Asianet Suvarna News Asianet Suvarna News

ಓದೋದು ಹೇಗಂತ ನಾವು ಕಲಿತಿದ್ದೇ ಕಾರ್ನಾಡರಿಂದ!

ಓದೋದು ಹೇಗಂತ ನಾವು ಕಲಿತಿದ್ದು ಕಾರ್ನಾಡರಿಂದ| ರೀಸರ್ಚ್ ಮಾಡಿ ನಾಟಕ ಮಾಡುವುದನ್ನು ಕಲಿಸಿದ್ದೂ ಅವರೇ| ಸರ್ಕಾರ ಕೊಟ್ಟದುಡ್ಡೆಲ್ಲ ಖರ್ಚುಮಾಡಿ ಸೀರಿಯಲ್‌ ಮಾಡಿದ್ದೂ ಅವರೊಬ್ಬರೇ

We Have Learnt How To Read from Girish Karnad Director Surendranath Shares A memory
Author
Bangalore, First Published Jun 11, 2019, 4:34 PM IST

-ಎಸ್‌ ಸುರೇಂದ್ರನಾಥ್‌, ಕತೆಗಾರ

ಗಿರೀಶ ಕಾರ್ನಾಡರ ಜೊತೆಗೆ ಮಾನಸಿಕ ಸಮಸ್ಯೆಗಳನ್ನು ಇಟ್ಟುಕೊಂಡು ‘ಅಂತರಾಳ್‌’ ಅಂತ ಒಂದು ಹಿಂದಿ ಸೀರಿಯಲ್‌ ಮಾಡಿದ್ದೆ. ಆವಾಗ ಅಸಿಸ್ಟೆಂಟ್‌ ಆಗಿ ಅವರ ಜೊತೆಗೆ ಸೇರಿಕೊಂಡೆ. ಆ ಕೆಲಸ ಮಾಡುತ್ತ ಹೆಚ್ಚು ಒಡನಾಟ ಶುರುವಾಯ್ತು. ಅದಾದ ನಂತರ ‘ಸ್ವರಾಜ್‌ನಾಮಾ’ ಅಂತ ಮತ್ತೊಂದು ಸೀರಿಯಲ್‌. ಸ್ವಾತಂತ್ರ್ಯ ಬಂದು ಐವತ್ತು ವರ್ಷವಾದ ಹಿನ್ನೆಲೆಯಲ್ಲಿ ಸರ್ಕಾರ ಕಾರ್ನಾಡರು, ಶ್ಯಾಮ್‌ ಬೆನೆಗಲ್‌ ಮೊದಲಾದವರಿಗೆ ಸೀರಿಯಲ್‌ ಮಾಡಿ ಅಂದರು. ಗಿರೀಶ್‌ ಒಬ್ಬರೇ ಅನಿಸುತ್ತೆ, ಸರ್ಕಾರ ಕೊಟ್ಟದುಡ್ಡೆಲ್ಲ ಖರ್ಚು ಮಾಡಿ ಸೀರಿಯಲ್‌ ಮಾಡಿದವರು. ಎಲ್ಲರೂ ದುಡ್ಡು ಉಳಿಸಿಕೊಂಡರೆ ಈತ ಪಾಪ ಏನನ್ನೂಉಳಿಸಿಕೊಳ್ಳಲಿಲ್ಲ. ತುಂಬ ಚೆನ್ನಾಗಿ ಬರಬೇಕು ಅನ್ನುವ ಹಠಕ್ಕೆ ಬಿದ್ದು ದುಡ್ಡೆಲ್ಲ ಸುರಿದು ಸಾಕಷ್ಟುರೀಸಚ್‌ರ್‍ ಮಾಡಿ ಸೀರಿಯಲ್‌ ಮಾಡಿದರು. ನಮ್ಮ ರೀಸಚ್‌ರ್‍ ಅಂದರೇನು, ನಾವು ಸಿದ್ಧತೆ ಎಷ್ಟಿರಬೇಕು ಅಂತ ಅವರಿಂದ ಬಹಳ ಕಲಿತೆ.

ಸೀರಿಯಲ್‌ ಇರಲಿ, ನಾಟಕ ಇರಲಿ, ಅವರ ತಯಾರಿ ಅದ್ಭುತ. 1970ರಲ್ಲಿ ಅವರು ಖರೀದಿಸಿದ ಪುಸ್ತಕ ನನಗೆ ಕೊಟ್ಟಿದ್ದರು. ಅದರಲ್ಲೇ ಅಗ್ನಿ ಮತ್ತು ಮಳೆಯ ರೆಫರೆನ್ಸ್‌ ಇತ್ತು. ಅಂದರೆ ಆ ಕಥೆ ಅದೆಷ್ಟುದಿನದಿಂದ ಅವರನ್ನು ಕಾಡಿದ್ದಿರಬೇಕು!

ಓದೋದಕ್ಕೆ ಒಂದು ವ್ಯವಸ್ಥೆ ಇದೆ ಅಂತ ಅವರಿಂದ ಕಲಿತೆ. ಅದಕ್ಕೊಂದು ಆರ್ಡರ್‌ ಇರುತ್ತೆ. ಅವರು ಪುಸ್ತಕದಲ್ಲಿ ಬೇಕಾದ ಹಾಗೆ ಗೆರೆ ಎಳೆದುಕೊಂಡಿರುತ್ತಾರೆ. ಸುಲಭವಾಗಿ ಸಿಗುವ ಹಾಗೆ ಟಿಪ್ಪಣಿಗಳನ್ನು ಮಾಡಿಕೊಂಡಿರುತ್ತಾರೆ. ಕೊನೆಯಲ್ಲಿ ಗ್ರಂಥಋುಣ ಅಂತ ಒಂದಿಷ್ಟುಪುಟಗಳಿರುತ್ತವೆ. ಅದರಲ್ಲಿ ಅವರ ಹತ್ರ ಇರುವ ಪುಸ್ತಕಗಳು ಯಾವುದು ಅಂತ ಅವರು ಟಿಕ್‌ ಮಾಡಿಕೊಳ್ಳುತ್ತಿದ್ದರು. ಅವರ ಓದು ಎಷ್ಟುಗಾಢವಾಗಿತ್ತು ಎಂದರೆ ಮಾತಾಡ್ತಾ ಮಾತಾಡ್ತಾ ನಮಗೆ ಒಂದೊಂದು ಕೃತಿಯ ಬಗ್ಗೆ ಹೇಳೋರು. ಓದೋದು ಹೇಗೆ ಅಂತ ನಾವು ಕಲಿತದ್ದು ವೈಎನ್‌ಕೆ ಹಾಗೂ ಗಿರೀಶರಿಂದ.

ಅವರಿಗೆ ಅವ್ಯವಸ್ಥೆ ಬಗ್ಗೆ ಸಿಟ್ಟು ಇರುತ್ತಿತ್ತು. ಅವರದು ನೇರ ನಡೆ. ತಪ್ಪು ಅಂತ ಕಂಡದ್ದನ್ನು ಹಾಗೇ ಹೇಳುತ್ತಿದ್ದರು. ಆರು ಗಂಟೆಗೆ ಅಲ್ಲಿರಬೇಕು ಅಂದರೆ ಅಲ್ಲಿರಬೇಕು. ಐದು ನಿಮಿಷವೂ ಆಚೀಚೆ ಆಗುವ ಹಾಗಿಲ್ಲ. ಫೋನ್‌ ಮಾಡದೇ ಮನೆಗೆ ಬಂದರೆ ಸಿಟ್ಟು ಬರ್ತಿತ್ತು. ಫೋನ್‌ ಮಾಡಿ ಮನೆಗೆ ಬರೋದಕ್ಕೆ ಏನು ಧಾಡಿ ಇವರಿಗೆ, ನನಗೇನೋ ಬರೆಯಲಿಕ್ಕಿದೆ ಅಂತ. ಯುವಕರ ಬಗ್ಗೆ ಅಷ್ಟೇ ಅಕ್ಕರೆಯೂ ಇತ್ತು. ತಮಗೆ ಕೆಳಗಿನ ವಯಸ್ಸಿನವರನ್ನು ಸಲಹೋದರಲ್ಲಿ ಅನಂತಮೂರ್ತಿ ಹಾಗೂ ಇವರನ್ನು ಬಿಟ್ಟರೆ ಮತ್ತೊಬ್ಬರಿಲ್ಲ. ಬೇಕಾದಷ್ಟುಪುಸ್ತಕಗಳನ್ನು ಕೊಡುತ್ತಿದ್ದರು ನಮ್ಮಂಥವರಿಗೆ.

ಕಾನೂರು ಹೆಗ್ಗಡತಿಯ ಸ್ಕ್ರಿಪ್ಟ್ ಮಾಡುತ್ತಿದ್ದಾಗ ಈಟಿವಿಯಿಂದ ಕರೆ ಬಂತು. ಸ್ಕಿ್ರಪ್ಟ್‌ ಕೆಲಸ ಸಂಪೂರ್ಣವಾಗಿತ್ತು. ಆಗ ಅವರ ಬಳಿ ಹೋಗಿ ವಿಷಯ ಹೇಳಿ, ಏನು ಮಾಡಲಿ ಅಂತ ಕೇಳಿದೆ. ‘ಅಲ್ಹೋಗ್ರೀ .. ಇದನ್ನು ನಾನು ಮಾಡ್ತೀನಿ’ ಅಂತ ಕಳುಹಿಸಿದರು.

ಸಿಗರೇಟು ಬಿಟ್ಟದ್ದು

ಕಾರ್ನಾಡ್‌ ಅವರು ಯಾವತ್ತೂ ಶೂಟಿಂಗ್‌ನಲ್ಲಿ ಸಿಗರೇಟು ಸೇದಲ್ಲ. ಕೇಳಿದರೆ ನನಗೆ ಹಾರ್ಟ್‌ ಸಮಸ್ಯೆ ಅನ್ನೋರು. ಮುಂಚೆ ಸಿಕ್ಕಾಪಟ್ಟೆಸೇದುತ್ತಿದ್ದರು. ಅವರು ಸಿಗರೇಟು ಬಿಟ್ಟದ್ದಕ್ಕೂ ಒಂದು ಕಾರಣ ಇದೆ. ಆಗ ಅವರು ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿದ್ದರು. ಆ ಅಪಾರ್ಟ್‌ಮೆಂಟ್‌ನ ನಾಲ್ಕು ಫೆä್ಲೕರ್‌ ಮೇಲೆ ಅಥವಾ ನಾಲ್ಕು ಫೆä್ಲೕರ್‌ ಕೆಳಗೆ ಪ್ರಸಿದ್ಧ ನಟ ಕುಲಭೂಷಣ ಕರಬಂಧ ಇದ್ದರು. ಒಂದು ಸಲ ಕುಲಭೂಷಣ ಕರಬಂಧ ಕೆಳಗೆ ಬಂದು ಗಿರೀಶ್‌ ಹತ್ರ ಕೇಳಿದ್ರಂತೆ, ‘ಅದೆಷ್ಟುಕೆಮ್ಮುತ್ತೀ ನೀನು, ಅಲ್ಲಿಗೆ ಕೇಳುತ್ತೆ’ ಅಂತ. ಅವಾಗ ಗಿರೀಶರಿಗೆ ಗೊತ್ತಾಯ್ತು, ನಾನು ಸಿಗರೇಟು ಸೇದೋದ್ರಿಂದ ಕೆಮ್ಮುತ್ತಿದ್ದೀನಿ ಅಂತ. ಆವಾಗಿನಿಂದ ಬಿಟ್ಟರು. ಆದರೆ ಕೆಮ್ಮು ಅವರನ್ನು ಸದಾ ಕಾಡುತ್ತಿತ್ತು.

ನಾನಿನ್ನು ಸಿನಿಮಾ ನಿರ್ದೇಶನ ಮಾಡಲ್ಲ ಅಂದಿದ್ರು

ಕಾನೂರು ಹೆಗ್ಗಡತಿ ಆದಮೇಲೆ ಒಮ್ಮೆ ಸಿಕ್ಕಾಗ ಒಂದು ಮಾತು ಹೇಳಿದರು, ‘ನಾನಿನ್ನು ಸಿನಿಮಾ ಮಾಡಲ್ಲ. ಆ್ಯಕ್ಟ್ ಮಾತ್ರ ಮಾಡ್ತೀನಿ’. ‘ಯಾಕೆ?’ ಅಂದೆ.‘ಇವತ್ತು ಭಾರತೀಯ ಚಿತ್ರರಂಗ ಇಂಟರ್‌ನ್ಯಾಶನಲ್‌ ಲೆವೆಲ್‌ನಲ್ಲಿ ಹೆಸರು ತೆಗೆದರೆ ಫಸ್ಟ್‌ ಶ್ಯಾಮ್‌ ಬೆನಗಲ್‌ ಅಂತಾರೆ. ಜಾನು ಬರುವಾ ಅಂತಾರೆ. ಸತ್ಯಜಿತ್‌ ರಾಯ್‌ ಅಂತಾರೆ. ನನ್ನ ಹೆಸರು ಹದಿನೆಂಟೂ ಹತ್ತೊಂಬತ್ತೋ ಆಗಿರುತ್ತೆ. ನಾಟಕದಲ್ಲಿ ಯಾರು ಅಂದರೆ ನನ್ನ ಹೆಸರು ಮೊದಲಿರುತ್ತೆ. ಅದಕ್ಕೆ ನಾನು ನಾಟಕ ಬರೀತೀನಿ. ಸಿನಿಮಾ ನನಗಾಗಲ್ಲ. ಆ್ಯಕ್ಟ್ ಮಾಡ್ತಾ ಇರತೀನಿ. ದುಡ್ಡು ಬರುತ್ತೆ ಅದರಿಂದ’ ಅಂದರು. ಆಮೇಲೆ ಬರೀ ನಟನೆ ಮಾಡುತ್ತಿದ್ದರು. ನಿರ್ದೇಶನ ಮಾಡಲೇ ಇಲ್ಲ.

ರಂಗಶಂಕರ ಅಂದರೆ ಪ್ರೀತಿ

ರಂಗಶಂಕರದ ವಿಷಯದಲ್ಲಿ ಅರುಂಧತಿ ನಾಗ್‌ ಅವರ ಮಾತಿಗೆ ಮತ್ತೊಂದು ಹೇಳುತ್ತಿರಲಿಲ್ಲ. ಎಲ್ಲಕ್ಕೂ ಒಪ್ಪುತ್ತಿದ್ದರು. ತಮ್ಮಿಂದಾದ ಸಲಹೆ ಸೂಚನೆ ನೀಡುತ್ತಿದ್ದರು. ರಂಗಶಂಕರ ಕಟ್ಟುವ ಆರಂಭದಲ್ಲಿ ಅರುಂಧತಿಯನ್ನು ಯಾಕೆ ಈ ಕೆಲಸಕ್ಕೆ ಹಾಕಿದೆ ಅಂತ ಬೈದವರು ಆಮೇಲೆ ಎಲ್ಲರಲ್ಲೂ ಹೊಗಳುತ್ತಿದ್ದರು. ರಂಗಶಂಕರಕ್ಕೆ ಬೆನ್ನೆಲುಬಾಗಿದ್ದರು.

Follow Us:
Download App:
  • android
  • ios