಗೆ, ಮೇಲಿಂದ ಮೇಲೆ ಲಭ್ಯವಾಗುತ್ತಿರುವ ಬಗೆಬಗೆಯ ಮನರಂಜನೆಯ ಸರಕು, ಇಂಟರ್ ನೆಟ್ ಡಾಟಾದ ಕಡಿಮೆ ಬೆಲೆ, ಉತ್ತಮ ಸಿಗ್ನಲ್ ವ್ಯವಸ್ಥೆ ಒಟ್ಟಾರೆ ಮಾರುಕಟ್ಟೆಯ ಚಿತ್ರಣವನ್ನೇ ಬದಲಾಯಿಸು ತ್ತಿದೆ. ನೀವು ಈ ಬರಹವನ್ನು ಓದುವ ಹೊತ್ತಿಗೆ ನೂರಾರು ಗಂಟೆಗಳ ಹೊಸ ಸರಕು ಸಿದ್ಧವಾಗಿ ಮೊಬೈ ಲಿನೊಳಕ್ಕೆ ಬಂದು, ನಿಮ್ಮ ಬೆರಳತುದಿಯು ತನ್ನನ್ನು ಮುಟ್ಟುವುದನ್ನೇ ಕಾಯುತ್ತಿದೆ! ಇನ್ನೊಂದು ನೂರು ಮಂದಿ ಹೊಸ ಸಿಮ್ ಕಾರ್ಡನ್ನು ಮೊಬೈಲಿಗೆ ತೂರಿ ಸುತ್ತ ಅಗಾಧ ವೈಶಾಲ್ಯತೆಯ ಜಾಲ ಪ್ರಪಂಚದ ಹೊಸ್ತಿಲಲ್ಲಿ ನಿಂತಿದ್ದಾರೆ. ಬನ್ನಿ, ಒಳಗೆ ಬನ್ನಿ. ಒಮ್ಮೆ  ಒಳಗೆ ಬಂದ ಮೇಲೆ ಹೊರ ಹೋಗುವ ದಾರಿ ಕಾಣಿಸುವುದಿಲ್ಲ. ಕಂಡರೂ ನಿಮಗದು ಬೇಕಿರುವುದಿಲ್ಲ!