ಬೆಂಗಳೂರು [ಜು.13] :  ನಮ್ಮ ಪಕ್ಷದವರಾದ ಸಚಿವ ಸಾ.ರಾ.ಮಹೇಶ್‌ ಮತ್ತು ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಅವರ ಭೇಟಿ ಬಗ್ಗೆ ನನಗೇನೂ ಗೊತ್ತಿಲ್ಲ. ಆದರೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಜೊತೆಗಿನ ಮೈತ್ರಿ ತೊರೆದು ಬಿಜೆಪಿ ಜೊತೆ ಹೋಗಿ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಸಚಿವ ಮಹೇಶ್‌ ಮತ್ತು ಬಿಜೆಪಿ ನಾಯಕರ ಭೇಟಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಅವರ ಭೇಟಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಆದರೆ, ಕಾಂಗ್ರೆಸ್‌ ಮೈತ್ರಿ ತೊರೆದು ಜೆಡಿಎಸ್‌ ಬಿಜೆಪಿ ಜೊತೆ ಹೋಗಲಿದೆ ಎಂಬುದೆಲ್ಲ ಊಹಾಪೋಹ. ಬಿಜೆಪಿ ಜೊತೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.

ಅತೃಪ್ತ ಶಾಸಕರ ವಿಚಾರ ಹಾಗೂ ಮೈತ್ರಿ ಸರ್ಕಾರದ ಸಂಖ್ಯಾಬಲ ಕುರಿತು ಪ್ರತಿಕ್ರಿಯಿಸಿ, ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಹಾಗೂ ಅನರ್ಹತೆ ವಿಚಾರಗಳು ಸ್ಪೀಕರ್‌ ಮತ್ತು ಸುಪ್ರೀಂಕೋರ್ಟ್‌ ಮುಂದಿವೆ. ಹಾಗಾಗಿ ಆ ಬಗ್ಗೆ ಏನೂ ಮಾಡನಾಡುವುದಿಲ್ಲ. ಸುಪ್ರೀಂಕೋರ್ಟ್‌ ತೀರ್ಪು ಬರುವ ತನಕ ವಿಧಾನಮಂಡಲ ಕಲಾಪವಂತೂ ಸುಗಮವಾಗಿ ನಡೆಯುತ್ತೆ. 

ಈಗಾಗಲೇ ಎಲ್ಲ ಸಚಿವರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ರಾಜೀನಾಮೆ ಅಂಗೀಕಾರ ಆಗುವ ತನಕ ನಾವು ಸಚಿವರಾಗಿ ಮುಂದುವರೆಯುತ್ತೇವೆ. ಹಾಗೆಯೇ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಆಗುವವರೆಗೂ ಅವರು ಶಾಸಕರಾಗೇ ಇರುತ್ತಾರೆ. ಸಂಖ್ಯಾಬಲ ಅಧಿವೇಶನದಲ್ಲಿ ಗೊತ್ತಾಗುತ್ತದೆ ಎಂದು ಹೇಳಿದರು.

ಕರ್ನಾಟಕದ ರಾಜಕಾರಣದ ಇತಿಹಾಸ ಇಡೀ ದೇಶದಲ್ಲೇ ಮೆಚ್ಚುಗೆ ಪಡೆದಿರುವಂತಹದ್ದು. ಆದರೆ, ಈಗ ಇಲ್ಲಿಯೂ ತಮಿಳುನಾಡು ರಾಜಕಾರಣ ಆರಂಭವಾಗಿರುವುದು ರಾಜ್ಯದ ಜನರಿಗೆ ನೋವು ತಂದಿದೆ ಎಂದರು.