ಕಿಂಗ್ ಮೇಕರ್’ ಆಗುವ ಪ್ರಶ್ನೆಯೇ ಇಲ್ಲ | ಕುಟುಂಬದಿಂದ ಇಬ್ಬರೇ ಸ್ಪರ್ಧೆ
ಶಿವಮೊಗ್ಗ/ ದಾವಣಗೆರೆ: ಈ ಬಾರಿ ಜೆಡಿಎಸ್ ‘ಕಿಂಗ್ ಮೇಕರ್’ ಆಗುವ ಪ್ರಶ್ನೆ ಇಲ್ಲ. ನಾವೇ ‘ಕಿಂಗ್’ ಆಗುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಶಿವಮೊಗ್ಗ ತಾಲೂಕಿನ ಬುಳ್ಳಾಪುರದಲ್ಲಿ ಗ್ರಾಮ ವಾಸ್ತವ್ಯದ ವೇಳೆ ಮತ್ತು ದಾವಣಗೆರೆಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿ, ಹಿಂದಿನ ಎರಡು ಚುನಾವಣೆಗಳಲ್ಲಿ ಪಕ್ಷದಲ್ಲಾದ ಎಡವಟ್ಟುಗಳನ್ನು ಸರಿಪಡಿಸಿಕೊಳ್ಳುತ್ತೇವೆ. ನಮ್ಮ ಗುರಿಯಾದ 113 ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯುತ್ತೇವೆ. ನವೆಂಬರ್ ಅಂತ್ಯದ ವೇಳೆಗೆ ಜೆಡಿಎಸ್‌ನ 150 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.
‘ನಮ್ಮ ಕುಟುಂಬದಿಂದ ನಾನು ಮತ್ತು ಎಚ್. ಡಿ.ರೇವಣ್ಣ ಮಾತ್ರ ಸ್ಪರ್ಧಿಸುತ್ತೇವೆ. ತಮ್ಮ ಕುಟುಂಬದ ಮತ್ತೊಬ್ಬರಿಗೆ ಟಿಕೆಟ್ ಕೊಡುವುದಿಲ್ಲ. ಜೆಡಿಎಸ್ ಕುಟುಂಬ ರಾಜಕಾರಣದ ಪಕ್ಷ ಎಂಬ ಹಣೆಪಟ್ಟಿಯಿಂದ ಹೊರಬರಬೇಕು. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ತೀರ್ಮಾನಿಸಲಾಗಿದೆ. ಪ್ರಜ್ವಲ್ ರೇವಣ್ಣ ಕೂಡ ಸ್ಪರ್ಧಾ ಆಕಾಂಕ್ಷಿಯಾಗಿದ್ದಾರೆ. ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಕುಟುಂಬದಲ್ಲಾಗಲೀ ಪಕ್ಷದಲ್ಲಾಗಲೀ ಒಡಕಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಸ್ಪರ್ಧಿಸಲು ಒತ್ತಡವಿದೆ. ಚುನಾವಣಾ ಸಂದರ್ಭದಲ್ಲಿ ಆಯ್ಕೆಯನ್ನು ತಿಳಿಸುತ್ತೇನೆ ಎಂದರು.
ನನಗೆ ಲಿಂಗಾಯತ ವಿರೋಧಿ ಎಂಬ ಪಟ್ಟ ಕಟ್ಟುತ್ತಿದ್ದಾರೆ. ನಾನು ಯಾವುದೇ ಜಾತಿ ವಿರೋಧಿ ಅಲ್ಲ ಎಂದು ಸ್ಪಷ್ಟಪಡಿಸಿದರು.
