ಯಡಿಯೂರಪ್ಪ ಸದಾನಂದಗೌಡರಾದಿಯಾಗಿ ರಾಜ್ಯದ ನಾಯಕರು ಪ್ರಧಾನಿ ಎದುರು ಹೋಗಿ ಮಾತನಾಡಲು ಕೂಡ ಹಿಂಜರಿಯುತ್ತಿದ್ದ ಸಂದರ್ಭದಲ್ಲಿ ನೇರವಾಗಿ ಮೋದಿ ಮತ್ತು ಅಮಿತ್‌ ಶಾ ಬಳಿಗೆ ಹೋದ ಅನಂತ್‌ ಕುಮಾರ್‌....
ದಿಲ್ಲಿ ಮಾತು | ಪ್ರಶಾಂತ್ ನಾತು
ಕಾವೇರಿ ವಿಷಯದಲ್ಲಿ ಎಲ್ಲವೂ ರಾಜ್ಯದ ವಿರುದ್ಧವಾಗಿಯೇ ಹೋಗುತ್ತಿದ್ದಾಗ ಕೇಂದ್ರ ಸರ್ಕಾರ ತನ್ನ ನೀತಿಯಲ್ಲಿ ಸ್ವಲ್ಪ ಸಡಿಲಿಕೆ ತೋರಿಸಿ ಕರ್ನಾಟಕದ ಕಡೆಗೆ ದೃಷ್ಟಿಹರಿಸಲು ಕಾರಣವೂ ಇದೆ. ಕೇಂದ್ರ ಸರ್ಕಾರವನ್ನು ಕರ್ನಾಟಕದ ಪರವಾಗಿ ಗಟ್ಟಿಯಾಗಿ ನಿಲ್ಲುವಂತೆ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಕೇಂದ್ರ ಸಚಿವ ಅನಂತ್ ಕುಮಾರ್ ನಡೆಸಿದ ಮನವೊಲಿಕೆ ಯಶಸ್ವಿಯಾಗಿದ್ದೇ ಕಾರಣ. ಯಡಿಯೂರಪ್ಪ ಸದಾನಂದಗೌಡರಾದಿಯಾಗಿ ರಾಜ್ಯದ ನಾಯಕರು ಪ್ರಧಾನಿ ಎದುರು ಹೋಗಿ ಮಾತನಾಡಲು ಕೂಡ ಹಿಂಜರಿಯುತ್ತಿದ್ದ ಸಂದರ್ಭದಲ್ಲಿ ನೇರವಾಗಿ ಮೋದಿ ಮತ್ತು ಅಮಿತ್ ಶಾ ಬಳಿಗೆ ಹೋದ ಅನಂತ್ ಕುಮಾರ್ ‘ಅಧಿಕಾರ ಅನಾಯಾಸವಾಗಿ ಬರುವ ರಾಜ್ಯವನ್ನು ಕಳೆದುಕೊಳ್ಳುವುದು ಬೇಡ' ಎಂಬ ರಾಜಕೀಯ ಮಂತ್ರ ಮುಂದಿಟ್ಟು ಮನವೊಲಿಸಿದ ನಂತರವೇ ಮೋದಿಯವರು ಅಟಾರ್ನಿ ಜನರಲ್ ಅವರಿಗೆ ನಿರ್ವಹಣಾ ಮಂಡಳಿ ರಚನೆ ವಿರುದ್ಧ ಅರ್ಜಿ ಹಾಕಲು ಹಸಿರು ನಿಶಾನೆ ಕೊಟ್ಟರಂತೆ. ಇನ್ನು ಮಹದಾಯಿ ವಿಷಯದಲ್ಲಿಯೂ ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಬಳಿ ಕೋಯಿಕ್ಕೋಡ್'ನಲ್ಲಿ ಮಾತುಕತೆ ನಡೆಸಿ ವೇದಿಕೆ ಸಿದ್ಧಪಡಿಸಿದ್ದು ಅನಂತ್ ಕುಮಾರ್ ಅವರೇ ಎನ್ನುತ್ತಿವೆ ಬಿಜೆಪಿ ಮೂಲಗಳು.
ಪತ್ರಕರ್ತರ ಕಾದಾಟ
ಸುಪ್ರೀಂ ಕೋರ್ಟ್ನಲ್ಲಿ ಕಾವೇರಿ ತೀರ್ಪುಗಳು ಬರುತ್ತಿದ್ದಾಗ ಹೊರಗೆ ಕಾದಿದ್ದ ಮಾಧ್ಯಮದವರು ವಕೀಲರಿಗೆ ಪುಕ್ಕಟೆ ಮನೋರಂಜನೆ ಒದಗಿಸಿದ್ದರು. ಕನ್ನಡದ ಒಬ್ಬ ಯುವ ಪತ್ರಕರ್ತ ಮತ್ತು ಹಿರಿಯ ಛಾಯಾಗ್ರಾಹಕರೊಬ್ಬರ ನಡುವೆ ನಡೆದ ಮಾರಾಮಾರಿ ನ್ಯಾಯಾಲಯದ ಆವರಣದಲ್ಲಿ ಇದ್ದವರಿಗೆ ಮನರಂಜನೆ ಒದಗಿಸಿತ್ತು. ಸಚಿವರಾದ ಎಂ ಬಿ ಪಾಟೀಲ ಅವರ ಬೈಟ್ ತೆಗೆದುಕೊಳ್ಳುವಾಗ ಆರಂಭವಾದ ಇವರಿಬ್ಬರ ನಡುವಿನ ಮಾತಿನ ಚಕಮಕಿ ನೋಡನೋಡುತ್ತಲೇ ಕೈ ಮಿಲಾಯಿಸುವವರೆಗೆ ಹೋಗಿತ್ತು. ಕೈಯಲ್ಲಿ ಕ್ಯಾಮೆರಾ ಹಿಡಿದುಕೊಂಡೆ ಜಗಳವಾಡುತ್ತಿದ್ದ ಇಬ್ಬರ ಕುರುಕ್ಷೇತ್ರವನ್ನು ಅಲ್ಲಿದ್ದ ವಕೀಲರು ತಮ್ಮ ಮೊಬೈಲ…ಗಳಲ್ಲಿ ಸೆರೆ ಹಿಡಿದು ಮಜಾ ತೆಗೆದುಕೊಳ್ಳುತ್ತಿದ್ದರು.
ಜಯಚಂದ್ರ ನಿರಾಸಕ್ತಿ
ಕಾವೇರಿ ವಿಷಯದಲ್ಲಿ ದೆಹಲಿಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಇಷ್ಟೆಲ್ಲಾ ನಡೆದು ಹೋದರೂ ಕೂಡ ರಾಜ್ಯದ ಕಾನೂನು ಸಚಿವ ಟಿ ಬಿ ಜಯಚಂದ್ರ ಅವರ ನಿರಾಸಕ್ತಿ ಮಾತ್ರ ಎದ್ದು ಕಾಣುತ್ತಿತ್ತು. ಸಚಿವ ಎಂ ಬಿ ಪಾಟೀಲ ದೆಹಲಿಯಲ್ಲಿಯೇ ಠಿಕಾಣಿ ಹೂಡಿ ವಕೀಲರೊಂದಿಗೆ ಮಾತುಕತೆ ನಡೆಸುತ್ತಿದ್ದಾಗ ಜಯಚಂದ್ರ ಮಾತ್ರ ಕಾಟಾಚಾರಕ್ಕೆ ದೆಹಲಿಗೆ ಬಂದು ಹೋಗುತ್ತಿದ್ದರು. ಇತ್ತೀಚೆಗೆ ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕವಾಗಿಯೇ ಮಾಜಿ ಪ್ರಧಾನಿ ದೇವೇಗೌಡರು ಜಯಚಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಾಗ ಓಡೋಡಿ ದೆಹಲಿಗೆ ಬಂದ ಜಯಚಂದ್ರ ಕ್ಯಾಮೆರಾ ಕಣ್ಣಮುಂದೆ ಕಾಣಿಸಿಕೊಂಡರಾದರೂ ತೆರೆಯ ಹಿಂದೆ ಮಾಡಬೇಕಾದ ಕೆಲಸ ಮಾಡುವ ಬಗ್ಗೆ ಮಾತ್ರ ಯಾವುದೇ ಉತ್ಸುಕತೆ ತೋರಿಸಿಲ್ಲ.
ಬಿಲ್ ಪೆಂಡಿಂಗ್
ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ನಾಲ್ಕನೇ ಸ್ಥಾನಕ್ಕೇ ತೃಪ್ತಿಪಡುತ್ತಿದೆ. ಆದರೆ ಈ ಸ್ಥಿತಿಯನ್ನು ಸುಧಾರಿಸಲು ಈ ಬಾರಿ ಪಕ್ಷದ ಪರವಾಗಿ ಹೆಣಗಾಡುತ್ತಿರುವ ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಅವರು ನೀಡಿರುವ ಖರ್ಚಿನ ಬಿಲ್'ಗಳನ್ನೂ ಕಾಂಗ್ರೆಸ್ ಖಜಾಂಚಿ ಮೋತಿಲಾಲ್ ವೋರಾ ತಡೆ ಹಿಡಿದಿದ್ದಾರೆ ಎಂದು ಸುದ್ದಿಯಾಗಿದೆ. ಕಾರ್ಯಕರ್ತರಿಗೆ ಪೂರಿ ಭಾಜಿ ತಿನ್ನಿಸುವ ಬದಲಿಗೆ ಪ್ರಶಾಂತ ಕಿಶೋರ್ ಸ್ಟಾರ್ ಹೋಟೆಲ…ಗಳಲ್ಲಿ ಸಭೆ ನಡೆಸಿ ಊಟ ಹಾಕಿಸುತ್ತಾರೆ ಎನ್ನುವುದೇ ವೋರಾ ಆಕ್ರೋಶಕ್ಕೆ ಕಾರಣ. ಹೀಗೆ ವೃಥಾ ಖರ್ಚು ಮಾಡಲು ಪಕ್ಷದ ಖಜಾನೆಯಲ್ಲಿ ಹಣವಿಲ್ಲ ಎಂದು ಮೋತಿಲಾಲ್ ವೋರಾ ತಗಾದೆ ತೆಗೆದಿದ್ದಾರೆ ಎಂದು ಸುದ್ದಿ. ಈಗ ಮೋತಿಲಾಲ್ ವೋರಾ ಜಿಪುಣತನದ ವಿರುದ್ಧ ಪ್ರಶಾಂತ್ ಕಿಶೋರ್ ಅವರು ರಾಹುಲ್ ಗಾಂಧಿ ಬಳಿ ದೂರು ತೆಗೆದುಕೊಂಡು ಹೋಗಿದ್ದಾರಂತೆ.
ಹೊಸ ತಂಡ ವಿಳಂಬ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಎರಡನೇ ಬಾರಿ ಅಮಿತ್ ಶಾ ಆಯ್ಕೆಯಾಗಿ ಬಹಳ ಸಮಯವಾಗಿದ್ದರೂ ಈವರೆಗೆ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ನೇಮಕ ಆಗಿಲ್ಲ. ಹಳೆಯ ಪ್ರಧಾನ ಕಾರ್ಯದರ್ಶಿಗಳೇ ಈಗಲೂ ಮುಂದುವರಿದಿದ್ದು ಮಂತ್ರಿ ಸ್ಥಾನ ಸಿಗದೇ ಇರುವ ಸಂಸದರು ಹೊಸ ತಂಡದ ನೇಮಕಕ್ಕೆ ಕಾಯುತ್ತಿದ್ದಾರೆ. ಆದರೆ ಯಾವಾಗ ಹೊಸ ತಂಡ ಪ್ರಕಟಿಸುತ್ತೀರಿ ಎಂದು ಅಮಿತ್ ಶಾರನ್ನು ನೇರವಾಗಿ ಕೇಳುವ ಧೈರ್ಯ ಮಾತ್ರ ಯಾವುದೇ ನಾಯಕರಿಗಿಲ್ಲ. ಈ ನಡುವೆ ಕರ್ನಾಟಕ ಕೋಟಾದಿಂದ ಪದಾಧಿಕಾರಿಯಾಗಲು ರಾಜ್ಯದ ಸಂಸದ ಪ್ರಹ್ಲಾದ್ ಜೋಶಿ ಹರಸಾಹಸ ಪಡುತ್ತಿದ್ದಾರೆ.
ಅಪ್ಪನ ತಲೆನೋವು
ಪಂಜಾಬ್ ಮುಖ್ಯಮಂತ್ರಿಯಾಗಿರುವ 85 ವರ್ಷದ ಪ್ರಕಾಶ್ ಸಿಂಗ್ ಬಾದಲ… ದಿನವೂ ಬೆಳಗಿನ ಜಾವ 4 ಗಂಟೆಗೆ ಎದ್ದು 6 ಗಂಟೆಗೆಲ್ಲ ಕಾರ್ಯಕರ್ತರನ್ನು ಭೇಟಿಯಾಗಲು ತಯಾರಾಗಿ ಕುಳಿತಿರುತ್ತಾರೆ. ಆದರೆ ಅವರ ಪುತ್ರ ಉಪ ಮುಖ್ಯಮಂತ್ರಿ ಸುಖಬೀರ್ ಮಾತ್ರ 9 ಗಂಟೆಯಾದರೂ ಸಾರ್ವಜನಿಕರ ಭೇಟಿಗೆ ತಯಾರಾಗುವುದಿಲ್ಲ ಎಂಬುದೇ ಅಪ್ಪನಿಗೆ ತಲೆನೋವು. ಬೆಳಗಿನ 6 ಗಂಟೆಯಿಂದಲೇ ಪ್ರಕಾಶ್ ಸಿಂಗ್ ಬಾದಲ್ ಕುಕ್ಕಿ (ಪುತ್ರನ ನಿಕ್ ನೇಮ್) ಎದ್ದನಾ ಎಂದು ಕೇಳುತ್ತಾ ತಿರುಗುತ್ತಿರುತ್ತಾರೆ. ಚುನಾವಣೆ ಸಮಯದಲ್ಲಾದರೂ ಬೇಗನೆ ಎದ್ದು ಕಾರ್ಯಕರ್ತರ ಕೈಗೆ ಸಿಗಬೇಕು ಎಂದು ಅಪ್ಪ ಮಗನಿಗೆ ಎಷ್ಟೇ ಕಿವಿ ಮಾತು ಹೇಳಿದರೂ ಮಗನಿಗೆ ಮಾತ್ರ ಇದನ್ನು ನಡೆಸಲು ಸಾಧ್ಯವಾಗುತ್ತಿಲ್ಲ.
ಯಾದವೀ ಕಲಹ
ಚಿಕ್ಕಪ್ಪ ಶಿವಪಾಲ್ ಯಾದವ್ ಮತ್ತು ಮುಖ್ಯಮಂತ್ರಿ ಅಖಿಲೇಶ್ ಯಾದವ್ ನಡುವೆ ನಡೆಯುತ್ತಿರುವ ಯಾದವೀ ಕಲಹದಲ್ಲಿ ತಂದೆ ಮುಲಾಯಂ ಸಿಂಗ್ ಯಾದವ್ ಪುತ್ರನ ಜೊತೆಗೆ ನಿಲ್ಲದೆ ಸಹೋದರನ ಬೆನ್ನ ಹಿಂದೆ ನಿಂತಿದ್ದು ಅಖಿಲೇಶ್ರಿಗೆ ತುಂಬಾ ಬೇಜಾರಾಗಿದೆ. ನವರಾತ್ರಿ ಹಬ್ಬದ ಸಂದರ್ಭದಲ್ಲಿ ಅಖಿಲೇಶ್ ಯಾದವ್ ತನ್ನ ಮನೆ ಕೂಡ ಬದಲಾಯಿಸಿದ್ದು, ಇನ್ನು ಮುಂದೆ ನಾನು ಅವಿಭಕ್ತ ಕುಟುಂಬದಲ್ಲಿ ಇರಲಾರೆ ಎಂದು ತಂದೆಗೆ ಸ್ಪಷ್ಟಪಡಿಸಿದ್ದಾರೆ. ಅಂದ ಹಾಗೆ ಮುಲಾಯಂ ಕುಟುಂಬದಲ್ಲಿ ನಡೆಯುತ್ತಿರುವ ಕಲಹದ ಹಿಂದೆ ಇರುವುದು ಅಮರ್ ಸಿಂಗ್ ಎನ್ನುತ್ತಾರೆ ಸಮಾಜವಾದಿಗಳು.
ಸಿಡಿ ಮಿಡಿ ನಾರಿಮನ್
87 ವರ್ಷದ ಫಾಲಿ ನಾರಿಮನ್ ಮಹದಾಯಿ ವಿಷಯವಾಗಲಿ, ಕಾವೇರಿ ಇರಲಿ, ನ್ಯಾಯಾಲಯದಲ್ಲಿ ನ್ಯಾಯಾಧೀಶರಿಗೆ ಎದುರು ಮಾತನಾಡುವ ಪರಿ ಪತ್ರಿಕೆಗಳಲ್ಲೇನೋ ಜೋರಾಗಿ ಸುದ್ದಿಯಾಗುತ್ತಿದೆ. ಆದರೆ ಇದರಿಂದ ಆಗುವ ಲಾಭವೇನು ಎನ್ನುವುದು ಅನೇಕ ರಾಜಕಾರಣಿಗಳ ಪ್ರಶ್ನೆ. ರಾಜ್ಯದ ಒಬ್ಬ ಹಿರಿಯ ರಾಜಕಾರಣಿಯಂತೂ ‘‘ಸಹಿ ಮಾಡುವ ಪೆನ್ನು ಇರುವವರ ಬಳಿ ಜಾಣತನದಿಂದ ಮಾತನಾಡಿ ಕೆಲಸ ಮಾಡಿಸಿಕೊಳ್ಳಬೇಕು. ಒದರಾಟ ಚೀರಾಟದಿಂದ ನಿಮ್ಮ ಪಾಂಡಿತ್ಯ ತೋರಿಸಬಹುದು. ಆದರೆ ಸಂಕಷ್ಟಎದುರಿಸುವವರು ರಾಜ್ಯದ ಕೋಟ್ಯಂತರ ಜನರು'' ಎಂದು ಅಸಮಾಧಾನ ತೋಡಿಕೊಳ್ಳುತ್ತಿದ್ದರು.
ಅಧ್ಯಕ್ಷ ಯಾವಾಗ?
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಕಾರ್ಯಾಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ನೇಮಕಗೊಂಡು ತಿಂಗಳುಗಳೇ ಕಳೆದರೂ ಈವರೆಗೂ ಪೂರ್ಣ ಪ್ರಮಾಣದ ಅಧ್ಯಕ್ಷ ನೇಮಕ ಆಗದೆ ಇರುವುದು ಯಾಕೆ ಎಂಬ ಪ್ರಶ್ನೆ ಕಾಂಗ್ರೆಸ್ಸಿಗರ ತಲೆ ತಿನ್ನುತ್ತಿದೆ. ಡಿ ಕೆ ಶಿವಕುಮಾರ ಇನ್ನೇನು ರಾಜ್ಯ ಅಧ್ಯಕ್ಷರಾಗಿಯೇ ಬಿಟ್ಟರು ಎನ್ನುವ ಸ್ಥಿತಿಯಿದ್ದಾಗ ಯಾವುದೋ ಕಾಣದ ಕೈಗಳು ದೆಹಲಿಯಲ್ಲಿ ನೇಮಕವನ್ನು ತಡೆ ಹಿಡಿದಿದ್ದವು. ಡಿ ಕೆ ಶಿವಕುಮಾರ ಪ್ರತಿ 15 ದಿನಕ್ಕೊಮ್ಮೆ ದೆಹಲಿಗೆ ಬಂದು ಇಲ್ಲಿನ ಕಾಂಗ್ರೆಸ್ಸಿನ ನವಗ್ರಹ ನಾಯಕರ ಮನೆಗಳಿಗೆ ಎಡತಾಕಿ ಹೋಗುತ್ತಾರೆ. ಆದರೆ ಈವರೆಗೂ ಮೋಕ್ಷ ಸಿಗುತ್ತಿಲ್ಲ.
ರಾಹುಲ್ ರಾಮಾಯಣ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೀಡಿದ ‘ರಕ್ತದ ದಲ್ಲಾಳಿಗಳು' ಎಂಬ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ಹಿರಿಯರಲ್ಲಿಯೇ ಅಸಮಾಧಾನದ ಹೊಗೆಯಾಡುತ್ತಿದೆ. ‘ಇದು ಸರಿಯಲ್ಲ. ಇದರಿಂದ ಯುವ ಜನರು ಪಕ್ಷದಿಂದ ದೂರ ಹೋಗುತ್ತಾರೆ' ಎಂದು ಅನೇಕ ನಾಯಕರು ಸೋನಿಯಾರಿಗೆ ಕಿವಿ ಊದಿ ಬಂದಿದ್ದಾರೆ. ನರೇಂದ್ರ ಮೋದಿ ವಿರುದ್ಧ ಸೋನಿಯಾ ಗಾಂಧಿ ನೀಡಿದ್ದ ‘ಮೌತ್ ಕೆ ಸೌದಾಗರ್' ಮತ್ತು ‘ಖೂನ್ ಕಿ ಖೇತಿ' ಎಂಬ ಹೇಳಿಕೆಗಳು ಮಾಡಿದ್ದ ನಷ್ಟವನ್ನು ಲೆಕ್ಕ ಹಾಕುತ್ತಿರುವ ಕಾಂಗ್ರೆಸ್ ನಾಯಕರು ಇಂಥ ಹೇಳಿಕೆಗಳಿಂದ ರಾಹುಲ್ ಬಾಬಾ ದೂರವಿರಬೇಕು. ಇವು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತವೆಯೇ ಹೊರತು ಮತ ತರುವುದಿಲ್ಲ ಎಂದು ಪತ್ರಕರ್ತರ ಎದುರು ಅಲವತ್ತುಕೊಳ್ಳುತ್ತಿರುತ್ತಾರೆ.
ವರುಣ ಚಿಕೂನ್ ಗುನ್ಯಾ
ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಿದ ನಂತರ ಬಿಜೆಪಿ ನಾಯಕ ವರುಣ್ ಗಾಂಧಿ ಅವರಿಗೆ ಚಿಕೂನ್ ಗುನ್ಯಾ ರೋಗ ಕಾಣಿಸಿಕೊಂಡಿತು. ಹೀಗಾಗಿ ಅವರು ಈಗ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ತಮ್ಮ ನಿವಾಸದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ವರುಣರಿಗೆ ಬಿಜೆಪಿ ನಾಯಕರೊಬ್ಬರು ದೂರವಾಣಿ ಕರೆ ಮಾಡಿ ಬಿಜೆಪಿ ಕಾರ್ಯಕಾರಿಣಿಗೆ ಕೇರಳಕ್ಕೆ ಬರುವುದಿಲ್ಲವೇ ಎಂದು ಕೇಳಿದರಂತೆ. ವರುಣ್ ಗಾಂಧಿ ಅವರು ತನಗೆ ಚಿಕೂನ್ ಗುನ್ಯಾ ಆಗಿರುವುದನ್ನು ಹೇಳಿದಾಗ, ಬಿಜೆಪಿ ನಾಯಕರು ‘‘ನೀವಂತೂ ಸಸ್ಯಾಹಾರಿಗಳಲ್ಲವೇ, ನಿಮಗೆ ಹೇಗೆ ಚಿಕೂನ್ ಗುನ್ಯಾ ರೋಗ ಬಂತು'' ಎಂದು ಆಶ್ಚರ್ಯ ವ್ಯಕ್ತಪಡಿಸಿದರಂತೆ. ವರುಣ್ ಗಾಂಧಿಗೆ ಚಿಕೂನ್ ಗುನ್ಯಾ ಬರುವುದು ಒಂದು ಸೊಳ್ಳೆಯಿಂದ ಎಂದು ಆ ನಾಯಕರಿಗೆ ತಿಳಿಸಿ ಹೇಳಲು ಸಾಕಾಗಿ ಹೋಯಿತು.
ಭಾವನಾಜೀವಿ ಸಿಧು
ತುಂಬಾ ಭಾವನಾತ್ಮಕವಾಗಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಹೊರ ಬಂದ ನವಜೋತ್ ಸಿಂಗ್ ಸಿಧು ಈಗ ತಮ್ಮ ಆತುರದ ತೀರ್ಮಾನಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದಾರೆ. ಸಿಧು ರಾಜೀನಾಮೆ ನೀಡಲು ಆಪ್ನಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಡುತ್ತೇವೆ ಎಂದು ಅರವಿಂದ ಕೇಜ್ರಿವಾಲ್ ಭರವಸೆ ನೀಡಿದ್ದೇ ಮುಖ್ಯ ಕಾರಣ. ಆದರೆ ಈಗ ಕೇಜ್ರಿವಾಲ್ ಕೈ ಕೊಟ್ಟಿರುವ ಕಾರಣ ಕಾಂಗ್ರೆಸ್ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಿಧು ದೆಹಲಿಯಲ್ಲಿ ನಾಯಕರ ಮನೆಗಳಿಗೆ ಎಡತಾಕುತ್ತಿದ್ದಾರೆ. ಸಿಧು ಪತ್ನಿಗೆ ಮಾತ್ರ ಟಿಕೆಟ್ ಕೊಡುವುದಾಗಿ ಕಾಂಗ್ರೆಸ್ ನಾಯಕತ್ವ ಹೇಳುತ್ತಿದ್ದು, ಸಿಧು ಪ್ರಚಾರ ಮಾತ್ರ ಮಾಡಲಿ ಎಂದು ಷರತ್ತು ಹಾಕುತ್ತಿದೆ. ಕಾಲಾಯ ತಸ್ಮೈ ನಮಃ!
(ಕೃಪೆ: ಕನ್ನಡಪ್ರಭ)
