ಆರತಕ್ಷತೆ ಸಮಾರಂಭದಲ್ಲಿ ವರನ ಕಡೆಯವರಿಗೆ ಊಟ ಸಿಗಲಿಲ್ಲ ಎಂಬ ಕಾರಣಕ್ಕೆ ಮದುವೆ ಮುರಿದು ಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ.

ಬೆಂಗಳೂರು(ಎ.10): ಆರತಕ್ಷತೆ ಸಮಾರಂಭದಲ್ಲಿ ವರನ ಕಡೆಯವರಿಗೆ ಊಟ ಸಿಗಲಿಲ್ಲ ಎಂಬ ಕಾರಣಕ್ಕೆ ಮದುವೆ ಮುರಿದು ಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ.

ಸುಬ್ರಹ್ಮಣ್ಯಪುರದ ನಾಗೇಂದ್ರಪ್ರಸಾದ್‌ ಮತ್ತು ಕನಕಪುರದ ರಾಣಿ (ಹೆಸರು ಬದಲಾಯಿಸಲಾಗಿದೆ) ಅವರ ನಿಶ್ಚಿತಾರ್ಥ ಸಮಾರಂಭ ಫೆ.19 ರಂದು ನಡೆದಿತ್ತು. ನಾಗೇಂದ್ರ ನಗರದ ಹೋಂಡಾ ಶೋ ರೂಮ್‌ನಲ್ಲಿ ಕಾರ್ಯಕಾರಿ ವ್ಯವಸ್ಥಾಪಕನಾಗಿದ್ದಾರೆ. ಗುರು ಹಿರಿಯರ ನಿಶ್ಚಯದಂತೆ ಏ.9ರಂದು ನಾಗೇಂದ್ರ ಮತ್ತು ರಾಣಿಯ ವಿವಾಹ ಸಮಾರಂಭ ವನ್ನು ಕೋಣನಕುಂಟೆಯ ಸೌದಾಮಿನಿ ಕಲ್ಯಾಣ ಮಂಟಪದಲ್ಲಿ ಮಾಡಲು ನಿರ್ಧರಿಸಲಾಗಿತ್ತು. ಶನಿವಾರ ಸಂಜೆ ಆರು ಗಂಟೆಗೆ ಆರತಕ್ಷತೆ ಸುಮಾರು 10 ಗಂಟೆಯವರೆಗೆ ನಡೆದಿತ್ತು. ಈ ವೇಳೆ ವರನ ಕಡೆಯ ಐವತ್ತು ಜನರಿಗೆ ಊಟ ದೊರೆತಿಲ್ಲ. ಈ ವಿಚಾರಕ್ಕೆ ವರನ ಕಡೆಯವರು ಜಗಳ ತೆಗೆದಿದ್ದು, ವಧುವಿನ ಕಡೆಯವರು ಎಷ್ಟುಸಮಾಧಾನಪಡಿಸಿದರೂ ಜಗಳ ನಡೆಸಿಲ್ಲ. ಜಗಳ ತೀವ್ರ ಸ್ವರೂಪ ಪಡೆಯು ತ್ತಿದ್ದನ್ನು ಕಂಡ ವರ ನಾಗೇಂದ್ರ ವೇದಿಕೆಯಲ್ಲೇ ಕೋಟ್‌ ಕಳಚಿ ಗಲಾಟೆ ಮಾಡಿದ್ದಾನೆ.

ವಧುವಿನ ಪೋಷಕರು ಸೇರಿ ಹಲವು ನಾಗೇಂದ್ರನ ಸಮಾಧಾನಪಡಿಸಿದರೂ ಜಗಳ ನಿಲ್ಲಿಸಿಲ್ಲ. ಮದುವೆ ಬೇಡ ಎಂದು ಕೂಗಾಡಿದ್ದಾನೆ. ಬಳಿಕ ಎರಡು ಕುಟುಂಬಗಳ ನಡುವೆ ಜಗಳ ನಡೆದಿದೆ. ಇದನ್ನೆಲ್ಲ ಕಂಡ ವಧು ರಾಣಿ ಮದುವೆಗೆ ಮೊದಲೇ ಹೀಗೆ ಕಿರುಕುಳ ನೀಡುತ್ತಿರುವ ವರ ಮದುವೆಯಾದ ನಂತರ ನನ್ನನ್ನು ಸರಿಯಾಗಿ ನೋಡಿಕೊಳ್ಳುವ ಭರವಸೆಯಿಲ್ಲ. ಈತನೊಂದಿಗೆ ಮದುವೆಯೇ ಬೇಡ ಎಂದು ಹೇಳಿದ್ದಾರೆ. ಇದಕ್ಕೆ ವಧುವಿನ ಪೋಷಕರು ಕೂಡ ಸಮ್ಮತಿ ಸೂಚಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕೋಣನಕುಂಟೆ ಪೊಲೀಸರು ಎರಡು ಕುಟುಂಬದವರೊಂದಿಗೆ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಕಳುಹಿಸಿದ್ದಾರೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ವಧುವಿಗೆ ಬೇರೊಬ್ಬ ಯುವಕನೊಂದಿಗೆ ಪ್ರೇಮಾಂಕುರವಾಗಿತ್ತು. ಪ್ರಿಯಕರನೊಂದಿಗೆ ಮದುವೆಯಾಗಲು ನಿರ್ಧರಿಸಿದ್ದ ಆಕೆಯ ನಿರ್ಧಾರಕ್ಕೆ ಆಕೆಯ ಕುಟುಂಬದವರೂ ಒಪ್ಪಿಕೊಂಡಿದ್ದರು. ಹೀಗಾಗಿ ಮದುವೆ ತಡೆಯಲು ಊಟದ ನೆಪ ಒಡ್ಡಿದ್ದಾರೆ ಎಂದು ವರನ ಕಡೆಯವರು ಆರೋಪಿಸಿದ್ದಾರೆ.