ಉಡುಪಿ : ಉಡುಪಿಯ ಮಧ್ವ ಸಂಪ್ರದಾಯದ ಮಡಿವಂತಿಕೆಗಳೆಲ್ಲಾ ಶಿರೂರು ಶ್ರೀಗಳಿಗೆ ಹಿಡಿಸುತ್ತಿರಲಿಲ್ಲ. ಇತರ ಮಠಾಧೀಶರು ತಮ್ಮ ಸುತ್ತ ಮಧ್ವ ಮತದ ವಿದ್ವಾಂಸರನ್ನು, ಗಣ್ಯರನ್ನು ಇಟ್ಟುಕೊಂಡಿದ್ದರೆ, ಶಿರೂರು ಸ್ವಾಮೀಜಿಯವರ ಸುತ್ತ ಇತರ ಸಮುದಾಯದ ಸಾಮಾನ್ಯ ಜನರಿರುತ್ತಿ೦ ದ್ದರು. ಆದ್ದರಿಂದ ಅವರನ್ನು ಜನರ ಸ್ವಾಮೀಜಿ ಎಂದೇ ಕರೆಯಲಾಗುತ್ತಿತ್ತು. ಇನ್ನು ಮಧ್ವಯತಿಗಳಿಗೆ ಕಡ್ಡಾಯವಾದ ಚಾತುರ್ಮಾಸ ವ್ರತ, ಪಾಠ - ಪ್ರವಚನ ಇತ್ಯಾದಿಗಳಿಂದ ಸ್ವಾಮೀಜಿ ದೂರ ಇದ್ದರು. ಆದರೆ ಕೃಷ್ಣವನ್ನು ವಿಧವಿಧವಾಗಿ ಅಲಂಕರಿಸಿ ಪೂಜಿಸುವುದರಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿದ್ದರು. ತಮ್ಮ ಪರ್ಯಾಯದ 2 ವರ್ಷಗಳ ಅವಧಿಯಲ್ಲಿ ಪ್ರತಿದಿನ ಒಂದೊಂದು ಅಲಂಕಾರದಲ್ಲಿ ಕೃಷ್ಣನನ್ನು ಪೂಜಿಸಿ ಪ್ರತಿಯೊಂದರ ಫೋಟೋಗಳನ್ನು ತೆಗೆಸುತ್ತಿದ್ದರು. ಅವುಗಳ ಪುಸ್ತಕವೊಂದನ್ನೂ ಹೊರತಂದಿದ್ದರು.


ಪಟ್ಟ ದೇವರ ವಿವಾದ : ರೆಬೆಲ್ ಸ್ವಾಮೀಜಿಯಾಗಿದ್ದ ಶಿರೂರು ಶ್ರೀಗಳಿಗೆ ತನ್ನ ಮಠದ ಪಟ್ಟದ ದೇವರನ್ನು ವಾಪಸ್ ನೀಡದ ಕೊರಗು ಕೊನೆಯವರೆಗೂ ಬಲವಾಗಿ ಕಾಡಿತ್ತು. ವಿಧಾನಸಭಾ ಚುನಾವಣೆ ಸಂದರ್ಭ ಅನಾರೋಗ್ಯದಿಂದ ಬಳಲುತ್ತಿದ್ದ ಶಿರೂರು ಶ್ರೀಗಳು ತಮ್ಮ ಪಟ್ಟದ ದೇವರನ್ನು ನಿತ್ಯಪೂಜೆಗಾಗಿ ಕೃಷ್ಣ ಮಠಕ್ಕೆ ಒಪ್ಪಿಸಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಪಟ್ಟದ ದೇವರನ್ನು ವಾಪಸ್ ನೀಡುವಂತೆ ಕೇಳಿದ್ದರು. ಇತರ 6 ಮಠಾಧೀಶರು ಸೇರಿ, ಶಿರೂರು ಸ್ವಾಮೀಜಿ ಸನ್ಯಾಸ ಪಾಲಿಸುತ್ತಿಲ್ಲ. ಉತ್ತರಾಧಿಕಾರಿ ಯನ್ನು ನೇಮಕ ಮಾಡಿಕೊಳ್ಳದಿದ್ದರೆ ಪಟ್ಟದ ದೇವರನ್ನು ನೀಡಲು ಸಾಧ್ಯವಿಲ್ಲ ಎಂದು ಷರತ್ತು ಮುಂದಿಟ್ಟಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಶಿರೂರು ಸ್ವಾಮೀಜಿ, ತಮ್ಮ ಹಕ್ಕಿನ ದೇವರ ವಿಗ್ರಹ ಮರಳಿ ಪಡೆಯಲು ನ್ಯಾಯಾಲ ಯದ ಮೊರೆ ಹೋಗಿದ್ದರು.

ಚುನಾವಣೆ : ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಬೆಂಬಲ ನೀಡುವುದಾಗಿ ಶ್ರೀಗಳು ಘೋಷಿಸಿದ್ದರು. ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ, ಬಿಜೆಪಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯ  ವಿರುದ್ಧವೇ ನಾಮಪತ್ರ ಸಲ್ಲಿಸಿದ್ದರು. ಕೊನೆಗೆ ಅದು ವಿವಾದಕ್ಕೆ ಕಾರಣವಾಗಿ, ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದರು.  

ಶ್ವಾನಪ್ರೀತಿ: ನಾಯಿಯನ್ನು ಸಾಕುವುದು ಸ್ವಾಮೀಜಿ ಅವರಿಗೆ ನಿಷಿದ್ಧವಾಗಿದ್ದರೂ, ಶಿರೂರು ಶ್ರೀಗಳು ಎರಡೆರಡು ವಿದೇಶಿ ತಳಿಯ ನಾಯಿಗಳನ್ನು ಸಾಕಿದ್ದರು. ತಮ್ಮ ಮೂಲಮಠದಲ್ಲಿ ಮೊಲಗಳಿಗೆ ಗೂಡು ಕಟ್ಟಿ, ಕೆಲಸದಾಳನ್ನು ನೇಮಿಸಿ ಸಾಕಿದ್ದರು. ಕೆಲವು ವರ್ಷಗಳ ಹಿಂದೆ ಉಡುಪಿಯ ಮಠದಲ್ಲಿ ಜಿಂಕೆಯನ್ನು, ಹೆಬ್ಬಾವನ್ನು ಸಾಕಿದ್ದರು. ನಂತರ ವನ್ಯಜೀವಿ ಇಲಾಖೆಯ ದಾಳಿಯ ನಂತರ ಅವುಗಳನ್ನು ಅವರೇ ಕಾಡಿಗೆ ಬಿಟ್ಟು ಬಂದಿದ್ದರು.


ಮಕ್ಕಳ ಹೇಳಿಕೆ : ಸ್ವಾಮೀಜಿಗಳಿಗೆ ಬಾಲ್ಯದಲ್ಲೇ ಸನ್ಯಾಸ ದೀಕ್ಷೆ ನೀಡುತ್ತಾರೆ. ಇದರಿಂದಾಗಿ, ಅವರು ಬೆಳೆದು ಯುವಕರಾದ ಮೇಲೆ ಅವರ ದೈಹಿಕ ಸಹಜ ಆಸೆಗಳನ್ನು ಅವರಿಗೆ ಅದುಮಿಟ್ಟುಕೊಳ್ಳಲಾಗುವುದಿಲ್ಲ, ನನಗೂ ಹಾಗೆಯೇ ಆಗಿರುವುದು ಎಂದು ಶಿರೂರು ಶ್ರೀಗಳು ಹೇಳಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗವಾಗಿ ತೀವ್ರ ವಿವಾದ ಸೃಷ್ಟಿ ಯಾಗಿತ್ತು. ಈ ದೃಶ್ಯದಲ್ಲಿ, ಉಡುಪಿಯ ಯಾವ ಮಠಾಧೀಶರೂ ಸನ್ಯಾಸಿಗಳಲ್ಲ. ಅವರಿಗೆಲ್ಲ ಮಕ್ಕಳಿದ್ದಾರೆ. ಸಂಸಾರವೂ ಇದೆ ಎಂಬ ಹೇಳಿಕೆ ಬಹಿರಂಗ ಚರ್ಚೆಗೆ ಕಾರಣವಾಗಿತ್ತು. ಈ ಆರೋಪ ಉಡುಪಿ ಯ ಇತರ ಮಠಗಳ ಮಠಾಧೀಶರಿಗೆ ತೀವ್ರ ಮುಜುಗರ, ಅವಮಾನವನ್ನು ಉಂಟು ಮಾಡಿತ್ತು. ಇದಾದ ಬಳಿಕ ಇತರ ಮಠಾಧೀಶರು ಶಿರೂರು ಶ್ರೀಗಳ ವಿರುದ್ಧ ಸಭೆ ಸೇರಿ, ಅವರ ಆರಾಧ್ಯ ದೇವರನ್ನು ಪೂಜೆಗೆ ಮರಳಿಸದೆ ಇರಲು ನಿರ್ಧರಿಸಿದ್ದರು.