ಮಡಗಾಂವ್‌ :  ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಸುಪ್ರಸಿದ್ಧ ಜಲಪಾತ ‘ದೂಧಸಾಗರ’ದಲ್ಲಿ ಕೆಲವು ಅಕ್ರಮ ವೆಬ್‌ಸೈಟ್‌ಗಳು ‘ಸೆಕ್ಸ್‌ ಟೂರಿಸಂ’ ದಂಧೆ ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ‘ದೂಧಸಾಗರದಲ್ಲಿ ಕಾಲ್‌ಗಲ್‌ರ್‍ಗಳು ಲಭ್ಯರಿದ್ದಾರೆ’ ಎಂಬ ಜಾಹೀರಾತಿನೊಂದಿಗೆ ಈ ಎಸ್ಕಾರ್ಟ್‌ ವೆಬ್‌ಸೈಟ್‌ಗಳು ವೇಶ್ಯಾವಾಟಿಕೆಯನ್ನು ಪ್ರಚಾರ ಮಾಡುತ್ತಿದ್ದು, ಪ್ರವಾಸಿಗರನ್ನು ಸೆಕ್ಸ್‌ ದಂಧೆಯಲ್ಲಿ ತೊಡಗಿಕೊಳ್ಳಲು ಪ್ರಚೋದಿಸುತ್ತಿವೆ.

ದಕ್ಷಿಣ ಗೋವಾ ಜಿಲ್ಲೆ, ಧೂಧಸಾಗರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಅವ್ಯಾಹತವಾಗಿ ಅಕ್ರಮ ಮಾನವ ಸಾಗಣೆ ನಡೆಯುತ್ತಿದೆ. ಇಲ್ಲಿಯ ಗ್ರಾಮಸ್ಥರ ಮುಗ್ಧತೆಯನ್ನು ದುರುಪಯೋಗ ಮಾಡಿಕೊಳ್ಳುವ ‘ತಲೆಹಿಡುಕರು’, ಸೆಕ್ಸ್‌ ಟೂರಿಸಂಗೆ ಪ್ರಚೋದಿಸುತ್ತಿದ್ದಾರೆ. ವೇಶ್ಯೆಯರ ಸಂಗ ಬಯಸುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದ್ದು, ಅವರ ಅಗತ್ಯಗಳನ್ನು ಪೂರೈಸಲು ಪಿಂಪ್‌ಗಳು ಈ ದಂಧೆ ನಡೆಸುತ್ತಿದ್ದಾರೆ ಎಂದು ಗೋವಾ ಮಹಿಳಾ ವೇದಿಕೆ ಸಂಘಟನೆಯ ಸಂಚಾಲಕಿ ಲೋರ್ನಾ ಫರ್ನಾಂಡಿಸ್‌ ಆರೋಪಿಸಿದ್ದಾರೆ.

ಕಾಲೇಜು ಹುಡುಗಿಯರು ಹಾಗೂ ಗೃಹಿಣಿಯರನ್ನು ಕೂಡ ಹಣದಾಸೆಯ ಪ್ರಲೋಭನೆಗೆ ಒಳಪಡಿಸಿ ವೇಶ್ಯಾವಾಟಿಕೆ ದಂಧೆಗೆ ನೂಕಲಾಗುತ್ತಿದೆ. ಹೀಗಾಗಿ ಇಂಥಹ ವೆಬ್‌ಸೈಟ್‌ಗಳು ಹಾಗೂ ಪಿಂಪ್‌ಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.