ಬೆಂಗಳೂರು :  ನಾವು ಬಹಳ ಉದಾರತೆಯಿಂದ ಜೆಡಿಎಸ್‌ಗಾಗಿ ದೊಡ್ಡ ತ್ಯಾಗ ಮಾಡಿದ್ದೇವೆ. ಹೀಗಾಗಿ ಕೋಮುವಾದಿ ಶಕ್ತಿಗಳನ್ನು ದೂರವಿಡಲು ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಜೆಡಿಎಸ್‌ ನಮಗೆ ಸಹಕಾರ ನೀಡಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಗೆ ಸಹಕಾರ ನೀಡುವಂತೆ ನಾವು ಬಹಳ ಗೌರವದಿಂದ ಜೆಡಿಎಸ್‌ಗೆ ಕೇಳಿದ್ದೇವೆ. ನಾವು ಉದಾರತೆಯಿಂದ ದೊಡ್ಡ ಸ್ಥಾನವನ್ನು ಜೆಡಿಎಸ್‌ಗೆ ತ್ಯಾಗ ಮಾಡಿದ್ದೇವೆ. ಇದಕ್ಕೆ ಪರ್ಯಾಯವಾಗಿ ಆರ್‌.ಆರ್‌. ನಗರದ ಹಾಲಿ ಶಾಸಕರಿಗೆ ನೆರವು ನೀಡಿ ಎಂಬ ನ್ಯಾಯಯುತ ಬೇಡಿಕೆ ಇಟ್ಟಿದ್ದೇವೆ. ಈಗಲೂ ಕಾಲ ಮಿಂಚಿಲ್ಲ, ಜೆಡಿಎಸ್‌ ನಮಗೆ ನೆರವು ನೀಡಲಿ ಎಂದು ಹೇಳಿದರು.

ಈ ಬಗ್ಗೆ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಚರ್ಚೆ ಮಾಡಿದ್ದೇವೆ. ಜೆಡಿಎಸ್‌ ಅಭ್ಯರ್ಥಿಯನ್ನು ಹಿಂಪಡೆಯುವಂತೆ ತಿಳಿಸಿದ್ದೇವೆ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕ ಮುನಿರತ್ನ ಸಾಕಷ್ಟುಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಕ್ಷೇತ್ರದ ಮತ್ತಷ್ಟುಅಭಿವೃದ್ಧಿಗೆ ಜೆಡಿಎಸ್‌ ಸಹಕಾರ ನೀಡಬೇಕು. ಒಂದು ವೇಳೆ ಅವರು ಸಹಕಾರ ನೀಡದಿದ್ದರೂ ನಮ್ಮ ಅಭ್ಯರ್ಥಿಯನ್ನು ಮುಂದುವರೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಚಿವ ಸ್ಥಾನ ಹೈಕಮಾಂಡ್‌ ನಿರ್ಧಾರ:  ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ಗೆ ಸಚಿವ ಸ್ಥಾನ ಹಂಚಿಕೆ ಮಾಡುವ ಬಗ್ಗೆ ಚರ್ಚೆಯಾಗಿದೆ. ಯಾರಾರ‍ಯರಿಗೆ ಯಾವ ಯಾವ ಜವಾಬ್ದಾರಿ ನೀಡಬೇಕು ಎಂಬುದರ ಬಗ್ಗೆ ಹೈಕಮಾಂಡ್‌ ನಿರ್ಧಾರ ಮಾಡಲಿದೆ. 

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿಯಾಗಿರುವ ಡಾ.ಜಿ. ಪರಮೇಶ್ವರ್‌ ಹಾಗೂ ಸಿದ್ದರಾಮಯ್ಯ ಅವರು ಸಚಿವರ ಕರಡು ಪಟ್ಟಿಅಂತಿಮಗೊಳಿಸಿದ್ದಾರೆ. ಶನಿವಾರ ಸಂಜೆ ದೆಹಲಿಗೆ ತೆರಳಿ ಹೈಕಮಾಂಡ್‌ ನಾಯಕರು ಅಂತಿಮವಾಗಿ ಚರ್ಚಿಸಿ ಸಚಿವ ಸ್ಥಾನದ ಪಟ್ಟಿಅಂತಿಮಗೊಳಿಸಲಿದ್ದಾರೆ ಎಂದರು.