'ನೆರೆ ರಾಜ್ಯಗಳೊಂದಿಗೆ ಮಹದಾಯಿ ನೀರು ಹಂಚಿಕೊಳ್ಳುವುದು ಅನಿವಾರ್ಯ. ಆದರೆ ಕರ್ನಾಟಕದವರು ನದಿಯನ್ನು ತಿರುಗಿಸಿಕೊಳ್ಳುವಂತಿಲ್ಲ’ ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್ ಹೇಳಿದ್ದಾರೆ.

ಬೆಂಗಳೂರು (ಜ.04): 'ನೆರೆ ರಾಜ್ಯಗಳೊಂದಿಗೆ ಮಹದಾಯಿ ನೀರು ಹಂಚಿಕೊಳ್ಳುವುದು ಅನಿವಾರ್ಯ. ಆದರೆ ಕರ್ನಾಟಕದವರು ನದಿಯನ್ನು ತಿರುಗಿಸಿಕೊಳ್ಳುವಂತಿಲ್ಲ’ ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್ ಹೇಳಿದ್ದಾರೆ.

ನೀರು ಹಂಚಿಕೆ ಸಂಬಂಧ ಕರ್ನಾಟಕದೊಂದಿಗೆ ಮಾತುಕತೆ ನಡೆ ಸುವ ಸಂಬಂಧ ದಿನಕ್ಕೊಂದು ನಿಲುವು ತಳೆಯುತ್ತಿರುವ ನಡುವೆಯೇ ಪರ‌್ರಿ ಕರ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ. ಬುಧವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಪರ್ರಿಕರ್, ‘ಮಹದಾಯಿ ನದಿ ಗೋವಾದಲ್ಲಿ 52 ಕಿ.ಮೀ., ಕರ್ನಾಟಕದಲ್ಲಿ 35 ಕಿ.ಮೀ. ಹಾಗೂ ಮಹಾರಾಷ್ಟ್ರದಲ್ಲಿ 16 ಕಿ.ಮೀ. ಹರಿಯುತ್ತದೆ. ಮೂರು ರಾಜ್ಯಗಳಲ್ಲಿ ನದಿ ಹರಿಯುತ್ತದೆ ಎಂದರೆ ನೀರಿನ ಮೇಲೆ ಈ ಎಲ್ಲ ರಾಜ್ಯಗಳೂ ಹಕ್ಕು ಮಂಡಿಸಿರುವುದು ಸಹಜ. ಹಾಗಾಗಿ ಈ ಎಲ್ಲ ರಾಜ್ಯಗಳೂ ಹಂಚಿಕೊಳ್ಳುವುದು ಅನಿವಾರ್ಯ’ ಎಂದರು.

‘ಕರ್ನಾಟಕವು ಮಹದಾಯಿ ನ್ಯಾಯಾಧಿಕರಣದ ತೀರ್ಪಿನಲ್ಲಿ ಯಾವುದೇ ಪಾಲನ್ನು ಪಡೆಯಬಾರದು ಎಂದು ನಾವು ಆಗ್ರಹಿಸಿದರೆ ಅದು ಮೂರ್ಖತನ’ ಎನ್ನುವ ಮೂಲಕ ಗೋವಾ ಮುಖ್ಯಮಂತ್ರಿಗಳು, ಗೋವಾದಲ್ಲಿ ತಮ್ಮ ವಿರುದ್ಧದ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರಿಗೆ ತಿರುಗೇಟು ನೀಡಿದರು. ‘ನೀರಿನ ಮೇಲೆ ಕರ್ನಾಟಕಕ್ಕೆ ಹಕ್ಕಿದೆಯಾದರೂ, ನದಿ ನೀರು ವಿವಾದ ಕಾಯ್ದೆಯನ್ವಯ ಕರ್ನಾಟಕವು ಮಹದಾಯಿ ನದಿಯ ಪಾತ್ರವನ್ನು ಇನ್ನೊಂದು ನದಿ (ಮಲಪ್ರಭಾ) ಪಾತ್ರಕ್ಕೆ ತಿರುಗಿಸುವಂತಿಲ್ಲ. ತಮ್ಮ ನದಿ ಪಾತ್ರ ಏನಿದೆಯೋ ಆ ಪಾತ್ರಕ್ಕೆ ಸಂಬಂಧಿಸಿದಷ್ಟು ಕುಡಿಯುವ ನೀರನ್ನು ಮಾತ್ರ ಬಳಸಿಕೊಳ್ಳಲು ಕರ್ನಾಟಕಕ್ಕೆ ಹಕ್ಕಿದೆ’ ಎಂದು ಅವರು ನುಡಿದರು. ‘ಮಹದಾಯಿ ನ್ಯಾಯಾಧಿಕರಣದ ಮುಂದೆ ಇರುವ ವಿವಾದವೇ ತಿರುವು ಯೋಜನೆಗೆ ಸಂಬಂಧಿಸಿದ್ದು. ಮಹ ದಾಯಿ ನದಿ ಪಾತ್ರದಲ್ಲಿ ನೀರಿನ ಕೊರತೆ ಇದೆಯೇ ಎಂಬುದನ್ನು ಮಾತ್ರ ನ್ಯಾಯಾಧಿಕರಣ ಪರಿಶೀಲಿಸುತ್ತದೆ. ಆದರೆ ನಾವು ಮಹದಾಯಿ ಪಾತ್ರದಲ್ಲೇ ನೀರಿನ ಕೊರತೆ ಇದೆ ಎಂಬುದನ್ನು ನ್ಯಾಯಾಧಿಕರಣದ ಮುಂದೆ ಆಧಾರ ಸಮೇತ ಇರಿಸಿದ್ದೇವೆ’ ಎಂದು ಹೇಳಿದರು.