ಕಾಂಗ್ರೆಸ್ ಬೆಂಬಲಿಸಲು ಮಾತೆ ಮಹಾದೇವಿ ಕರೆ

First Published 8, Apr 2018, 12:14 PM IST
We Support Congress Says Mathe Mahadevi
Highlights

ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ರಾಜ್ಯದ ಲಿಂಗಾಯತ ಸಮುದಾಯಕ್ಕೆ ಬಹಿರಂಗ ಕರೆ ನೀಡಿದ್ದಾರೆ.

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ರಾಜ್ಯದ ಲಿಂಗಾಯತ ಸಮುದಾಯಕ್ಕೆ ಬಹಿರಂಗ ಕರೆ ನೀಡಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಲಿಂಗಾಯತ ಧರ್ಮದ ಪ್ರಭಾವಿ ಮಠಾಧೀಶರು ಕಾಂಗ್ರೆಸ್‌ಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ.

‘ನಾನು ವೈಯಕ್ತಿಕವಾಗಿ ಕಾಂಗ್ರೆಸ್ ಅನ್ನು ಬೆಂಬಲಿಸುವೆ. ಸಮುದಾಯವೂ ಸಹ ಕಾಂಗ್ರೆಸ್ ಅನ್ನೇ ಬೆಂಬಲಿಸಲಿ ಎಂದು ಕರೆ ನೀಡುತ್ತೇನೆ’ ಎಂದು ಲಿಂಗಾಯತ ಮಠಾಧೀಶರ ತುರ್ತು ಸಭೆ ಬಳಿಕ ಹೇಳಿದರು. ‘ಸಿದ್ದರಾಮಯ್ಯ ಲಿಂಗಾಯತರಾಗಿ ಹುಟ್ಟದಿದ್ದರೂ ಬಸವ ಅನುಯಾಯಿ. ಲಿಂಗಾಯತ ಅಲ್ಪಸಂಖ್ಯಾತ ಮಾನ್ಯತೆಗೆ ಶಿಫಾರಸು ಮಾಡಿದರೆ ಕಾಂಗ್ರೆಸ್ ವಿರುದ್ದ ಹೋರಾಟ ಮಾಡುವುದಾಗಿ ವೀರ ಶೈವ ಪಂಚಪೀಠಾಧ್ಯಕ್ಷರು ಎಚ್ಚರಿಕೆ ನೀಡಿದ್ದರು.

ಹೀಗಾಗಿ ಸಿದ್ದರಾಮಯ್ಯ ನಾಗಮೋಹನ್‌ದಾಸ್ ವರದಿಯನ್ನು ಅನುಷ್ಠಾನ ಗೊಳಿಸದೆ ಕಾಲಹರಣ ಮಾಡಲು ಅವಕಾಶವಿತ್ತು. ಇನ್ನೊಂದು ವಾರ ವಿಳಂಬ ಮಾಡಿದ್ದರೂ ಚುನಾವಣೆ ನೀತಿ ಸಂಹಿತೆ ಬರುವ ಸಾಧ್ಯತೆ ಇತ್ತು. ಆದರೆ, ವಿಳಂಬ ಮಾಡದೆ ಸಿದ್ದರಾಮಯ್ಯ ನಿರ್ಣಯ ಕೈಗೊಂಡು ಬಸವ ಧರ್ಮದ ಅಸ್ಮಿತೆಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ನಾವು ಅವರ ಬೆಂಬಲಕ್ಕೆ ನಿಲ್ಲಬೇಕಿದೆ’ ಎಂದು ಕರೆ ನೀಡಿದರು.

loader