ಬೆಂಗಳೂರು [ಸೆ.04]:  ವಸತಿ ಇಲಾಖೆಯಲ್ಲಿ ಹಿಂದಿನ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ನೂತನ ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಮಂಗಳವಾರ ವಿಕಾಸಸೌಧದ ತಮ್ಮ ನೂತನ ಕಚೇರಿಯಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾವುದೇ ಯೋಜನೆ ಜಾರಿಗೆ ತಂದರೂ ಅದರಿಂದ ಅಂತಿಮವಾಗಿ ಜನರಿಗೆ ಒಳ್ಳೆಯದಾಗಬೇಕು ಅಷ್ಟೆಎಂದರು. ಈ ಹಿಂದೆ ವಸತಿ ಇಲಾಖೆ ಸಚಿವನಾಗಿ ಕೆಲಸ ಮಾಡಿದ ಅನುಭವವಿದೆ. ಹೀಗಾಗಿ ಇಲಾಖೆಯ ಯೋಜನೆಗಳ ಮೂಲಕ ಇನ್ನಷ್ಟುಉತ್ತಮವಾಗಿ ಕಾರ್ಯನಿರ್ವಹಿಸುವುದಾಗಿ ಅವರು ಹೇಳಿದರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವ ದೃಷ್ಟಿಕೋನ ಇಟ್ಟುಕೊಂಡು ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡಿದ್ದಾರೆಂಬುದು ಗೊತ್ತಿಲ್ಲ. ಸಿದ್ದರಾಮಯ್ಯ ತಮ್ಮ ಅನುಭವದಿಂದ ಮಧ್ಯಂತರ ಚುನಾವಣೆ ಬರುತ್ತದೆ ಎಂದು ಹೇಳಿದ್ದಾರೆ. ಆದರೆ ತಮ್ಮ ಅನುಭವದ ಪ್ರಕಾರ ಮಧ್ಯಂತರ ಚುನಾವಣೆ ಬರುವುದಿಲ್ಲ. ರಾಜ್ಯದ ಜನರು ಸಹ ಸದ್ಯಕ್ಕೆ ಚುನಾವಣೆ ಬಯಸಿಲ್ಲ ಎಂದರು.

ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಾರೆಂದರೆ ಬರ ಹೋಗುತ್ತದೆ, ಅನಾವೃಷ್ಟಿಹೋಗಿ ಅತಿವೃಷ್ಟಿಆಗುತ್ತದೆ. ಕೇವಲ ಒಂದು ವಾರದಲ್ಲಿ ರಾಜ್ಯದಲ್ಲಿನ ಎಲ್ಲ ಜಲಾಶಯಗಳು ತುಂಬಿರುವುದು ತಮ್ಮ 45 ವರ್ಷಗಳ ರಾಜಕೀಯ ಜೀವನದಲ್ಲಿ ಇದೇ ಮೊದಲು. ಈಗ ಅತಿವೃಷ್ಟಿಯಿಂದ ಆಗಿರುವ ಹಾನಿಗಳ ಎದುರಿಸಲು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.

ತಮ್ಮ ವಿರುದ್ಧ ನಡೆಯುತ್ತಿರುವ ವಿಚಾರಣೆ ರಾಜಕೀಯ ಪ್ರೇರಿತ ಎಂಬ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಪಕ್ಷ ಕೂಡಾ ಕೇಂದ್ರದಲ್ಲಿ ಅಧಿಕಾರ ಮಾಡಿದೆ. ಇದನ್ನು ಕಾಂಗ್ರೆಸ್‌ನವರು ಅರ್ಥ ಮಾಡಿಕೊಳ್ಳಬೇಕು. ಐಟಿ, ಇ.ಡಿ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಕೇಂದ್ರ ರಾಜಕೀಯ ಮಾಡಿಲ್ಲ, ಸನ್ನಿವೇಶ ಹಾಗೂ ಸಂದರ್ಭಕ್ಕೆ ತಕ್ಕಂತೆ ನಡೆದುಕೊಂಡು ಹೋಗಬೇಕಾಗುತ್ತದೆ ಎಂದಷ್ಟೇ ಹೇಳಿದರು.