ಕಾಶ್ಮೀರದಲ್ಲಿ ಉಗ್ರರಿಗೆ ಬೆಂಬಲ ನಿಲ್ಲಿಸಿದರೆ ಮಾತ್ರ ಪಾಕ್'ನೊಂದಿಗೆ ಮಾತುಕತೆ
ಪಾಕಿಸ್ತಾನ ಕಡ್ಡಾಯವಾಗಿ ಭಯೋತ್ಪಾದನಾ ಚಟುವಟಿಕೆಯನ್ನು ನಿಲ್ಲಿಸಬೇಕು. ಆನಂತರ ಮಾತ್ರ ಶಾಂತಿ ಮಾತುಕತೆ ನಡೆಸುತ್ತೇವೆ.
ಜೈಪುರ(ಡಿ.22): ಪಾಕ್ ನಿಜವಾಗಲು ಭಾರತದ ಜೊತೆ ಮಾತುಕತೆ ಬಯಸುವುದಾದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು. ಹಾಗಾದಾಗ ಮಾತ್ರ ನೆರೆಯ ರಾಷ್ಟ್ರದೊಂದಿಗೆ ಶಾಂತಿ ಮಾತುಕತೆಗೆ ಮುಂದಾಗುತ್ತೇವೆ ಎಂದು ಭಾರತದ ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸ್ಪಷ್ಟ ಸೂಚನೆ ನೀಡಿದ್ದಾರೆ.
ಭಾತರ ಪಾಕ್ ಗಡಿಯ ಪಶ್ಚಿಮ ವಿಭಾಗದಲ್ಲಿ ನಡೆಯುತ್ತಿರುವ ಹಮೇಶಾ ವಿಜಯೇ ಸಮರಾಭ್ಯಾಸದಲ್ಲಿ ಪಾಲ್ಗೊಂಡ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪಾಕಿಸ್ತಾನ ಕಡ್ಡಾಯವಾಗಿ ಭಯೋತ್ಪಾದನಾ ಚಟುವಟಿಕೆಯನ್ನು ನಿಲ್ಲಿಸಬೇಕು. ಆನಂತರ ಮಾತ್ರ ಶಾಂತಿ ಮಾತುಕತೆ ನಡೆಸುತ್ತೇವೆ.
ನಾವು ನೆರೆಯ ದೇಶದೊಂದಿಗೆ ಉತ್ತಮ ಬಾಂಧವ್ಯ ಬಯಸುತ್ತೇವೆ. ಆದರೆ ಜಮ್ಮ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ರೀತಿಯ ಚಟುವಟಿಕೆಗಳನ್ನು ನಿಲ್ಲಿಸಬೇಕು.ಇಲ್ಲದಿದ್ದರೆ ಯಾವುದೇ ಪ್ರಯೋಜನವಾಗುವುದಿಲ್ಲ' ಎಂದು ತಿಳಿಸಿದರು.
ಪಾಕ್ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ ಅವರು ಭಾರತದ ಜೊತೆ ಉತ್ತಮ ಸಂಬಂಧ ಹೊಂದುವ ಆಸಕ್ತಿಯಿರುವುದಾಗಿ ಕೆಲ ದಿನಗಳ ಹಿಂದಷ್ಟೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರಾದ ರವೀಶ್ ಕುಮಾರ್ ಪಾಕ್ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿಲ್ಲಿಸಿದರೆ ಮಾತ್ರ ಮಾತುಕತೆ ಸಾಧ್ಯ' ಎಂದು ಸ್ಪಷ್ಟ ಸೂಚನೆ ನೀಡಿದ್ದರು. ಈ ಸಂದರ್ಭದಲ್ಲಿ ರಾವತ್ ಅವರ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ.